Site icon Vistara News

ಬೆಂಗಳೂರು ರೌಂಡ್ಸ್‌ ಬರುವಿರಾ ಪ್ರಧಾನಿಯವರೇ?: ಕಾಂಗ್ರೆಸ್‌ನಿಂದ ಒಂದು ಡಜನ್‌ ಪ್ರಶ್ನೆ

congress asks 12 questions to prime minister modi

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸಮರವನ್ನು ತೀವ್ರಗೊಳಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸುವ ಎರಡು ದಿನ ಮೊದಲು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. 40% ಕಮಿಷನ್‌, ಪಿಎಸ್‌ಐ ನೇಂಕಾತಿ ಅಕ್ರಮ, ರೈತರ ಆದಾಯ, ಹಿಜಾಬ್‌, ಆಜಾನ್‌, ಕೋವಿಡ್‌ ನಿರ್ವಹಣೆ, ಮೇಕೆದಾಟು ಸೇರಿ ಒಟ್ಟು 12 ಪ್ರಶ್ನೆಗಳನ್ನು ರಾಮಲಿಂಗಾರೆಡ್ಡಿ ಮುಂದಿಟ್ಟಿದ್ದಾರೆ. ಜತೆಗೆ, ಇಡೀ ಬೆಂಗಳೂರು ಒಂದು ರೌಂಡ್ ಬರುವ ಕಾರ್ಯಕ್ರಮ ಹಾಕಿಕೊಳ್ಳಿ ಆಗ ಎಲ್ಲ ರಸ್ತೆಗಳೂ ದುರಸ್ತಿ ಆಗುತ್ತವೆ. ನಗರದ ಜನ ನಿಮಗೆ ಅಭಾರಿ ಆಗಿರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ: ಡಿಕೆಶಿ, ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ

ಒಂದು ಡಜನ್‌ ಪ್ರಶ್ನೆಗಳು

೧. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ, ಅಂದರೆ 2018 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ಸರ್ಕಾರ 10 % ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದಿರಿ. ಈಗ ರಾಜ್ಯದ ನಿಮ್ಮ ಸರ್ಕಾರ 40% ಸರ್ಕಾರ ಎಂದು ಚರ್ಚೆ ನಡೆದಿದ್ದು, ಈ ಅಮೋಘ ಸಾಧನೆ ಬಗ್ಗೆ ಅಭಿಪ್ರಾಯವೇನು?

೨. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಆತ್ಮಹತೆಗೂ ಮುನ್ನ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ 40% ಕಮಿಷನ್ ಕಿರುಕುಳ ಕುರಿತು ನಿಮಗೆ ಪತ್ರ ಬರೆದರೂ ನೀವು ಮೌನಿ ಬಾಬಾ ಆಗಿದ್ದು ಯಾಕೆ…?

೩. ಪಿಎಸ್‌ಐ, ಶಿಕ್ಷಕರು, ಆರೋಗ್ಯ, ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ.., ಆದರೂ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು, ಪ್ರಕರಣ ದಾಖಲಿಸುವುದು ಮಾತ್ರವೇ?

೪. 2022ರ ವೇಳೆಗೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ನೀವು ಹೇಳಿದ ಮಾತು ನೆನಪಿದೆಯೇ? ರೈತರ ಆದಾಯದ ಬದಲು ರಸಗೊಬ್ಬರ, ಯಂತ್ರೋಪಕರಣಗಳ ಬಳಕೆ ವೆಚ್ಚ ಡಬಲ್ ಆಗಿರುವುದರ ಬಗ್ಗೆ ಎನು ಹೇಳುತ್ತೀರಿ ಮೋದಿಯವರೇ?

೫ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನೀವು ಹೇಳಿದಿರಿ, ಆದರೆ ರಾಜ್ಯದಲ್ಲಿ ಹಿಜಾಬ್, ಆಜಾನ್, ಆರ್ಥಿಕ ಜಿಹಾದ್ ಹೆಸರಿನಲ್ಲಿ ಅಲ್ಪ ಸಂಖ್ಯಾತರ ಮೇಲೆ ಕೋಮು ದೌರ್ಜನ್ಯ ನಡೆಯುತ್ತಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು?

೬. ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ತೇಲಿಸಲಿದೆ ಎಂದು ಬೀಗದಿರಿ ಅಲ್ಲವೇ? ರಾಜ್ಯದಲ್ಲಿ ನಿಮ್ಮ ಸರ್ಕಾರದ 5 ಸಾಧನೆ ಪಟ್ಟಿ ನೀಡುವಿರಾ?

೭. ಕೋವಿಡ್ ಸಮಯದಲ್ಲಿ ನೀವು ಹೇಳಿದಂತೆ ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು, ದೀಪ ಹಚ್ಚಿದೆವು, ಆದರೆ ತುರ್ತು ಸಮಯದಲ್ಲಿ ಆಕ್ಸಿಜನ್ ಪೂರೈಸದೇ ರಾಜ್ಯದ ಚಾಮರಾಜನಗರದಲ್ಲಿ 34 ಮಂದಿ ಪ್ರಾಣ ನುಂಗಿದ್ದು ಯಾಕೆ? ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತೆ ಇಲ್ಲ ಎಂದು ನಿಮಗೆ ಸುಳ್ಳು ವರದಿ ಕೊಟ್ಟ ನಿಮ್ಮ ಸರ್ಕಾರದ ವಿರುದ್ಧ ಕ್ರಮ ಇಲ್ಲ ಯಾಕೆ? ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗಿದ್ದರೂ 40 ಸಾವಿರ ಎಂದು ಸುಳ್ಳು ಲೆಕ್ಕ ತೋರಿಸಿದ್ದು ಯಾಕೆ?

೮. ಮತಬ್ಯಾಂಕ್ ಸೆಳೆಯಲು ಬಸವಣ್ಣ, ಅಂಬೇಡ್ಕರ್, ಬುದ್ಧ, ಭಗತ್ ಸಿಂಗ್, ನಾರಾಯಣ ಗುರು, ಕನಕದಾಸರು. ಮಹಾವೀರರು ಸೇರಿದಂತೆ ಮಹನೀಯರ ಜಪ ಮಾಡುತ್ತೀರಿ. ಆದರೆ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಈ ಮಹನೀಯರಿಗೆ ಅವಮಾನ ಮಾಡಿದ್ದು, ಈ ಬಗ್ಗೆ ನಿಮ್ಮ ಸಬುಬೂ ಏನು?

೯. ಮೇಕೆದಾಟು ಹಾಗೂ ಮಹದಾಯಿ ನಮ್ಮ ರಾಜ್ಯಕ್ಕೆ ಅಗತ್ಯವಿರುವ ಎರಡು ಪ್ರಮುಖ ನೀರಾವರಿ ಯೋಜನೆಗಳು. ಈ ಯೋಜನೆಗೆ ಯಾವಾಗ ಅನುಮತಿ ಕೊಡಿಸುವಿರಿ?

10, ಕಾಂಗ್ರೆಸ್‌ ಪ್ರತಿಭಟನೆಯಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ನಿಮ್ಮ ಸಚಿವ ಸುಧಾಕರ ಹೇಳುತ್ತಿದ್ದಾರೆ. ನೀವು ಬೆಂಗಳೂರಿನಲ್ಲಿ 12 ಕಿ.ಮೀ ಯಾತ್ರೆ ಮಾಡುತ್ತಿದ್ದೀರಿ, 50 ಸಾವಿರ ಜನರನ್ನು ಸೇರಿಸಿ ಸಾರ್ವಜನಿಕ ಸಭೆ ಮಾಡುತ್ತಿದ್ದೀರಿ, 12 ಸಾವಿರಕ್ಕೂ ಹೆಚ್ಚು ಜನರ ಜತೆ ಮೈಸೂರಿನಲ್ಲಿ ಯೋಗ ಮಾಡಲಿದ್ದೀರಿ. ನಿಮ್ಮ ಈ ಕಾರ್ಯಕ್ರಮಗಳಿಂದ ಕೊರೋನಾ ಹರಡುವುದಿಲ್ಲವೇ?

೧೧. ಕಳೆದ ಎಂಟು ವರ್ಷದಿಂದ ರಾಜ್ಯದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಮೂಲಕ ₹19 ಲಕ್ಷ ಕೋಟಿ ಸಂಗ್ರಹವಾಗಿದ್ದು, ವಿವಿಧ ಯೋಜನೆಗಳ ಮೂಲಕ ಕೊಟ್ಟಿರೋದು ಕೇವಲ ₹4.5 ಲಕ್ಷ ಕೋಟಿ. ರಾಜ್ಯದ ಜಿಎಸ್‌ಟಿ ಪಾಲು ನೀಡದೆ ಸಾಲ ನೀಡಿ, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡುತ್ತಿರುವುದೇಕೆ? ರಾಜ್ಯಕ್ಕೆ ಈ ರೀತಿ ಅನ್ಯಾಯ ಮಾಡುತ್ತಿರುವುದೇಕೆ..?

೧೨. ಅಂದಹಾಗೆ ಪ್ರಧಾನಿಗಳೇ ಮತ್ತೊಂದು ಪ್ರಮುಖ ವಿಷಯ. ಬೆಂಗಳೂರಿನ 15 ಬಿಜೆಪಿ ಶಾಸಕರಿಗೆ ನಿಮ್ಮ ಸರ್ಕಾರ 79,890 ಕೋಟಿ ಅನುದಾನ ನೀಡಿದರೆ, ಕಾಂಗ್ರೆಸ್‌ನ 12 ಶಾಸಕರಿಗೆ 72,165 ಕೋಟಿ ಮಾತ್ರ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ರಾಜಕೀಯ ತಾರತಮ್ಯ ಎಷ್ಟು ಸರಿ…?
ಬೆಂಗಳೂರು ರಸ್ತೆಗುಂಡಿ ಮುಚ್ಚುವ ಸಂಬಂಧ ಹೈಕೋರ್ಟ್‌ ಏಷ್ಟೇ ಚಾಟಿ ಬೀಸಿದರು, ನಿಮ್ಮ ಸರಕಾರ, ಬಿಬಿಎಂಪಿ ಎಚ್ಚೆತ್ತುಕೊಂಡಿರಲಿಲ್ಲ. ಕೊನೆಗೆ ಕೋರ್ಟ್‌ ನಿರ್ದೇಶನದಂತೆ ಪಾಲಿಕೆ ನಡೆಯಬೇಕಾದ ಸ್ಥಿತಿ ಬಂತು. ಈಗ ನೀವು ಬೆಂಗಳೂರಲ್ಲಿ ಯಾತ್ರೆ ಮಾಡುವ 12 ಕಿಮೀ ರಸ್ತೆ ಹೊಳೆಯುವಂತೆ ಮಾಡಿದ್ದಾರೆ.
ದಯವಿಟ್ಟು ನಿಮಗೊಂದು ಕಳಕಳಿಯ ಮನವಿ, ಇಡೀ ಬೆಂಗಳೂರು ಒಂದು ರೌಂಡ್ ಬರುವ ಕಾರ್ಯಕ್ರಮ ಹಾಕಿಕೊಳ್ಳಿ ಆಗ ಎಲ್ಲ ರಸ್ತೆಗಳೂ ದುರಸ್ತಿ ಆಗುತ್ತವೆ. ನಗರದ ಜನ ನಿಮಗೆ ಅಭಾರಿ ಆಗಿರುತ್ತಾರೆ.

ಇದನ್ನೂ ಓದಿ | ಇತಿಹಾಸವನ್ನು ತಿರುಚಿ ಬರೆದ ಪಠ್ಯ ಪುಸ್ತಕ: ರಾಮಲಿಂಗಾರೆಡ್ಡಿ ಆರೋಪ

Exit mobile version