ನಾಗರಾಜ್ ಮಾಕಾಪೂರು, ವಿಸ್ತಾರ ನ್ಯೂಸ್, ರಾಯಚೂರು
ಬಿಸಿಲನಾಡಿನ ರಾಯಚೂರು ಜಿಲ್ಲೆಯಲ್ಲಿ (Raichur District) ಈ ಬಾರಿಯ ರಾಜಕೀಯ ಚಿತ್ರಣ ವಿಭಿನ್ನ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ. ಕಾಂಗ್ರೆಸ್ (Congress) ಪಕ್ಷದಲ್ಲಿ ದುಡಿದು ಸಂಸದರು ಮತ್ತು ಸಚಿವರು ಆಗಿದ್ದ ಇಬ್ಬರೂ ನಾಯಕರು ಆ ಪಕ್ಷಕ್ಕೆ ಗುಡ್ ಬೈ ಹೇಳಿದ್ದು ಕೈಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. 4 ಎಸ್ ಟಿ, 1 ಎಸ್ ಸಿ, 2 ಸಾಮ್ಯಾನ್ಯ ವರ್ಗದ ಅಭ್ಯರ್ಥಿಗಳಿರುವ ಕಣಕ್ಕೆ ಲಿಂಗಾಯತ, ವಾಲ್ಮೀಕಿ, ಕುರುಬರು, ಅಲ್ಪಸಂಖ್ಯಾತರು ನಿರ್ಣಾಯಕರು. ಜಿಲ್ಲೆಯಲ್ಲಿ ಜಾತಿ ರಾಜಕಾರಣವೇ ಗೆಲುವಿಗೆ ಸಹಕಾರಿಯಾಗಿದೆ(Karnataka Election 2023). ರಾಯಚೂರು ಜಿಲ್ಲೆಯು ರಾಜಕೀಯ, ಕುಟುಂಬ ರಾಜಕಾರಣಕ್ಕೆ ಎತ್ತಿದ ಕೈ. ಕಳೆದ ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದ ರಾಯಚೂರು ಜಿಲ್ಲೆಯಲ್ಲಿ 5 ವರ್ಷಗಳಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಕೈಗೆ ಕಮಲ ಮತ್ತು ತೆನೆಹೊತ್ತ ಮಹಿಳೆ ತ್ರಿಕೋನ ರೀತಿಯಲ್ಲಿ ಫೈಟ್ ಕೊಟ್ಟಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಮಲಕ್ಕೆ (BJP) ತೀವ್ರ ಸವಾಲು ಎದುರಾಗಿದೆ. ಕುಮಾರಸ್ವಾಮಿ ಅವರ ಪಕ್ಷ ಜೆಡಿಎಸ್(JDS)ಗೆ ಅನುಕಂಪವೇ ಜಿಲ್ಲೆಯಲ್ಲಿ ಚುನಾವಣಾ ಬ್ರಹ್ಮಾಸ್ತ್ರವಾಗಿದ್ದರೆ, ದೇವದುರ್ಗ ಕ್ಷೇತ್ರ ಜಿಲ್ಲೆಯಲ್ಲಿ ಹೈವೊಲ್ಟೆಜ್ ಕ್ಷೇತ್ರವಾಗಿದೆ.
ರಾಯಚೂರು ನಗರ: ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಕನಸು ಭಗ್ನವಾಗುತ್ತಾ?
ರಾಜಕೀಯ ಇತಿಹಾಸ ಮೆಲುಕು ಹಾಕಿದರೆ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಮುಸ್ಲಿಂ ನಾಯಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಈ ಕ್ಷೇತ್ರ ಕೈ ಪಾಳಯದ ಭದ್ರಕೋಟೆ. ಡಾಕ್ಟರ್ ವೃತ್ತಿಯಲ್ಲಿದ್ದ ಶಿವರಾಜ್ ಪಾಟೀಲ್ ಬಿಜೆಪಿಯಿಂದ ಗೆದ್ದು ರಾಯಚೂರು ನಗರದ ಶಾಸಕರಾಗಿದ್ದಾರೆ. ಈಗಲೂ ಅವರೇ ಅಭ್ಯರ್ಥಿ. ಕಾಂಗ್ರೆಸ್ ಪಕ್ಷದಿಂದ ಮಹಮ್ಮದ್ ಶಾಲಂ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ವಿನಯ್ ಕುಮಾರ್ ಕಣದಲ್ಲಿದ್ದಾರೆ. ಸದ್ಯ ಶಿವರಾಜ್ ಪಾಟೀಲ್ ಮತ್ತು ಮಹಮ್ಮದ್ ಶಾಲಂ ನಡುವೆ ತೀವ್ರ ಫೈಟ್ ಇದೆ. ಈಗಾಗಲೇ ಎರಡೂ ಬಾರಿ ಶಾಸಕರು ಆಗಿರುವ ಶಿವರಾಜ್ ಪಾಟೀಲ್ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಬೋಸ್ ರಾಜ್ ಫ್ಯಾಮಿಲಿಯ ಬಲವಿದೆ. ಜೆಡಿಎಸ್ ಅಭ್ಯರ್ಥಿ ವಿನಯ್ ಗೆ ಹಣ ಬಲವಿದೆ. ಅಲ್ಪಸಂಖ್ಯಾತರು ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮಾಡು ಇಲ್ಲವೇ ಮಡಿ ಪ್ರಶ್ನೆಯಾಗಿದೆ. ಸಾಮಾಜಿಕ ನ್ಯಾಯದ ಪರ ಈ ಬಾರಿ ಟಿಕೆಟ್ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿಗೆ ಕೆಲವು ಮೂಲ ಬಿಜೆಪಿಗರ ವಿರೋಧವಿದೆ.
ಕಳೆದ ಬಾರಿಯ ಫಲಿತಾಂಶ: ಬಿಜೆಪಿಯ ಶಿವರಾಜ್ ಪಾಟೀಲ್ – 54,600, ಕಾಂಗ್ರೆಸ್‌ನ ಸಯ್ಯದ್ ಯಾಸೀನ್ – 47,300
ರಾಯಚೂರು ಗ್ರಾಮೀಣ: ಕಾಂಗ್ರೆಸ್ ಮತ್ತು ಬಿಜೆಪಿ ಹಣಾಹಣಿ
ರಾಜ್ಯಕ್ಕೆ ಬೆಳಕು ಚೆಲ್ಲುವ ಶಾಖೋತ್ಪನ್ನ ಘಟಕಗಳನ್ನು ಈ ಕ್ಷೇತ್ರವು ಹೊಂದಿದೆ. ಈ ಕ್ಷೇತ್ರದಲ್ಲಿ ಕುರುಬ ಮತ್ತು ಲಿಂಗಾಯತ ಮತಗಳು ನಿರ್ಣಾಯಕ ಮತಗಳು ಆಗಿ ಬದಲಾಗುತ್ತವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಗೆಲುವು ಕಂಡಿದ್ದರು. ಈ ಬಾರಿಯೂ ಅವರ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷದಿಂದ ಮತ್ತೊಮ್ಮೆ ಅದೃಷ್ಟ ಪರಿಕ್ಷೆಗಾಗಿ ತಿಪ್ಪರಾಜ್ ಹವಾಲ್ದಾರ್ ಕಣದಲ್ಲಿದ್ದರೆ, ಇತ್ತ ಜೆಡಿಎಸ್ ಪಕ್ಷದಿಂದ ಸಣ್ಣ ನರಸಿಂಹನಾಯಕ್ ಸ್ಪರ್ಧಿಸಿದ್ದಾರೆ. ಈ ಬಾರಿ ಬಸನಗೌಡ ಅಭಿವೃದ್ಧಿ ಮಂತ್ರಗಳ ಪಠಣ ಮಾಡುತ್ತ ಪ್ರಚಾರದಲ್ಲಿ ತೊಡಗಿದ್ದಾರೆ. ಶಿವನಗೌಡ ನಾಯಕ್ ಅಳವರ ಶಿಷ್ಯ ತಿಪ್ಪರಾಜ್ ಈ ಬಾರಿ ಗೆಲುವಿಗೆ ನಾನಾ ಕಸರತ್ತು ನಡೆಸಿದ್ದಾರೆ. ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ವಿದ್ಯುತ್ ಸಮಸ್ಯೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಜನರಿಗೆ ಹೇಳುತ್ತಿದ್ದಾರೆ. ಆದರೆ ಜೆಡಿಎಸ್ ಅಲೆ ಇನ್ನೂ ಜೀವಂತ ಇರುವ ಗ್ರಾಮೀಣ ಕ್ಷೇತ್ರದಲ್ಲಿ ಫಲಿತಾಂಶವನ್ನು ಬದಲಿಸುವ ಶಕ್ತಿ ಇದೆ.
ಕಳೆದ ಬಾರಿಯ ಫಲಿತಾಂಶ: ಕಾಂಗ್ರೆಸ್‌ನ ಬಸನಗೌಡ ದದ್ದಲ್ – 65,666 ಬಿಜೆಪಿಯ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ -56,692 ಮತಗಳನ್ನು ಪಡೆದಿದ್ದರು.
ದೇವದುರ್ಗ: ಜೆಡಿಎಸ್ ತೀವ್ರ ಸ್ಪರ್ಧೆ; ಶಿವನಗೌಡ ನಾಯಕ್‌ಗೆ ಕಬ್ಬಿಣದ ಕಡಲೆಯಾಗುತ್ತಾ?
ರಾಜಕೀಯವಾಗಿ ಅತಿ ಹೆಚ್ಚು ಪ್ರಚಲಿತವಿರುವ ದೇವದುರ್ಗ ಕ್ಷೇತ್ರದಲ್ಲಿ ಕೆಲ ಕುಟುಂಬಗಳ ವರ್ಚಸ್ಸಿನಲ್ಲಿ ಚುನಾವಣೆಗಳು ನಡೆಯುತ್ತವೆ. ಬಿಜೆಪಿಯ ಶಿವನಗೌಡ ನಾಯ್ಕ್ ಈ ಕ್ಷೇತ್ರದ ಪ್ರಸ್ತುತ ಶಾಸಕರು. ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದ ದೇವದುರ್ಗ ಕ್ಷೇತ್ರವನ್ನ ಛಿದ್ರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀದೇವಿ ನಾಯಕ್, ಜೆಡಿಎಸ್ ಪಕ್ಷದಿಂದ ಕರಿಯಮ್ಮ ಜಿ ನಾಯಕ್ ಕಣದಲ್ಲಿದ್ದಾರೆ. ಆದರೆ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರಾನೇರ ಫೈಟ್ ಇದೆ. ಶಿವನಗೌಡ ನಾಯಕ್ ಇಬ್ಬರು ಮಹಿಳಾ ಅಭ್ಯರ್ಥಿಗಳ ಜತೆ ಕಾದಾಟದಲ್ಲಿದ್ದು, ಗೆಲುವಿಗಾಗಿ ಶತಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಜಿ ನಾಯಕ್ ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಶಿವನಗೌಡ ನಾಯ್ಕ್ ನಾಲ್ಕು ಚುನಾವಣೆ ಎದುರಿಸಿದ್ದು, ಐದನೇ ಚುನಾವಣೆ ಸವಾಲಾಗಿದೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ನಾಯಕ್ ಕೂಡ ಸ್ಪರ್ಧೆ ನೀಡುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ: ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯ್ಕ್ – 67,003 ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ನಾಯ್ಕ್ – 45,958 ಮತ ಪಡೆದಿದ್ದರು.
Karnataka Election 2023: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗ್ ಫೈಟ್
2008ರಲ್ಲಿ ಕ್ಷೇತ್ರ ರಚನೆಯಾದಾಗಿನಿಂದಲೂ ಪ್ರತಾಪಗೌಡ ಪಾಟೀಲ್ ಸೋತಿರಲಿಲ್ಲ. ಅವರಿಗೆ ಸೋಲಿನ ಬಿಸಿ ಮುಟ್ಟಿಸಿದ್ದು ಕಾಂಗ್ರೆಸ್ ಪಕ್ಷದ ಆರ್ ಬಸನಗೌಡ ತುರವಿಹಾಳ. ಸದ್ಯ ಮಸ್ಕಿ ಎಂದರೆ ಬಸನಗೌಡ ವರ್ಸಸ್ ಪ್ರತಾಪಗೌಡ ಎನ್ನುವಂತಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಆರ್. ಬಸನಗೌಡ ಸ್ಪರ್ಧಿಸಿ ದೊಡ್ಡ ಮಟ್ಟದಲ್ಲಿ ಪೈಪೋಟಿ ನೀಡಿ ಕೇವಲ 213 ಮತಗಳ ಅಂತರದಿಂದ ಸೋಲು ಕಂಡಿದ್ದರು. 2018ರಲ್ಲಿ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಪ್ರತಾಪ ಗೌಡ ಪಾಟೀಲ್ ಆಪರೇಷನ್ ಕಮಲಕ್ಕೆ ಒಳಗಾದರು. 2021ರಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಉಪ ಚುನಾವಣಾ ನಡೆಯಿತು. ಈ ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಸೋಲು ಕಂಡರು. 2023ರ ಚುನಾವಣೆಯ ಅಖಾಡದಲ್ಲಿ ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ಪಕ್ಷದಿಂದ ಆರ್ ಬಸನಗೌಡ ತುರುವಿಹಾಳ, ಜೆಡಿಎಸ್ ಪಕ್ಷದಿಂದ ರಾಘವೇಂದ್ರ ಕಣದಲ್ಲಿದ್ದಾರೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಫೈಟ್ ಎದುರಾಗಿದೆ.
ಕಳೆದ ಬಾರಿಯ ಫಲಿತಾಂಶ: ಬಸನಗೌಡ ತುರವಿಹಾಳ(ಕಾಂಗ್ರೆಸ್) 86337, ಪ್ರತಾಪಗೌಡ ಪಾಟೀಲ್ 55731(ಬಿಜೆಪಿ)
ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಈ ಬಾರಿಯ ಕಣದಲ್ಲಿ ಕೈ ಅಭ್ಯರ್ಥಿ ಡಿ ಎಸ್ ಹೂಲಗೇರಿ. ಜೆಡಿಎಸ್ ಅಭ್ಯರ್ಥಿಯಾಗಿ ಸಿದ್ದು ವೈ ಬಂಡಿ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮಾನಪ್ಪ ವಜ್ಜಲ್ ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಫೈಟ್ ಶುರುವಾಗಿದೆ. ಕಾಂಗ್ರೆಸ್ ಹಾಲಿ ಶಾಸಕರು ಇದ್ದರೂ ಕಾಂಗ್ರೆಸ್ ಗೆಲುವು ಕಷ್ಟಕರವಾಗಿದೆ. ಮಲ್ಲಿಕಾರ್ಜುನ ಖರ್ಗೆ ಆಪ್ತ ಎಂದು ಕ್ಷೇತ್ರಕ್ಕೆ ಕಾಲಿಟ್ಟ ಆರ್ ರುದ್ರಯ್ಯ ತಮ್ಮದೇ ಆದ ಬಣವನ್ನು ಮಾಡಿಕೊಂಡು ಪ್ರಚಾರ ನಡೆಸಿದ್ದರು. ಕೈ ಟಿಕೆಟ್ ನನಗೆ ಪಕ್ಕಾ ಎಂದು ಕ್ಷೇತ್ರದಲ್ಲಿ ಸುತ್ತಾಟ ಕೂಡ ನಡೆಸಿದರು. ಟಿಕೆಟ್‌ಗಾಗಿ ಸಾಮಾಜಿಕ ನ್ಯಾಯದ ಟ್ರಂಪ್ ಕಾರ್ಡ್ ಕೂಡ ಬಳಸಿದ್ದರು. ಕಾಂಗ್ರೆಸ್ ಟಿಕೆಟ್ ಮೊದಲಿನಿಂದಲೂ ಪೆಂಡಿಂಗ್ ಆಗುತ್ತಾ ಕೊನೆಯ ಲಿಸ್ಟ್ ನಲ್ಲಿ ಹಾಲಿ ಶಾಸಕರಿಗೆ ಮುಡಿಗೆ ಹೇರಿತು. ಇದರಿಂದ ಬಂಡಾಯ ಎದ್ದು ಆರ್ ರುದ್ರಯ್ಯ ಕೆ ಆರ್ ಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತಗಳು ಡಿವೈಡ್ ಆಗುವ ಸಾಧ್ಯತೆ ಇದೆ. ಜೆಡಿಎಸ್ ಅಭ್ಯರ್ಥಿ ಸಿದ್ದು ವೈ ಬಂಡಿಗೆ ಮೂರು ಬಾರಿ ಸೋಲು ಕಂಡಿರುವ ಅನುಕಂಪ ಒಂದೇ ಬ್ರಹ್ಮ ಅಸ್ತ್ರವಾಗಿ ಉಳಿದಿದೆ.
ಕಳೆದ ಬಾರಿಯ ಫಲಿತಾಂಶ: ಕಾಂಗ್ರೆಸ್‌ನ ಡಿ.ಎಸ್. ಹೂಲಗೇರಿ 54230, ಜೆಡಿಎಸ್‌ನ ಸಿದ್ದು ಬಂಡಿ -49284 ಮತಗಳನ್ನು ಪಡೆದಿದ್ದಾರೆ.
ಸಿಂಧನೂರು: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬಿಗ್ ಫೈಟ್, ಬಂಡಾಯದ್ದೇ ಚಿಂತೆ
ಸಿಂಧನೂರು ಕ್ಷೇತ್ರವೂ ವಿಶಿಷ್ಟವಾಗಿದೆ. ಇಲ್ಲಿ ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಗೆದ್ದಿಲ್ಲ. ಈ ಬಾರಿ ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ, ಬಿಜೆಪಿಯಿಂದ ಕೆ ಕರಿಯಪ್ಪ ಹಾಗೂ ಜೆಡಿಎಸ್‌ನಿಂದ ವೆಂಕಟರಾವ್ ನಾಡಗೌಡರು ಕಣದಲ್ಲಿದ್ದಾರೆ. ಈಗ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿರುವ ಕೆ ಕರಿಯಪ್ಪ ಕಾಂಗ್ರೆಸ್ ಪಕ್ಷದಲ್ಲಿದ್ದವರು. ಟಿಕೆಟ್ ಕೈ ತಪ್ಪಿರುವ ಕಾರಣಕ್ಕಾಗಿ ಬಂಡಾಯ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇತಿಹಾಸದಲ್ಲೇ ಬಿಜೆಪಿ ಗೆಲ್ಲುವ ಕಾಣದ ಕ್ಷೇತ್ರದಲ್ಲಿ ಕಮಲ ಅರಳಿಸುವ ಪಣ ತೊಟ್ಟಿದ್ದಾರೆ. ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ಕೊನೆಯ ಚುನಾವಣೆ ಎಂದು ಬಿಂಬಿಸಿ ಮತಯಾಚನೆ ಮಾಡುತ್ತಿದ್ದಾರೆ. ಜೆಡಿಎಸ್‌ನ ವೆಂಕಟರಾವ್ ನಾಡಗೌಡ್ರ ಅಭಿವೃದ್ಧಿ ಕಾರ್ಯಗಳ ಜೊತೆ ಇಬ್ಬರೂ ಮೂಲ ಕಾಂಗ್ರೆಸ್ ನಾಯಕರ ಮತಗಳ ವಿಭಜನೆಯ ಲೆಕ್ಕಾಚಾರದ ಮೇಲೆ ಚುನಾವಣೆಗೆ ಅಣಿಯಾಗಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಹೆಚ್ಚಿದೆ.
ಕಳೆದ ಬಾರಿಯ ಫಲಿತಾಂಶ: ವೆಂಕಟರಾವ್ ನಾಡಗೌಡ್ರ (ಜೆ ಡಿ ಎಸ್)71,514), ಹಂಪನಗೌಡ ಬಾದರ್ಲಿ(ಕಾಂಗ್ರೆಸ್) 69,917 ಮತ ಪಡೆದಿದ್ದರು.
ಮಾನ್ವಿ: ಕಾಂಗ್ರೆಸ್-ಬಿಜೆಪಿ ನಡುವಿ ಕದನದಲ್ಲಿ ಗೆಲವು ಯಾರಿಗೆ?
ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಿ ಹಂಪಯ್ಯ ನಾಯಕ್, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ್ ಮತ್ತು ಬಿಜೆಪಿಯಿಂದ ಬಿ ವಿ ನಾಯಕ್ ಅವರು ಚುನಾವಣಾ ಕಣದಲ್ಲಿದ್ದಾರೆ. 2018ರಲ್ಲಿ ಹ್ಯಾಟ್ರಿಕ್ ಗೆಲುವಿಗೆ ಹಂಬಲಿಸಿದ್ದ ಹಂಪಯ್ಯ ನಾಯ್ಕ್ ಅವರಿಗೆ ಸೋಲಾಗಿತ್ತು. ಜೆಡಿಎಸ್ ಅಭ್ಯರ್ಥಿ ರಾಜಾವೆಂಕಟಪ್ಪ ನಾಯ್ಕ್ ಮುಂದೆ ಮಂಡಿಯೂರಿತ್ತು. ಕಾಂಗ್ರೆಸ್ ನ ಬಂಡಾಯದ ಅಭ್ಯರ್ಥಿ ಈರಣ್ಣ ಅವರ ಸೊಸೆ ತನುಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎರಡನೇ ಸ್ಥಾನ ಗಳಿಸಿದ್ದರು. ಪ್ರಸಕ್ತ ಎಲೆಕ್ಷನ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಇದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಂಸದ ಬಿ ವಿ ನಾಯಕ್ ಅವರ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದರು. ಅಲ್ಲದೇ ಬಿಜೆಪಿ ಸೇರಿ, ಕಮಲದ ಗುರುತಿನ ಮೂಲಕ ಸ್ಪರ್ಧಿಸಿದ್ದಾರೆ. ಮಾನ್ವಿಯಲ್ಲಿ ಮೂಲ ಕಾಂಗ್ರೆಸ್ ನಾಯಕ ಹಾಗೂ ಹಾಲಿ ಕಾಂಗ್ರೆಸ್ ನಾಯಕ ನಡುವಿನ ಜಿದ್ದಾಜಿದ್ದಿಯ ಕಣವಾಗಿದೆ. ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕ ಜೆಡಿಎಸ್ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ ಮತಯಾಚನೆ ಮಾಡುತ್ತಿದ್ದಾರೆ. ಕಳೆದ ಬಾರಿ ಬಂಡಾಯ ಎದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದ ತನುಶ್ರೀ ಅವರು ಈ ಬಾರಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ; ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ, 53,548, ಪಕ್ಷೇತರ ಅಭ್ಯರ್ಥಿ ಡಾ .ತನುಶ್ರೀ – 37,733 ಮತ
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಸಮೀಕ್ಷೆ: ಬದಲಾದ ಹವಾ, ಕಾಂಗ್ರೆಸ್‌ಗೆ ಲಾಭ? ಬಜರಂಗದಳ ಎಫೆಕ್ಟ್ ಸಸ್ಪೆನ್ಸ್
ರಾಯಚೂರು ಜಿಲ್ಲೆಯ ಕಳೆದ ಬಾರಿಯ ಬಲಾಬಲ
ಒಟ್ಟು ಕ್ಷೇತ್ರಗಳು: 07
ಕಾಂಗ್ರೆಸ್ : 03 – ರಾಯಚೂರು ಗ್ರಾಮೀಣ,ಲಿಂಗಸಗೂರು,ಮಸ್ಕಿ.
ಬಿಜೆಪಿ : 02 – ರಾಯಚೂರು ನಗರ,ದೇವದುರ್ಗ
ಜೆ ಡಿ ಎಸ್ : 02 – ಸಿಂಧನೂರು, ಮಾನ್ವಿ