ಬೆಂಗಳೂರು: ರಾಜ್ಯ ಸರ್ಕಾರ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿ ಅದರ ಕ್ರೆಡಿಟ್ ಪಡೆದುಕೊಳ್ಳಲು ಮುಂದಾದ ಬೆನ್ನಿಗೇ ಜೆಡಿಎಸ್-ಕಾಂಗ್ರೆಸ್ ಇದು ತಮ್ಮದೇ ಕೊಡುಗೆ ಎಂದು ಹೇಳಿಕೊಳ್ಳುತ್ತಿವೆ.
ನ್ಯಾ. ನಾಗಮೋಹನ ದಾಸ್ ಸಮಿತಿ ಶಿಫಾರಸಿನಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲು ಅಕ್ಟೋಬರ್ 8ರಂದು ರಾಜ್ಯ ಸಚಿವ ಸಂಪುಟ ನಿರ್ಧಾರ ಮಾಡಿದೆ.
ಈ ಕುರಿತು ರಾಜ್ಯದೆಲ್ಲೆಡೆ ಬಿಜೆಪಿ ವತಿಯಿಂದ ಸಂಭ್ರಮಾಚರಣೆಯನ್ನೂ ನಡೆಸಲಾಯಿತು. ಬಿಜೆಪಿ ನಾಯಕರು ಕಾರ್ಯಕ್ರಮಗಳಲ್ಲಿ ಮಾತನಾಡುವಾಗ, ಮೀಸಲಾತಿ ಹೆಚ್ಚಳ ಮಾಡಿದ್ದು ತಾವೇ, ತಮಗೇ ಶ್ರೇಯ ಸಲ್ಲಬೇಕು ಎಂಬಂತೆ ಮಾತನಾಡುತ್ತಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 24ರಷ್ಟಿರುವ ಬೃಹತ್ ಸಮುದಾಯದ ಮತಗಳು ಬಿಜೆಪಿ ಕಡೆಗೆ ವಾಲಿದೆ ಏನು ಗತಿ ಎಂದುಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್, ಮೀಸಲಾತಿ ಹೆಚ್ಚಳ ತಮ್ಮದೇ ಯೋಜನೆ ಎಂದು ಹೇಳಿಕೊಳ್ಳುತ್ತಿವೆ.
ದೇವೇಗೌಡರು ಕೊಟ್ಟ ಕೊಡುಗೆ ಬಗ್ಗೆ ಹೇಳಲಿ ಎಂದ ಕುಮಾರಸ್ವಾಮಿ
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳಕ್ಕಾಗಿ ಸಮ್ಮಿಶ್ರ ಸರ್ಕಾರದಲ್ಲಿ ತಾವು ನ್ಯಾ. ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದೆವು ಎಂದು ಕಾಂಗ್ರೆಸ್ ನಾಯಕರು ಈಗ ಹೇಳುತ್ತಾರೆ. ಬಿಜೆಪಿಯವರು, ತಾವ ವರದಿಯನ್ನು ಜಾರಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಅವರಂತೂ ಎದೆ ಬಡಿದುಕೊಂಡು ಮಾತನಾಡುತ್ತಿದ್ದರು. ಒಬ್ಬ ಶಾಸಕರಂತೂ ನಾವು ಬದುಕಿರುವವರೆಗೂ ಬಿಜೆಪಿಗೆ ಗುಲಾಮರಾಗಿ ಇರುತ್ತೇವೆ ಎಂದು ಘೋಷಣೆ ಮಾಡಿದರು ಎಂದು ರಾಜುಗೌಡ ಕುರಿತು ಪ್ರಸ್ತಾಪಿಸಿದರು. ಇದರಿಂದ ಆ ಸಮಾಜವನ್ನು ಇನ್ನೂ ಗುಲಾಮಗಿರಿಯಲ್ಲೇ ಇಡುವ ಅವರ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಕುಮಾರಸ್ವಾಮಿ ವಾಘ್ದಾಳಿ ನಡೆಸಿದರು.
ಇದೆಲ್ಲಾ ದೇವೇಗೌಡರು ಕೊಟ್ಟಿರುವ ಕೊಡುಗೆ. ಇದನ್ನು ಆ ಸಮುದಾಯ ನೆನಪಿಸಿಕೊಳ್ಳಬೇಕು.
ಶಾಸಕರಾಗಲು ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ನಾಗಮೊಹನ್ ದಾಸ್ ಅವರ ವರದಿ ಯಾವ ವರ್ಷದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಯಿತು? ಸಲ್ಲಿಕೆ ಮಾಡಿದ್ದಾಗಿನಿಂದ ಆ ವರದಿಯನ್ನು ಏನು ಮಾಡಿದ್ದರು? ಒಂದೂವರೆ ವರ್ಷ ಯಾಕೆ ವರದಿಯನ್ನು ಜಾರಿ ಮಾಡದೆ ಸ್ಟೊರೇಜ್‌ನಲ್ಲಿ ಇಟ್ಟಿದ್ದರು?. ಆಗಲೇ ವರದಿ ಕೊಡಬಹುದಿತ್ತಲ್ಲವೇ? ಈಗ ಚುನಾವಣೆ ಹತ್ತಿರದಲ್ಲಿದೆ. ಚುನಾವಣೆಗೆ ಗಿಮಿಕ್ ಮಾಡಿಕೊಂಡು ಹೋಗ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್. ವಿಶ್ವನಾಥ್ ಹೇಳಿಕೆ ಗಮನಿಸಿದ್ದೇನೆ. ನಿರಂತರವಾಗಿ ಮೀಸಲು ಸೌಲಭ್ಯ ಪಡೆದವರು ಯಾರು ಎಂಬ ಬಗ್ಗೆ ಅವರು ಹೇಳಿರುವುದು ಸರಿ ಇದೆ. ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನಕ್ಕೆ ಅನುಗುಣವಾಗಿ ಎಷ್ಟೋ ಜನರಿಗೆ ಮೀಸಲಾತಿ ತಲುಪುತ್ತಿಲ್ಲ. ಅವರಿಗೆ ಮೀಸಲಾತಿ ತಲುಪಬೇಕು. ಮೀಸಲಾತಿಯಿಂದ ಹೊರಗಡೆ ಇರುವವರಿಗೆ ಮೀಸಲಾತಿ ತಲುಪಬೇಕು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಎಸ್‌ಸಿಎಸ್‌ಟಿಗಳಗೆ ದ್ರೋಹ ಮಾಡಿದ ಎಂದ ರಾಹುಲ್
ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ಶನಿವಾರ ಆಯೋಜನೆ ಮಾಡಿದ್ದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ, ರಾಜ್ಯ ಸರ್ಕಾರ ಎಸ್‌ಸಿಎಸ್‌ಟಿ ವಿರೋಧಿ ಎಂದರು.
ಈ ಸರ್ಕಾರ ಎಸ್‌ಸಿಎಸ್‌ಟಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಎಸ್‌ಸಿಎಸ್‌ಟಿ ವಿರುದ್ಧ ದೌರ್ಜನ್ಯ 50% ಹೆಚ್ಚಳವಾಗಿದೆ. ಸಮುದಾಯದ ಅಭಿವೃದ್ಧಿಗೆ ನೀಡಬೇಕಾಗಿದ್ದ 8 ಸಾವಿರ ಕೋಟಿ ರೂ. ಬೇರೆ ಕೆಲಸಕ್ಕೆ ವರ್ಗಾವಣೆ ಮಾಡಲಾಗಿದೆ ಎಂದರು.
ನ್ಯಾ. ನಾಗಮೋಹನ ದಾಸ್ ಸಮಿತಿ ರಚನೆ ಕುರಿತು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಸಮಿತಿ ರಚನೆ ಮಾಡಿದ್ದೆವು. ಈ ಸಮಿತಿಯು ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಎಸ್‌ಸಿ ಮೀಸಲಾತಿಯನ್ನು ಶೇ.15-17ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ. 3-7ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಿತ್ತು. ಆದರೆ ಈ ಸರ್ಕಾರ ಜಾರಿಗೆ ವಿಳಂಬ ಮಾಡುತ್ತಿದೆ. ಅನುಷ್ಠಾನಕ್ಕೆ ಯಾವುದೇ ನೆಪ ಹೇಳದೆ ತಕ್ಷಣವೇ ಜಾರಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇದನ್ನೂ ಓದಿ } ಜನಸಂಕಲ್ಪ ಯಾತ್ರೆ | ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸಿನದ್ದು: ಸಿಎಂ ಬಸವರಾಜ ಬೊಮ್ಮಾಯಿ