ಬೆಂಗಳೂರು: ಕಾಂಗ್ರೆಸ್ ಆಯೋಜಿಸಿರುವ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಾಕಲಾದ ಟಿಪ್ಪು ಸುಲ್ತಾನ್ ಚಿತ್ರವಿರುವ ಬ್ಯಾನರ್‌ಗಳನ್ನು ನಾಶ ಮಾಡಿರುವುದು ಪುನೀತ್ ಕೆರೆಹಳ್ಳಿ ಮತ್ತು ತಂಡ ಎನ್ನುವುದು ವಿಡಿಯೊಗಳಿಂದ ಬಯಲಾಗಿದೆ. ಶಿವಮೊಗ್ಗ ಸಿಟಿ ಸೆಂಟರ್ ಮಾಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಸಾಲಿನಲ್ಲಿ ವೀರ್ ಸಾವರ್ಕರ್ ಫೋಟೊ ಇಟ್ಟಿದ್ದನ್ನು ಅಲ್ಲಿನ ಎಸ್‌ಡಿಪಿಐ ನಾಯಕರು ಪ್ರಶ್ನೆ ಮಾಡಿದ್ದಕ್ಕೆ ಪ್ರತಿಯಾಗಿ ಈ ಕೃತ್ಯ ನಡೆಸಿದ್ದಕ್ಕಾಗಿ ಸ್ವತಃ ಪುನೀತ್ ಕೆರೆಹಳ್ಳಿ ಮತ್ತು ಟೀಮ್ ಹೇಳಿಕೊಂಡಿದೆ.
ಬೆಂಗಳೂರಿನ ಕೆ. ಆರ್ ಸರ್ಕಲ್ ಹಾಗೂ ಹಡ್ಸನ್ ಸರ್ಕಲ್ ಬಳಿ ಟಿಪ್ಪು ಸುಲ್ತಾನ್ ಹಾಗೂ ಹಲವಾರು ಮುಖಂಡರ ಚಿತ್ರಗಳಿದ್ದ ಬ್ಯಾನರ್ ಅನ್ನು ಕಾಂಗ್ರೆಸ್ ಅಳವಡಿಸಿತ್ತು. ಅದರಲ್ಲಿ ಟಿಪ್ಪು ಚಿತ್ರವಿದ್ದ ಎರಡು ಬ್ಯಾನರ್‌ಗಳನ್ನು ರಾತ್ರಿ ೧೦.೩೦ರ ಸುಮಾರಿಗೆ ಹರಿದು ಹಾಕಲಾಗಿತ್ತು. ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದರು. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಸ್ಥಳಕ್ಕೆ ಆಗಮಿಸಿದ್ದರು.
ಶಿವಮೊಗ್ಗದಲ್ಲಿ ಮಾಡಿದ್ದಕ್ಕೆ ಪ್ರತೀಕಾರ
ಪುನೀತ್ ಕೆರೆಹಳ್ಳಿ ಮತ್ತು ತಂಡ ಬ್ಯಾನರ್ ಹರಿಯುವ ವಿಡಿಯೊ ಬಹಿರಂಗಗೊಂಡಿದೆ. ಅದಕ್ಕೆ ಕಾರಣವನ್ನೂ ಅದು ಕೊಟ್ಟಿದೆ. ʻʻನಾವು ಟಿಪ್ಪು ಸುಲ್ತಾನ್ ಬ್ಯಾನರ್ ಹಾಕಿದ್ದನ್ನು ಮೊದಲೇ ನೋಡಿದ್ದೆವು. ಆದರೆ, ಜಗಳ ಬೇಡ ಎಂಬ ಕಾರಣಕ್ಕೆ ಹಾಗೇ ಬಿಟ್ಟಿದ್ದೆವು. ಆದರೆ, ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಕೇಳಿ ಸಹಿಸಿಕೊಳ್ಳಲಾಗಲಿಲ್ಲ. ಹೀಗಾಗಿ ಮತ್ತೆ ಬಂದು ಆಕ್ಷೇಪಿಸಿದ್ದೇವೆ. ಹಾನಿ ಮಾಡಿದ್ದೇವೆʼ ಎಂದು ಪುನೀತ್ ಕೆರೆಹಳ್ಳಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದರು. ಇದೀಗ ಕಿಡಿಗೇಡಿಗಳು ಯಾರು ಎನ್ನುವುದು ಸ್ಪಷ್ಟವಾಗಿದೆ. ಗಲಾಟೆ ವಿಚಾರ ತಿಳಿಯುತ್ತಿದ್ದಂತೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು, ಸರ್ಕಲ್ ನಲ್ಲಿದ್ದಂತಹ ಸಿಸಿಟಿವಿ ದೃಶ್ಯ ಮತ್ತು ಮೊಬೈಲ್ ನಲ್ಲಿ ಸೆರೆಯಾಗಿರುವ ವಿಡಿಯೋಗಳ ಮೂಲಕ ಕಿಡಿಗೇಡಿಗಳನ್ನು ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಏನಾಗಿತ್ತು?
ಶಿವಮೊಗ್ಗ ಸಿಟಿ ಸೆಂಟರ್ ಮಾಲ್‌ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹೋರಾಟಗಾರರ ಭಾವಚಿತ್ರಗಳನ್ನು ಹಾಕಲಾಗಿತ್ತು. ಅದರಲ್ಲಿ ಸಾವರ್ಕರ್ ಫೋಟೊ ಇರುವುದನ್ನು ಎಸ್‌ಡಿಪಿಐ ಆಕ್ಷೇಪಿಸಿತ್ತು.
ಮಾಲ್‌ನಲ್ಲಿ ಸಾವರ್ಕರ್ ಭಾವಚಿತ್ರ ಗಮನಿಸಿದ ಎಸ್‌ಡಿಪಿಐ ಕಾರ್ಯಕರ್ತರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರ ಭಾವಚಿತ್ರ ಏಕೆ ಹಾಕಿದ್ದೀರಿ? ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿ, ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದರಿಂದ ಸಾವರ್ಕರ್ ಭಾವಚಿತ್ರದೊಂದಿಗೆ ಅಬುಲ್ ಕಲಾಮ್ ಆಜಾದ್ ಅವರ ಭಾವಚಿತ್ರ ಹಾಕುವುದಾಗಿ ಮಾಲ್ ಸಿಬ್ಬಂದಿ ಹೇಳಿದ್ದರಿಂದ ಕಾರ್ಯಕರ್ತರು ಹಿಂತಿರುಗಿದ್ದಾರೆ ಎನ್ನಲಾಗಿದೆ. ನಂತರ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಸ್ವಾತಂತ್ರ್ಯ ಹೋರಾಟಗಾರರಿಗೆ ಎಸ್‌ಡಿಪಿಐ ಕಾರ್ಯಕರ್ತರು ಅವಮಾನ ಮಾಡಿದ್ದಾರೆ. ಕೆಲ ಮುಸ್ಲಿಂ ಕಿಡಿಗೇಡಿಗಳು ಭಾವಚಿತ್ರಗಳನ್ನು ತೆಗೆಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಾಲ್ ಅನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.
Shivamogga Mall | ಸಾವರ್ಕರ್ ಭಾವಚಿತ್ರಕ್ಕೆ ಎಸ್‌ಡಿಪಿಐ ಆಕ್ಷೇಪ; ಬಿಜೆಪಿ ಪ್ರತಿಭಟನೆ, ನಾಲ್ವರು ವಶಕ್ಕೆ