ಮೈಸೂರು: ಮೈಸೂರಿನಲ್ಲಿ ಮಹಿಷ ದಸರಾ (Mahisha Dasara) ಪ್ರಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ಹಾರಾರ್ಪಣೆ, ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಅವಕಾಶ ನಿರಾಕರಿಸಿರುವ ಪೊಲೀಸರು ಇದೀಗ ಸಭಾ ಕಾರ್ಯಕ್ರಮಕ್ಕೆ ಅನುಮತಿ (Permission for Stage programme) ನೀಡಿದ್ದಾರೆ.
ಮಹಿಷ ದಸರಾದ ಮೂಲ ಕಾರ್ಯಕ್ರಮ ಪಟ್ಟಿ ಪ್ರಕಾರ, ಅಕ್ಟೋಬರ್ 13ಂದು ಬೆಳಗ್ಗೆ ಎಂಟು ಗಂಟೆಗೆ ಎಲ್ಲರೂ ತಾವರೆಕಟ್ಟೆ ಬಳಿ ಸೇರಿ, 8.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿಗೆ ಪುಷ್ಪನಮನ ಸಲ್ಲಿಕೆ, ಬಳಿಕ ಬೆಳಗ್ಗೆ 9.30ಕ್ಕೆ ತಾವರೆಕಟ್ಟೆಯಿಂದ ಪುರಭವನಕ್ಕೆ ಬೈಕ್ ರಾಲಿ, ಜಾನಪದ ಸಂಗೀತ ಮೇಳ, ಟ್ಯಾಬ್ಲೋಗಳ ಮೆರವಣಿಗೆ ನಡೆಸುವ ಕಾರ್ಯಕ್ರಮ ಇತ್ತು. ಬೆಳಗ್ಗೆ 11.00ಕ್ಕೆ ಪುರಭವನದ ಮಹಿಷಾಸುರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ, ಪುಷ್ಪಾರ್ಚನೆ, ಮೆರವಣಿಗೆ ಸೇರಿದಂತೆ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಪೊಲೀಸರು ನಿರ್ಬಂಧ ವಿಧಿಸಿ ಪುರಭವನದ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಹೀಗಾಗಿ ಪುರಭವನದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಅವರಿಂದ ಮಹಿಷ ದಸರ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೌದ್ದ ಬಿಕ್ಕು ಬೋಧಿದತ್ತ ಭಂತೇಜಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಬಳಿಕ ಸಂಜೆಯವರೆಗೆ ಹಲವು ಗೋಷ್ಠಿಗಳು ನಡೆಯಲಿವೆ.
ಪುರಭವನ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಪುರಭವನದಲ್ಲಿ ನಡೆಯುವ ಮಹಿಷ ದಸರಾ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದಾರಾದರೂ ಹಲವು ಷರತ್ತುಗಳನ್ನು ವಿಧಿಸಿದ್ದಾರೆ.
ಮೆರವಣಿಗೆ, ರ‍್ಯಾಲಿ, ಪ್ರತಿಭಟನೆ ಮಾಡಬಾರದು. ನೇರವಾಗಿ ಸಭಾ ಕಾರ್ಯಕ್ರಮ ಪ್ರಾರಂಭಿಸಬೇಕು. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಬಾರದು. ಧಾರ್ಮಿಕ ಭಾವನೆ ಕೆಣಕುವ, ಪ್ರಚೋದನೆ ನೀಡುವ ಭಾಷಣ ಮಾಡಬಾರದು ಎಂಬಿತ್ಯಾದಿ ಷರತ್ತುಗಳೊಂದಿಗೆ ಪೊಲೀಸರು ಅನುಮತಿ ನೀಡಿದ್ದಾರೆ.
ಮೈಸೂರಿನಲ್ಲಿ ಸೆಕ್ಷನ್ ಜಾರಿಗೆ ನಿರ್ಧಾರ
ಅಕ್ಟೋಬರ್ 13ರಂದು ಮಹಿಷ ದಸರಾ ಮತ್ತು ಚಾಮುಂಡಿ ಚಲೋ ಎರಡೂ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಿರುವ ಮೈಸೂರು ಪೊಲೀಸರು ಅಂದು ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲು ಮುಂದಾಗಿದ್ದಾರೆ. ಈ ವಿಚಾರವನ್ನು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ʻʻಮೈಸೂರು ದಸರಾ ವಿಶ್ವವಿಖ್ಯಾತಿ ಗಳಿಸಿದೆ. ಅಕ್ಟೋಬರ್ 15ಕ್ಕೆ ದಸರಾ ಉದ್ಘಾಟನೆ ಇದೆ. ಸಿಎಂ ಸಿದ್ದರಾಮಯ್ಯ, ನಾದಬ್ರಹ್ಮ ಹಂಸಲೇಖ, ಸಚಿವರು ಬರುತ್ತಾರೆ. ನಗರಕ್ಕೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾದರೆ ಪ್ರವಾಸಿಗರು ಬರುವುದಿಲ್ಲ. ಹೀಗಾಗಿ ಅಕ್ಟೋಬರ್ 13ರಂದು ಕಾನೂನು ಸುವ್ಯವಸ್ಥೆಗಾಗಿ ನಗರಾದ್ಯಂತ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಿದ್ದೇವೆʼʼ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಇದನ್ನೂ ಓದಿ: Mahisha Dasara : ಮಹಿಷ ದಸರಾವೂ ಇಲ್ಲ, ಚಾಮುಂಡಿ ಚಲೋವೂ ಇಲ್ಲ; ಎರಡಕ್ಕೂ ಸರ್ಕಾರ ಬ್ರೇಕ್
ʻʻ2016ರಿಂದಲೂ ಮಹಿಷ ದಸರಾ ನಡೆಯುತ್ತಿದೆ. ಬೈಕ್ ರ‍್ಯಾಲಿ ಮಾಡಲು ಅನುಮತಿ ಕೋರಿದ್ದಾರೆ. ಪ್ರತಿಯಾಗಿ ಚಾಮುಂಡಿ ಚಲೋಗೆ ಅನುಮತಿ ಕೇಳಿದ್ದಾರೆ. ಎರಡಕ್ಕೂ ಅನುಮತಿ ನಿರಾಕರಿಸಿದ್ದೇವೆ. ಜಿಲ್ಲಾಡಳಿತದೊಂದಿಗೆ ತೀರ್ಮಾನಿಸಿ ಪುರಭವನದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟಿದ್ದೇವೆ. ಕಾನೂನು ಸುವ್ಯವಸ್ಥೆಗಾಗಿ ನಗರಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದೇವೆʼʼ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು.