Site icon Vistara News

ಪತ್ರಕರ್ತರಿಗೆ ಲಂಚ ವಿವಾದ: ಕಾಂಗ್ರೆಸ್‌ ಜಂಟಿ ಆರೋಪಕ್ಕೆ BJP ಜಂಟಿ ಪ್ರತ್ಯುತ್ತರ

Congress BJP ಕಾಂಗ್ರೆಸ್‌ ಟ್ವೀಟ್‌

ಬೆಂಗಳೂರು: ರಾಜ್ಯದಲ್ಲಿ ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ದೀಪಾವಳಿ ಸ್ವೀಟ್‌ ಬಾಕ್ಸ್‌ನಲ್ಲಿ ಸಿಎಂ ಕಚೇರಿಯಿಂದ ಹಣ ನೀಡಲಾಗಿದೆ ಎಂಬ ಆರೋಪದ ಕುರಿತು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಜಟಾಪಟಿ ನಡೆದಿದೆ.

ಮೊದಲಿಗೆ ಕಾಂಗ್ರೆಸ್‌ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆ ಮಾಡಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಂದಾಯ ಸಚಿವ ಆರ್‌. ಅಶೊಕ್‌ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಸುದ್ದಿಗೋಷ್ಠಿ ನಡೆಸಿದರು.

ಸಿದ್ದರಾಮಯ್ಯ:

ಭಾರತೀಯ ಜನತಾ ಪಕ್ಷದ ಸರ್ಕಾರ ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿಸಿ ಆಪರೇಷನ್‌ ಕಮಲ ಮಾಡಿ ಅಧಿಕಾರಕ್ಕೆ ಬಂದಿದೆ, ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಮ್ಮ ಪಕ್ಷದ ಹಾಗೂ ಜೆಡಿಎಸ್‌ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ.

ಮುಖ್ಯಮಂತ್ರಿಗಳು ದೀಪಾವಳಿ ಹಬ್ಬಕ್ಕೆ ನೀಡಿರುವ ಉಡುಗೊರೆಯಲ್ಲಿ 1, 2, 3 ಲಕ್ಷ ಹಾಕಿ ಕಳಿಸಿದ್ದಾರೆ. ಇದು ಯಾವ ದುಡ್ಡು ಗೊತ್ತಾ? ಇದು ಭ್ರಷ್ಟಾಚಾರದ ಹಣ. ತಮ್ಮ ಭ್ರಷ್ಟಾಚಾರವನ್ನು ಬಯಲು ಮಾಡುತ್ತಾರೆ ಎಂದು ಲಂಚ ಕೊಟ್ಟಿರುವುದು. ಈ ಹಿಂದೆ ಪತ್ರಿಕೆಯೊಂದರಲ್ಲಿ ಪೊಲೀಸ್‌ ಇಲಾಖೆಯಲ್ಲಿ ಯಾವ ಹುದ್ದೆಯ ವರ್ಗಾವಣೆಗೆ ಎಷ್ಟು ಎಂದು ಹೊಟೇಲ್‌ ಗಳ ತಿಂಡಿ ಮೆನ್ಯುವಿನಂತೆ ಲಂಚ ನಿಗದಿ ಮಾಡಿರುವುದು ಪ್ರಕಟವಾಗಿತ್ತು, ಈ ರೀತಿ ಬರೆಯಬಾರದು ಎಂಬುದು ಅವರ ಉದ್ದೇಶ. ಆಗ ಪ್ರಕಟವಾದ ಸುದ್ದಿ ಈಗ ಎಂಟಿಬಿ ನಾಗರಾಜ್‌ ಅವರಿಂದ ಸಾಬೀತಾಗಿದೆ.

ಎಂಟಿಬಿ ನಾಗರಾಜ್‌ ಅವರು ನಂದೀಶ್‌ ಎಂಬ ಪೊಲೀಸ್‌ ಸಿಬ್ಬಂದಿಯ ಅಂತಿಮ ದರ್ಶನ ಪಡೆಯಲು ಹೋದ ಸಂದರ್ಭದಲ್ಲಿ ತನ್ನ ಪಕ್ಕದಲ್ಲಿದ್ದ ಪೊಲೀಸರೊಬ್ಬರೊಂದಿಗೆ ಮಾತನಾಡುತ್ತಾ, “70-80 ಲಕ್ಷ ಕೊಟ್ಟು ಕೆ.ಆರ್‌ ಪುರಂ ಪೊಲೀಸ್‌ ಠಾಣೆಗೆ ವರ್ಗಾವಣೆ ಪಡೆದು ಬಂದರೆ ಹೃದಯಾಘಾತ ಆಗದೆ ಇರುತ್ತದಾ?” ಎಂದು ಹೇಳಿದ್ದಾರೆ. ಇದು ಸಾಕ್ಷ್ಯ ಅಲ್ಲವಾ? ಇದಕ್ಕಿಂತ ಬೇರೆ ಸಾಕ್ಷಿ ಇನ್ನೇನು ಬೇಕು? ಈಗಿನ ಸರ್ಕಾರದಲ್ಲಿ ನಡೆಯುತ್ತಿರುವುದನ್ನು ಎಂಟಿಬಿ ಹೇಳಿದ್ದಾರೆ. ಈ ಸರ್ಕಾರ ಬಂದಮೇಲೆ ಸಂತೋಷ್‌ ಪಾಟೀಲ್‌, ನಂದೀಶ್‌ ಸತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ನೇರ ಹೊಣೆ.

ಗೃಹ ಸಚಿವರು ತನ್ನನ್ನು ತಾನು ಆರ್‌,ಎಸ್‌,ಎಸ್‌ ನಿಂದ ಬಂದವರು, ತಮ್ಮ ಇಲಾಖೆಯಲ್ಲಿ ಯಾವ ಹಗರಣ ನಡೆದಿಲ್ಲ ಎನ್ನುತ್ತಾರೆ. ಇವೆಲ್ಲ ಹಗರಣಗಳಲ್ಲವಾ? ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಲಕ್ಷಾಂತರ ರೂಪಾಯಿ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರಲ್ವಾ ಇವರಿಗೆ ಮುಖ್ಯಮಂತ್ರಿಯಾಗಿ ತನ್ನ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮೇಲೆ ಮೊಕದ್ದಮೆ ಹೂಡಬೇಕು ಮತ್ತು ಈ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.

ಡಿ.ಕೆ. ಶಿವಕುಮಾರ್:

ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ಆವರಿಸಿದೆ. ರಸ್ತೆಗಳ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿರುವುದರಿಂದ ರಸ್ತೆಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ರಸ್ತೆಗಳು ಗುಂಡಿ ಬಿದ್ದು, ಅಪಾರ ಸಾವು-ನೋವು ಸಂಭವಿಸುತ್ತಿವೆ. ಇದು ಸರ್ಕಾರದ ಕೊಲೆಯಾಗಿದೆ. ವಾಹನ ಸವಾರರರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಇವೆಲ್ಲವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಮಾಧ್ಯಮಗಳು ಈ ವಿಚಾರಗಳನ್ನು ಬಯಲಿಗೆ ತರುತ್ತಿರುವುದು ಸ್ವಾಗತಾರ್ಹ. ಈ ಸರ್ಕಾರಕ್ಕೆ ಜನರ ಜೀವಕ್ಕಿಂತ ಹಣ ಮಾಡುವುದೇ ಆದ್ಯತೆಯಾಗಿದೆ.

ಆರ್‌. ಅಶೋಕ್‌:

ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರನ್ನು ಗುರಿಯಾಗಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಪರೋಕ್ಷವಾಗಿ ಬೆದರಿಕೆ ಹಾಕುತ್ತಿದೆ. ಇಂದಿರಾ ಗಾಂಧಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಪ್ರಭಾವಶಾಲಿ ಎನಿಸಿದ್ದ ಮುದ್ರಣ ಮಾಧ್ಯಮವನ್ನು ಗುರಿಯಾಗಿ ಇಟ್ಟುಕೊಂಡಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇಡೀ ಪತ್ರಕರ್ತರನ್ನು ಜೈಲಿಗೆ ಅಟ್ಟಿದ ಕಳಂಕ ಕಾಂಗ್ರೆಸ್ ಮೇಲಿದೆ. ಇವತ್ತು ಅದೇ ಧಾಟಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಹೊರಟಿರುವುದು ಹೇಡಿತನದ ಪರಮಾವಧಿ.

ಇದು ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್‍ನ ಸಂಚು ಎಂದು ಆಕ್ಷೇಪಿಸಿದ ಅಶೋಕ್‌, ಒಂದು ರೀತಿ ಬ್ಲ್ಯಾಕ್‍ಮೈಲ್ ನಡೆದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಕಾರ್ಯಕ್ಕಾಗಿ ರಷ್ಯಾವೂ ಹೊಗಳಿದೆ. ಪಾಕಿಸ್ತಾನ, ಚೀನಾಗೆ ಸರಿಯಾದ ಬುದ್ಧಿ ಕಲಿಸಿ ವಿಶ್ವ ನಾಯಕರಾಗಿದ್ದಾರೆ. ಅಮೆರಿಕದ ಪ್ರಧಾನಿಯೂ ಹೊಗಳಿದ್ದಾರೆ. ಇಂಗ್ಲೆಂಡ್ ಪ್ರಧಾನಿಯೂ ಉತ್ತಮ ಬಾಂಧವ್ಯ ಹೊಂದುವುದಾಗಿ ತಿಳಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಮೋದಿಯವರ ಕಾರ್ಯಕ್ರಮಗಳು ದಿನನಿತ್ಯ ಹೆಚ್ಚಾಗಿ ಪ್ರಸಾರ ಆಗುತ್ತಿರುವ ಕೊರಗು ಕೂಡ ಇದಕ್ಕೆ ಕಾರಣ.

ಮುಸ್ಲಿಂ ಪತ್ರಕರ್ತರಿಗೆ ಮಾತ್ರ ಲ್ಯಾಪ್ ಟಾಪ್ ಗಿಫ್ಟ್ ಕೊಡಬೇಕೆಂದು ಸರ್ಕಾರದ ಆದೇಶ ಹೊರಡಿಸಿದ್ದರು. ಕಾಂಗ್ರೆಸ್‍ನವರ ಕಣ್ಣಿಗೆ, ದಿವ್ಯದೃಷ್ಟಿಗೆ ಬೇರೆ ಪತ್ರಕರ್ತರು ಕಾಣಲಿಲ್ಲವೇ? ಲಿಂಗಾಯತ- ವೀರಶೈವರನ್ನು ಒಡೆಯಲು ಮುಂದಾಗಿದ್ದ ಸಿದ್ದರಾಮಯ್ಯರವರು ಪತ್ರಕರ್ತರಲ್ಲೂ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಎಂದು ಭೇದಭಾವ ತೋರಿಸುವ ಮೂಲಕ ಪತ್ರಕರ್ತರನ್ನು ದಾಳವಾಗಿ ಮಾಡಿದ್ದರು.

ಸಿದ್ದರಾಮಯ್ಯರಿಗೆ ಒಡೆಯುವ ಅಂಟು ಬಂದಿದೆ. ಕಾಂಗ್ರೆಸ್‍ನವರು ಒಡೆದು ಆಳುವ ನೀತಿಯನ್ನು ಪತ್ರಕರ್ತರ ಮೇಲೆ ಪ್ರಯೋಗ ಮಾಡಿದ್ದರು. ಇದೊಂದು ಹೀನ ಕಾರ್ಯ ಎಂದು ಆಕ್ಷೇಪಿಸಿದರು. ಉರ್ದು ಪತ್ರಿಕೆಗೆ ಮಾತ್ರ 61 ಲಕ್ಷದ ಜಾಹೀರಾತು ಕೊಡಲು ಸೂಚಿಸಿದ್ದರು ಎಂದು ಆದೇಶಪತ್ರವನ್ನು ಅಶೋಕ್‌ ಪ್ರದರ್ಶಿಸಿದರು.
ಮಾಧ್ಯಮವನ್ನು ಒಡೆಯುವ ಪ್ರಯತ್ನ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿಗರಿಗೆ ರಕ್ತಗತವಾಗಿದೆ. ಐ ಫೋನ್ ಲಂಚ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಲಂಚ ಕೊಡುವ ಪ್ರವೃತ್ತಿ ಬಿಡುವಂತೆ ಆಗ ಕುಮಾರಸ್ವಾಮಿ ಅವರು ಸಲಹೆ ನೀಡಿದ್ದರು.

ಸಿಎಂ ಕಚೇರಿಯಿಂದ ಹಣ ಕೊಟ್ಟ ಬಗ್ಗೆ ಲೋಕಾಯುಕ್ತರಿಗೆ ದೂರು ಕೊಟ್ಟಿದ್ದು ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಕ್ಕೆ ಬರುವ ಮೊದಲೇ ಕಾಂಗ್ರೆಸ್ಸಿಗರು ನ್ಯಾಯಾಧೀಶರಾಗಿ ಪತ್ರಕರ್ತರ ವಿರುದ್ಧ ತೀರ್ಪು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ತೀರ್ಪು ಎಷ್ಟು ಸರಿ? ಕಾಂಗ್ರೆಸ್ ಮುಖಂಡರು ಪತ್ರಕರ್ತರ ಮತ್ತು ಜನರ ಕ್ಷಮಾಪಣೆ ಕೇಳಬೇಕು. ಪತ್ರಕರ್ತರ ವಿರುದ್ಧ ಕಳಂಕ ತಂದ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು.

ಡಾ. ಕೆ. ಸುಧಾಕರ್

ಇವತ್ತು ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಲ್‍ಪಿ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎರಡು ವಿಷಯಗಳ ಕುರಿತು ಆಪಾದನೆ ಮಾಡಿದ್ದಾರೆ. ದೀಪಾವಳಿ ಹಬ್ಬದ ಉಡುಗೊರೆ ಕುರಿತು ಉಲ್ಲೇಖಿಸಿ, ಸಿಎಂ ಅವರನ್ನು ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಮಾಧ್ಯಮದವರ ವೃತ್ತಿ ಬದುಕಿಗೆ ಇರುಸು ಮುರುಸುಂಟು ಮಾಡುವ ಕೆಲಸ ಮಾಡಿದ್ದಾರೆ.

ಹಬ್ಬದ ವೇಳೆ ಉಡುಗೊರೆ ಕೊಡುವುದು, ಸಿಹಿ ಹಂಚುವುದು ಹಿಂದೂ ಧರ್ಮದ ಪರಂಪರೆ ಮತ್ತು ಇತಿಹಾಸ. ಇವರಿಗೆ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಇಷ್ಟು ದ್ವೇಷ ಯಾಕೆ? ಹಣ ಕೊಟ್ಟದ್ದು ನಿಜವೇ ಆಗಿದ್ದರೆ ಇವರಿಗೆ ದೂರು ಕೊಟ್ಟವರು ಯಾರೆಂದು ಹೇಳಲಿ. ಸಾಕ್ಷಿ ಇಲ್ಲದೆ ಆರೋಪ ಮಾಡುತ್ತಿದ್ದಾರೆ.

ಉಡುಗೊರೆ ಕೊಡುವುದು ತಪ್ಪಾದರೆ ಪಡೆಯುವುದೂ ತಪ್ಪಲ್ಲವೇ? ಕಾಂಗ್ರೆಸ್‍ನವರು ತಮ್ಮ ಅಧಿಕಾರದ ಅವಧಿಯಲ್ಲಿ ಉಡುಗೊರೆ ಕೊಟ್ಟದ್ದಲ್ಲದೇ ಉಡುಗೊರೆ ಪಡೆದಿದ್ದರು. ಅದು ಜಗಜ್ಜಾಹೀರಾಗಿದೆ. ಇಂಥ ವಿಷಯಗಳಲ್ಲಿ ಕ್ಷುಲ್ಲಕ ರಾಜಕೀಯ ಯಾಕೆ? ಕಾಂಗ್ರೆಸ್ಸಿಗರಿಗೆ ನಮ್ಮ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ಅಹಿಂದ ಸಮುದಾಯದಲ್ಲಿ ಅತ್ಯಂತ ಎತ್ತರದ ನಾಯಕರಾಗಿ ನಮ್ಮ ಪ್ರಧಾನಿ ಮೋದಿಜಿ ಅವರು ಇದ್ದಾರೆ. ಕಲ್ಬುರ್ಗಿಯ ಒಬಿಸಿ ಸಮಾವೇಶ ಲಕ್ಷಾಂತರ ಜನ ಸೇರಿ ಅತ್ಯಂತ ಯಶಸ್ವಿ ಎನಿಸಿದೆ. ಹಾಗಾಗಿ ಅದನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ.

ಸಚಿವ ಸಿ. ಸಿ. ಪಾಟೀಲ್

ಕೆಲವು ಕಾಂಗ್ರೆಸ್ ಮುಖಂಡರು ಕರ್ನಾಟಕದ ಪತ್ರಕರ್ತರ ನಡೆಯ ಬಗ್ಗೆ ತೀರಾ ಸಣ್ಣತನದಿಂದ ಟೀಕಿಸುತ್ತಾ ತಾವು ಸತ್ಯ ಹರಿಶ್ಚಂದ್ರನಂತೆ ಪೋಸು ಕೊಡುತ್ತಿರುವುದು ವಿಚಿತ್ರ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕಾಂಗ್ರೆಸ್‌ ನಾಯಕರು ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರಕ್ಕಾಗಿ ದುರುಪಯೋಗಪಡಿಸಿಕೊಂಡು ವಿಚಾರಣೆ ಎದುರಿಸುತ್ತಾ ಜಾಮೀನಿನ ಮೇಲೆ ಇದ್ದಾರೆ. ಇಂತಹವರು ಈಗ ಪತ್ರಿಕೋದ್ಯಮದ ನೀತಿ ಪಾಠ ಹೇಳುವುದನ್ನು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ ಎಂದು ಸಚಿವ ಸಿ.ಸಿ.ಪಾಟೀಲ್‌ ಟೀಕಿಸಿದ್ದಾರೆ.

ಪತ್ರಕರ್ತರು ವಿವೇಚನಾಶೀಲರಾಗಿದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದ ನೀತಿ ಪಾಠ ಹೇಳಿಸಿಕೊಳ್ಳುವಂತಹ ದು:ಸ್ಥಿತಿ ಬಂದಿಲ್ಲ. ಬೇರೆ ಏನೂ ವಿವಾದ ಸೃಷ್ಟಿಸಲು ಸಿಗದಿದ್ದಾಗ ದೀಪಾವಳಿ ಉಡುಗೊರೆ ನೆಪದಲ್ಲಿ ಮೊಸರಲ್ಲೂ ಕಲ್ಲು ಹುಡುಕುವುದು ಕಾಂಗ್ರೆಸ್‌ನ ಹತಾಶ ಸ್ಥಿತಿಗೆ ನಿದರ್ಶನವಾಗಿದೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ | BJP OBC Convention | ಹಿಂದುಳಿದವರ ಮತ ಪಡೆದು ರಾಜ್ಯವೇ ಹಿಂದುಳಿಯುವಂತೆ ಮಾಡಿದ ಕಾಂಗ್ರೆಸ್: ಸಿಎಂ ಬೊಮ್ಮಾಯಿ

Exit mobile version