ಬೆಂಗಳೂರು: ಕರ್ನಾಟಕದ ಲೇಖಕರು, ಸಾಹಿತಿಗಳು ಸೇರಿ ಒಟ್ಟು 15ಕ್ಕೂ ಹೆಚ್ಚು ಹಿರಿಯ ಸಾಹಿತಿಗಳಿಗೆ ಜೀವ ಬೆದರಿಕೆ (Life Threat) ಹಾಕಲಾಗಿದೆ. ಎಡಪಂಥೀಯವಾದಿಗಳು (Leftists) ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಇಸ್ರೋ ಚಂದ್ರಯಾನ – 3ಕ್ಕೆ (Chandrayaan 3) ಸಂಬಂಧಪಟ್ಟಂತೆ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆ ಮಾಡಿಸಿದ್ದನ್ನು ಟೀಕಿಸಿರುವ ನಡೆಯನ್ನು ಬಲವಾಗಿ ಖಂಡಿಸಲಾಗಿದೆ. ಅಲ್ಲದೆ, ಉಗ್ರವಾದವನ್ನು (Terrorism) ಖಂಡಿಸುವ ಧೈರ್ಯ, ತಾಕತ್ತು ನಿಮ್ಮಲ್ಲಿದೆಯೇ? ಎಂದು ಪ್ರಶ್ನೆ ಮಾಡಲಾಗಿದೆ. ಈ ಎಲ್ಲದಕ್ಕೂ ಉತ್ತರ ಕೊಡದಿದ್ದರೆ ಭೀಕರ ಸಾವಿಗೆ ತುತ್ತಾಗಲು ಸಿದ್ಧರಾಗಿ ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಚಿಂತಕರು ಜೀವ ಬೆದರಿಕೆ ಪತ್ರವನ್ನು ಹಿಡಿದು ಸರ್ಕಾರದ ಕದ ತಟ್ಟಿದ್ದಾರೆ. ಸೂಕ್ತ ಕ್ರಮ ವಹಿಸಿ ತಮ್ಮ ಜೀವಕ್ಕೆ ಭದ್ರತೆ ನೀಡಿ ಎಂದು ಗೃಹ ಸಚಿವರಿಗೆ (Home Minister) ಮನವಿ ಮಾಡಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿಗೆ ಕಾಲಾವಕಾಶವನ್ನೂ ಕೋರಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ, ರಕ್ಷಣೆ ನೀಡುವಂತೆ ಡಿಜಿಪಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ (Dr G Parameshwara), ಕೆಲವು ಸಾಹಿತಿಗಳು ಸಮಯ ಕೇಳೀದ್ದಾರೆ. ಸಮಯ ನೀಡಿ ಭೇಟಿಯಾಗುತ್ತೇನೆ. ಅವರು ಬರೆದ ಪತ್ರವನ್ನು ಡಿಜಿಪಿಗೆ ಕಳುಹಿಸಿಕೊಡುತ್ತೇನೆ. ನಾವು ಸಾಹಿತಿ ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಇನ್ನೂ ಮರೆತಿಲ್ಲ. ಅಂತಹ ಸಂದರ್ಭದಲ್ಲಿಯೇ ಥ್ರೆಟ್ ಬಂದಿದೆ ಅಂದರೆ ನಾವಿದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಕಮಿಷನರ್, ಡಿಜಿಪಿಗೆ ರಕ್ಷಣೆ ನೀಡುವಂತೆ ಸೂಚನೆ ಕೊಟ್ಟಿದ್ದೇನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಸಿಎಂ ಭೇಟಿಯಾಗುತ್ತೇವೆ: ಪ್ರೊ. ಎಸ್. ಜಿ ಸಿದ್ದರಾಮಯ್ಯ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ (Prof SG Siddaramaiah) ಅವರು, ಹಿರಿಯ ಸಾಹಿತಿಗಳಾಗಿದ್ದ ಡಾ. ಎಂ.ಎಂ. ಕಲ್ಬುರ್ಗಿ (Dr MM Kalburgi), ಗೌರಿಯವರ (Gauri Lankesh) ಹತ್ಯೆ ಯಾಕೆ ಆಯಿತು ಎಂದು ಎಲ್ಲರಿಗೂ ಗೊತ್ತಿದೆ. ಅದೇ ಮನಃಸ್ಥಿತಿಯವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ಹಿಂದಿನ ಸರ್ಕಾರ ಇದ್ದಾಗಲೂ ಪತ್ರ ಬರೆಯುತ್ತಿದ್ದರು. ಈ ಸರ್ಕಾರದ ಬಂದ ಮೇಲೂ ಅದು ಮುಂದುವರಿದಿದೆ ಎಂದರೆ, ಸರ್ಕಾರ ಎಚ್ಚೆತ್ತುಕೊಂಡಿಲ್ಲವೇನೋ? ಇದು ಬಹಳ ಸಂಕಷ್ಟದ ವಿಷಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಹಿತಿ ಮರುಳ ಸಿದ್ದಪ್ಪ ಆತಂಕ
ಶನಿವಾರ ಗೃಹ ಸಚಿವರ ಸಮಯ ಕೊಟ್ಟಿದ್ದಾರೆ. ಇದಕ್ಕೆ ಅಂತ್ಯ ಆಡಬೇಕು ಎಂದು ಮಾತನಾಡುತ್ತೇವೆ. ಹಿಂದೆ ಪೊಲೀಸ್ ರಕ್ಷಣೆ ಕೊಟ್ಟಿದ್ದರು. ಕೆಲವರು ಬೇಡ ಎಂದಿದ್ದರು, ನಾನು ಬೇಡ ಎಂದಿದ್ದೆ. ಭಯದ ವಾತಾವರಣದಲ್ಲಿ ಬದುಕುವುದು ಬೇಡ ಎಂದಿದ್ದೆ. ಸಿಎಂ ಸಿದ್ದರಾಮಯ್ಯ ಅವರನ್ನೂ ಸಹ ಭೇಟಿ ಮಾಡುತ್ತೇವೆ ಎಂದು ಸಾಹಿತಿ ಮರುಳ ಸಿದ್ದಪ್ಪ ಹೇಳಿಕೆ ನೀಡಿದ್ದಾರೆ.
ಅಸಹನೆ ಇರುವ ಜನ ಬೆದರಿಕೆ ಪತ್ರ ಬರೆಯುತ್ತಿದ್ದಾರೆ. ಅತಿ ಹೆಚ್ಚು ಪತ್ರ ಬಂಜೆಗೆರೆ ಜೈ ಪ್ರಕಾಶ್, ಕುಂವಿ ಅವರಿಗೆ ಬಂದಿವೆ. ಬರುವ ಪತ್ರಗಳು ಒಂದೇ ಮಾದರಿಯಲ್ಲಿವೆ. ಇದರ ಹಿಂದೆ ದೊಡ್ಡ ಗುಂಪು ಇದೆ. ಏನಾದರೂ ಆದ ಮೇಲೆ ಪರಿತಪಿಸುವ ಬದಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು. ಒಂದೊಂದು ಕಡೆಯಿಂದ ಪತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಹರಿಹರದಲ್ಲಿ ಒಬ್ಬರನ್ನು ಬಂಧಿಸಿದ್ದರು, ಬಳಿಕ ಬಿಟ್ಟಿದ್ದಾರೆ. ಬರೆದವರೇ ಅಪರಾಧಿ ಅಂತ ಅಲ್ಲ, ಅವನ ಮೂಲಕ ಬರೆಸುತ್ತಿದ್ದಾರೆ ಎಂದು ಮರುಳ ಸಿದ್ದಪ್ಪ ಹೇಳಿದರು.
ಕಳೆದ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬರುತ್ತಿವೆ. ಮೌಢ್ಯ, ಜಾತಿವಾದ, ಕೋಮುವಾದದ ವಿರುದ್ಧ ನಾವು ಹೇಳಿಕೆಗಳನ್ನು ಕೊಡುತ್ತಿದ್ದೇವೆ. ಗೌರಿ ಲಂಕೇಶ್, ಪ್ರೊ. ಕಲ್ಬುರ್ಗಿ ಅವರಿಗಾದಂತೆ ನಿಮಗೂ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಯಾರೋ ಒಬ್ಬರೇ ಪತ್ರಗಳನ್ನು ಸರಣಿಯಾಗಿ ಬರೆಯುತ್ತಿದ್ದಾರೆ. ಇದರ ಹಿಂದೆ ಒಂದು ಗುಂಪೇ ನಮ್ಮ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಮರುಳ ಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: Lok Sabha Election 2024 : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೀತಾ ಶಿವರಾಜಕುಮಾರ್ ಸ್ಪರ್ಧೆ?
ಸಾಹಿತಿಗಳ ಮನವಿ ಪತ್ರದಲ್ಲೇನಿದೆ?
ʼಕರ್ನಾಟಕದ 15ಕ್ಕೂ ಹೆಚ್ಚು ಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿ, ಬುದ್ಧಿಜೀವಿಗಳಿಗೆ 2022ರ ಜೂನ್‌ನಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ರೀತಿಯ ಪತ್ರಗಳಿಂದ ನಮ್ಮೆಲ್ಲರಿಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಯಾವಾಗ ಬೇಕಾದರೂ ತಮ್ಮ ಮೇಲೆ ದಾಳಿಯಾಗಬಹುದು ಎಂಬ ಆತಂಕದಲ್ಲಿಯೇ ಎಲ್ಲರೂ ತಮ್ಮ ಸೃಜನಶೀಲ ಸಮಾಜಮುಖಿ ಚಟುವಟಿಕೆಯಲ್ಲಿ ಭಾಗಿಯಾಗಬೇಕಿದೆ. ಪ್ರೊ. ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಗಳ ಹಿನ್ನೆಲೆಯ ವಾಸ್ತವ ಸಂಗತಿಗಳು ಈ ಬೆದರಿಕೆಯ ಗಂಭೀರತೆಯನ್ನು ಹೆಚ್ಚಿಸುತ್ತದೆ. ʼಪ್ರೊ ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ ವಿರಭದ್ರಪ್ಪ ಸೇರಿದಂತೆ ಒಟ್ಟು 15 ಜನ ಲೇಖಕರು ಹಾಗೂ ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಹಿರಿಯ ಸಾಹಿತಿ ಪ್ರೊ ಕೆ .ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.