Site icon Vistara News

Karnataka Election: ಮಂಡ್ಯದಲ್ಲಿ ಅಪೂರ್ಣ ಕಾಮಗಾರಿ ಉದ್ಘಾಟನೆಗೆ ಬೇಡ ಅವಕಾಶ: ಕಾಂಗ್ರೆಸ್‌ ನಿಯೋಗದಿಂದ ಡಿಸಿಗೆ ಮೊರೆ

Congress delegation moves DC says no to be allowed to inaugurate incomplete work in Mandya Karnataka Election 2023 updates

ಮಂಡ್ಯ: ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದೆ. ಅಲ್ಲದೆ, ನೀತಿ ಸಂಹಿತೆ ಘೋಷಣೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಮಧ್ಯೆ ರಾಜಕೀಯ ನಾಯಕರು ಕಾಮಗಾರಿ ಪೂರ್ಣಗೊಳ್ಳದೆ ಕಟ್ಟಡಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಾಮಗಾರಿಗಳಿಗೆ ಟೆಂಡರ್‌ ಆಗದೆ ಶಿಲಾನ್ಯಾಸ ನೇರವೇರಿಸುತ್ತಿದ್ದಾರೆ. ಈ ಬಗ್ಗೆ ಚುನಾವಣೆ ಆಯೋಗ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ, ತಡೆಯೊಡ್ಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗೆ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ (PM Narendraswamy), ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ (Dinesh Gooligowda), ಮಧು ಜಿ. ಮಾದೇಗೌಡ (Madhu Madegowda) ಮನವಿ ಸಲ್ಲಿಸಿದರು.

ಮಳವಳ್ಳಿ ಸೇರಿದಂತೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೆ ಟೆಂಡರ್ ಆಗುವುದಕ್ಕೂ ಮುನ್ನ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಸಹ ಗಮನಕ್ಕೆ ಬಂದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಲು ಇನ್ನೂ ಒಂದು ವಾರ ಅಷ್ಟೇ ಬಾಕಿ ಇದೆ. ಹೀಗಾಗಿ ಇವುಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಕಾಂಗ್ರೆಸ್‌ ನಾಯಕರ ನಿಯೋಗವು ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿತು.

ಇದನ್ನೂ ಓದಿ: Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಈ ವೇಳೆ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರು ಪ್ರತಿಕ್ರಿಯೆ ನೀಡಿ, ಈಗಾಗಲೇ ಜಿಲ್ಲಾದ್ಯಂತ ಕ್ರಮವಹಿಸಲಾಗಿದೆ. ಎಲ್ಲ ತಾಲೂಕುಗಳಿಗೂ ಸೂಚನೆ ನೀಡಲಾಗಿದ್ದು, ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡಬಾರದು ಹಾಗೂ ಟೆಂಡರ್ ಆಗದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಬಾರದು ಎಂದು ಸೂಚಿಸಲಾಗಿದೆ ಎಂದು ನಿಯೋಗಕ್ಕೆ ತಿಳಿಸಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತ ಹುರುಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇದ್ದರು.

ಮನವಿ ಪತ್ರದಲ್ಲೇನಿದೆ?

ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದ್ದು, ಈ ಬಗ್ಗೆ ಚುನಾವಣಾ ಆಯೋಗ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಈಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಚುನಾವಣಾ ಆಯೋಗದ ತಂಡಗಳು ಚುನಾವಣೆಯ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿದ್ದವು. ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರು “ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ನೀತಿ ಸಂಹಿತೆ ಜಾರಿಯಾಗುವವರೆಗೂ ಕಾಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ ಕುಮಾರ ಮೀನಾ ಅವರು ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮಾ.8 ರಂದು ಪತ್ರ ಬರೆದು, “ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಬೇಕಾದಲ್ಲಿ ಆಯೋಗದ ಅನುಮತಿ ಪಡೆಯಬೇಕು” ಎಂದು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೂ ಚುನಾವಣಾ ಆಯೋಗದ ಆದೇಶ ಮೀರಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಆಯೋಗದ ಸೂಚನೆಗಳನ್ನು ಧಿಕ್ಕರಿಸಿ ಮತದಾರರಿಗೆ ಆಮಿಷವೊಡ್ಡುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಮತದಾರರನ್ನು ಮರುಳು ಮಾಡುವ ಸಲುವಾಗಿ ನಿರ್ಮಾಣ ಹಂತದಲ್ಲಿರುವ ಅಪೂರ್ಣ ಸರ್ಕಾರಿ ಕಟ್ಟಡಗಳನ್ನು ಹಾಗೂ ಕಾಮಗಾರಿಗಳನ್ನು ಉದ್ಘಾಟಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಇನ್ನೂ ಪೂರ್ಣವಾಗದೇ ಇರುವ ಕಾಮಗಾರಿಗಳನ್ನು ಉದ್ಘಾಟನೆ ಮಾಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣಾ ದೃಷ್ಟಿಯಿಂದ ಅನುಕೂಲ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಕರಣಗಳು ನಡೆಯುತ್ತಿದೆ. ಚುನಾವಣಾ ಆಯೋಗದ ನಿರ್ದೇಶನವನ್ನು ಧಿಕ್ಕರಿಸಿ ನಡೆಯುತ್ತಿವೆ.

ಇದನ್ನೂ ಓದಿ: Karnataka Rain: ಆಲಿಕಲ್ಲು ಮಳೆಗೆ ನೆಲಕಚ್ಚಿದ ಬೆಳೆ; ರೈತರು ಕಂಗಾಲು, ಗೋಳು ಕೇಳುವವರ‍್ಯಾರು?

ಅದೇ ರೀತಿ ಟೆಂಡರ್‌ ಕರೆಯುವ ಮೊದಲೇ ಭೂಮಿ ಪೂಜೆ ಮಾಡಲಾಗುತ್ತಿದೆ. ಇದು ಬಹುತೇಕ ಎಲ್ಲ ಇಲಾಖೆಗಳಲ್ಲಿಯೂ ನಡೆಯುತ್ತಿದೆ ಎಂಬ ದೂರುಗಳು ಈಗಾಗಲೇ ಕೇಳಿ ಬರುತ್ತಿವೆ. ಇದು ಚುನಾವಣಾ ಆಯೋಗದ ಸೂಚನೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ತಾವು ಇಂಥ ಕಾರ್ಯಗಳನ್ನು ತಡೆಯಲು ಕ್ರಮ ವಹಿಸಬೇಕು. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಗಳೂ ನಡೆಯದಂತೆ ನೋಡಿಕೊಳ್ಳುವ ಮೂಲಕ ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸುವಂತೆ ಈ ಮೂಲಕ ಒತ್ತಾಯಿಸುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Exit mobile version