ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಮಾತ್ರ ಬಡವರ ಪರ, ಪರಿಶಿಷ್ಟರ ಪರ ಎನ್ನುತ್ತ ಬಣ್ಣ ಬಣ್ಣದ ಕತೆ ಕಟ್ಟುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿ ಬಡವರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಚುನಾವಣೆ ವೇಳೆ ಮಾತ್ರ ಅವರನ್ನು ಓಲೈಸಿಕೊಳ್ಳಲು ಬಣ್ಣ ಬಣ್ಣದ ಕಥೆ ಕಟ್ಟಿ ರಾಜಕಾರಣ ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್ ಭದ್ರತೆಗಾಗಿ ಭಾರತೀಯ ಸೇನೆಯ ಶ್ವಾನದಳ!
ಇಂದಿರಾ ಕ್ಯಾಂಟಿನ್ ತಾನೇ ಮುಚ್ಚುತ್ತಿದೆ ಕಾಂಗ್ರೆಸ್ ಸರ್ಕಾರ
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಅಲ್ಲ, ಈಗ ಕಾಂಗ್ರೆಸ್ ಸರ್ಕಾರವೇ ಮುಚ್ಚುತ್ತಿದೆ. ಬಡವರು ಮತ್ತು ಶ್ರಮಿಕ ವರ್ಗದವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಮುಚ್ಚಿಸಲು ಹೊರಟಿದ್ದೇವೆಂದು ಆಗ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರವೇ ಮುಚ್ಚಲು ಹೊರಟಿದೆ ಎಂದು ಜೋಶಿ ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆ ನಿಭಾಯಿಸಲಾಗದೆ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿದ್ದ ಧನಕ್ಕೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್‌ಗಳಿಗೆ ಬೀಗ ಹಾಕುತ್ತಿದೆ ಎಂದಿದ್ದಾರೆ.
ಇಂದಿರಾ ಕ್ಯಾಂಟಿನ್‌ಗಳಿಗೆ ಕಳೆದೊಂದು ವರ್ಷದಿಂದ ಆಹಾರ ಪೂರೈಸುತ್ತಿದ್ದ ಗುತ್ತಿಗೆದಾರರಿಗೆ ಬರೋಬ್ಬರಿ 47 ಕೋಟಿ ರೂ. ಬಿಲ್ ಪಾವತಿಸಲಾಗದೆ ಬಾಗಿಲು ಮುಚ್ಚಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: KPSC Recruitment 2024: ಕೆಪಿಎಸ್‌ಸಿ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಕಾಂಗ್ರೆಸ್ ನಾಯಕರು ತಾವು ಬಡವರ ಪರ ಎನ್ನುತ್ತಾರೆ ಹೊರತು ಮಾತಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಆ ಇಚ್ಛಾಸಕ್ತಿ ಮುಖ್ಯಮಂತ್ರಿ ಅವರಿಗಿಲ್ಲ ಎಂದು ಆರೋಪಿಸಿ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.