Site icon Vistara News

Mysore Dasara: ಮುಂದಿನ ವರ್ಷವೇ 5ನೇ ಗ್ಯಾರಂಟಿ ಜಾರಿ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

CM Siddaramaiah

Congress Fifth Guarantee Will Be Implemented By Next Year; Says CM Siddaramaiah

ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ (Mysore Dasara) ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ನಾದಬ್ರಹ್ಮ ಹಂಸಲೇಖ ಅವರು ದಸರೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಸದ ಪ್ರತಾಪ್‌ ಸಿಂಹ ಸೇರಿ ಹಲವು ಗಣ್ಯರು ಸಾಂಪ್ರದಾಯಿಕ ಕಾರ್ಯಕ್ರಮದ ಉದ್ಘಾಟನೆಗೆ ಸಾಕ್ಷಿಯಾದರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಗ್ಯಾರಂಟಿ ಯೋಜನೆಗಳ (Congress Guarantee Schemes) ಕುರಿತು ಪ್ರಸ್ತಾಪಿಸಿದರು. ಹಾಗೆಯೇ, 2024ರ ಜನವರಿಯಲ್ಲಿ ಕಾಂಗ್ರೆಸ್‌ ಐದನೇ ಗ್ಯಾರಂಟಿ ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು.

ಕಾಂಗ್ರೆಸ್‌ ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ಪದವೀಧರರಿಗೆ ಮಾಸಿಕ 3 ಸಾವಿರ ರೂ. ನೀಡುವ ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ 1,500 ರೂ. ನೀಡುವ ಯುವನಿಧಿ ಯೋಜನೆ ಜಾರಿ ಬಾಕಿ ಇದೆ. ಇದರ ಕುರಿತು ಚರ್ಚೆಗಳು ಶುರುವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

“ದೇಶದಲ್ಲಿ ಎಲ್ಲರಿಗೂ ಸಮಾನತೆ ಸಿಗಬೇಕು, ಸಮಾನ ಅವಕಾಶಗಳು ಸಿಗಬೇಕು ಎಂದು ಸಂವಿಧಾನ ರಚಿಸಲಾಗಿದೆ. ಅದೇ ಆಶಯಗಳಿಗೆ ತಕ್ಕಂತೆ ನಾವು ಆಡಳಿತ ನಡೆಸುತ್ತಿದ್ದೇವೆ. ಅವಕಾಶ ವಂಚಿತರಿಗೆ, ದಮನಿತರಿಗೆ ಅವಕಾಶ ಸಿಗಬೇಕು ಎಂಬುದೇ ಸಾಮಾಜಿಕ ನ್ಯಾಯವಾಗಿದ್ದು, ಇದೇ ತತ್ವದಂತೆ ಕೆಲಸ ಮಾಡುತ್ತಿದ್ದೇವೆ. ಹಾಗಾಗಿಯೇ, ಕಾಂಗ್ರೆಸ್‌ ಸರ್ಕಾರವು ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಇವುಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. 2024ರ ಜನವರಿಯಲ್ಲಿ ಐದನೇ ಗ್ಯಾರಂಟಿ ಜಾರಿಗೆ ಬರಲಿದೆ” ಎಂದರು.

ದಸರಾ, ಅಪ್ಪ ಹಾಗೂ ಸಿದ್ದರಾಮಯ್ಯ

ಮೈಸೂರು ದಸರೆ ಹಾಗೂ ತಮಗೆ ಇರುವ ಸಂಬಂಧವನ್ನು ಸಿದ್ದರಾಮಯ್ಯ ಅವರು ನೆನೆದರು. “ನಾನು ಚಿಕ್ಕವನಿದ್ದಾಗ ದಸರಾ ನೋಡಲು ನನ್ನ ಅಪ್ಪ ನನ್ನನ್ನು ಕರೆದುಕೊಂಡು ಬಂದಿದ್ದ. ಆತನ ಹೆಗಲ ಮೇಲೆ ಕುಳಿತು ನಾನು ಮೈಸೂರು ದಸರಾ ನೋಡಿದ್ದೆ. ಆಗ ನನಗೆ ಐದಾರು ವರ್ಷ ವಯಸ್ಸು ಇರಬಹುದು. ನೋಡು ನೋಡು ಮೈಸೂರು ಮಹಾರಾಜ ಎಂದು ನನ್ನ ಅಪ್ಪ ಹೇಳುತ್ತಿದ್ದರು. ನನಗೆ ಕಾಣದೇ ಇದ್ದರೂ ನಮಸ್ಕಾರ ಮಾಡುತ್ತಿದ್ದೆ. ಈಗ ರಾಜ್ಯದಲ್ಲಿ ಬರ ಇದ್ದರೂ ಸಾಂಪ್ರದಾಯಿಕವಾಗಿ ದಸರಾ ಆಚರಿಸಬೇಕು. ಯಾವುದೇ ಕಾರಣಕ್ಕೂ ದಸರಾ ವೈಭವ ಕುಂದಬಾರದು ಎಂಬುದಾಗಿ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಸೂಚಿಸಿದೆ. ನಾಡಿಗೆ ತಾಯಿ ಚಾಮುಂಡೇಶ್ವರಿಯು ಒಳಿತನ್ನು ಮಾಡಲಿ” ಎಂದು ಹೇಳಿದರು.

ಇದನ್ನೂ ಓದಿ: Mysore Dasara : ರಾಜ್ಯದಲ್ಲಿನ ಅಂತಾರಾಜ್ಯದವರಿಗೆ ಕನ್ನಡ ಕಲಿಸಿ; ಆರ್‌ಟಿಸಿ ಮಾದರಿ ʼಕನ್ನಡ ಪಟ್ಟʼ ಕೊಡಿ ಎಂದ ಹಂಸಲೇಖ

42 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ರಾಜ್ಯದಲ್ಲಿ ಉಂಟಾಗಿರುವ ಬರದ ಕುರಿತು ಕೂಡ ಸಿದ್ದರಾಮಯ್ಯ ಮಾತನಾಡಿದರು. “ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 42 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಹಿಂಗಾರು ಮಳೆಯಾದರೂ ಚೆನ್ನಾಗಿ ಆಗಲಿ ಎಂಬುದಾಗಿ ಪ್ರಾರ್ಥಿಸೋಣ. ಮೊದಲು 191 ತಾಲೂಕುಗಳನ್ನು ಬರಪೀಡಿತ ಎಂಬುದಾಗಿ ಘೋಷಿಸಲಾಗಿತ್ತು. ಮತ್ತೆ 21 ಸೇರಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ 4,860 ಕೋಟಿ ರೂ. ಪರಿಹಾರ ನೀಡಬೇಕು ಎಂಬುದಾಗಿ ಮನವಿ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

Exit mobile version