ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿದ್ದು, ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುವ ಜತೆಗೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. “ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಯು ಸುಳ್ಳಿನ ಭರವಸೆಯಾಗಿದೆ. ಹಾಗಾಗಿ, ಕಾಂಗ್ರೆಸ್‌ನ ಸುಳ್ಳಿನ ಭರವಸೆಯನ್ನು ನಂಬದಿರಿ” ಎಂದು ನೆರೆದಿದ್ದ ಜನರಿಗೆ ಕರೆ ನೀಡಿದರು.
“ಸುಳ್ಳು ಹೇಳುವುದು ಕಾಂಗ್ರೆಸ್‌ಗೆ ರೂಢಿಯಾಗಿದೆ. ಇದೇ ರೀತಿ, ಹಿಮಾಚಲ ಪ್ರದೇಶದಲ್ಲಿ ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಿಮಾಚಲದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ರಾಜ್ಯದ ಜನರಿಗೆ 1 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಪತ್ರಕರ್ತರ ಪ್ರಶ್ನೆಗೆ ಸರ್ಕಾರವು, ಈ ಕುರಿತು ಸಮಿತಿ ರಚಿಸಲಾಗಿದೆ ಎಂದು ಹೇಳಿತು. ಆ ಮೂಲಕ ತಾನು ನೀಡಿದ್ದು ಸುಳ್ಳು ಭರವಸೆ ಎಂಬುದನ್ನು ಸಾಬೀತುಪಡಿಸಿತು” ಎಂದು ಕುಟುಕಿದರು.
ಮೋದಿ ಭಾಷಣದ ಲೈವ್
“ಸ್ವಾತಂತ್ರ್ಯ ಬಂದು ದಶಕಗಳವೆರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಆದರೆ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು, ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಜನರ ಕೊರತೆಯನ್ನು ನೀಗಿಸಿದೆ. ಡಬಲ್ ಎಂಜಿನ್ ಸರ್ಕಾರವು ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಿದೆ, ಹಾವೇರಿ ವಿವಿಗೆ ಕೋಟ್ಯಂತರ ರೂ. ಅನುದಾನ ಬಂದಿದೆ, ಡಬಲ್ ಎಂಜಿನ್ ಸರ್ಕಾರದಿಂದಲೇ ರಸ್ತೆ, ರೈಲು, ಮೂಲ ಸೌಕರ್ಯದ ಅಭಿವೃದ್ಧಿಯಾಗಿದೆ. ಇದರಿಂದ ಹಾವೇರಿ, ಕರ್ನಾಟಕ ಸೇರಿ ದೇಶಕ್ಕೇ ಮೂಲ ಸೌಕರ್ಯ ಸಿಗುತ್ತಿದೆ” ಎಂದು ನರೇಂದ್ರ ಮೋದಿ ಹೇಳಿದರು.
“ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಾಂಗ್ರೆಸ್ ಎಂದರೆ ಕಮಿಷನ್, ರೈತರ ಹಣದಲ್ಲೂ ಕಾಂಗ್ರೆಸ್ ಶೇ.85ರಷ್ಟು ಕಮಿಷನ್ ಹೊಡೆದಿದೆ. ಆದರೆ, ಬಿಜೆಪಿ ಸರ್ಕಾರವು ರೈತರ ಏಳಿಗೆಗೆ ದುಡಿದಿದೆ. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ ಬೆಲೆ ಕೆ.ಜಿ.ಗೆ 50 ರೂ. ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿಜೆಪಿ ಸರ್ಕಾರವು 50 ರೂ.ಗೆ ಒಂದು ಕೆ.ಜಿ ಗೊಬ್ಬರ ಖರೀದಿಸಿ, ರೈತರಿಗೆ ಕೇವಲ 5 ರೂ.ಗೆ ನೀಡುತ್ತಿದೆ. ರೈತರಿಗೆ ತೊಂದರೆಯಾಗಬಾರದು ಎಂದು 2 ಲಕ್ಷ ಕೋಟಿ ರೂ. ವ್ಯಯಿಸಿ, ಯೂರಿಯಾ ಗೊಬ್ಬರ ಖರೀದಿಸಿ ರೈತರಿಗೆ ನೀಡುತ್ತಿದೆ” ಎಂದು ತಿಳಿಸಿದರು.
“ದೇಶದ ಆರ್ಥಿಕತೆಯು ಜಗತ್ತಿನಲ್ಲಿಯೇ ಒಂಬತ್ತನೇ ಸ್ಥಾನದಲ್ಲಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ನಾವು ಜಗತ್ತಿನ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶವಾಗಿದ್ದೇವೆ. ಒಂಬತ್ತನೇ ಸ್ಥಾನದಿಂದ ಭಾರತ ಈಗ ಐದನೇ ಸ್ಥಾನಕ್ಕೆ ಏರಿದೆ. ಬ್ರಿಟನ್ ಆರ್ಥಿಕತೆಯನ್ನೂ ನಾವು ಹಿಂದಿಕ್ಕಿದ್ದೇವೆ. ನಮ್ಮನ್ನು ನೂರಾರು ವರ್ಷಗಳನ್ನು ಆಳಿದ ಬ್ರಿಟನ್‌ಅನ್ನೇ ನಾವು ಮೀರಿಸಿದ್ದೇವೆ. ಹಾಗಂತ, ನಾವು ವಿರಮಿಸುವಂತಿಲ್ಲ. ನಾವು ಜಗತ್ತಿನ ಬಲಿಷ್ಠ ಆರ್ಥಿಕತೆ ಹೊಂದಿರುವ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತವೂ ಸೇರಬೇಕಿದೆ. ಇದಕ್ಕಾಗಿ ನೀವು ಬಿಜೆಪಿಗೆ ಮತ ನೀಡಬೇಕು. ನೀವು ಬಿಜೆಪಿಗೆ ಮತ ಕೊಟ್ಟು ನೋಡಿ, ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಲಿದೆ. ಜಗತ್ತಿನಲ್ಲಿಯೇ ದೇಶವು ಮೂರನೇ ಸ್ಥಾನಕ್ಕೆ ಏರಿಕೆಯಾಗಲಿದೆ” ಎಂದು ಹೇಳಿದರು.
ಏಲಕ್ಕಿ ಹಾರ ಹಾಕಿ ಸನ್ಮಾನ
ಹಾವೇರಿಗೆ ಆಗಮಿಸಿದ ನರೇಂದ್ರ ಮೋದಿಅ ಅವರಿಗೆ ಬಿಜೆಪಿ ನಾಯಕರು ಏಲಕ್ಕಿ ಮಾಲೆ, ಏಲಕ್ಕಿ ಪೇಟ ತೊಡಿಸಿ ಸನ್ಮಾನ ಮಾಡಿದರು. ಹಾಗೆಯೇ, ಹನುಮಾನ್ ಚಾಲೀಸಾ, ರುದ್ರಾಕ್ಷಿ ಮಾಲೆ ನೀಡಿ, ಕಂಬಳಿ ಹೊದಿಸಿ ಸನ್ಮಾನ ಮಾಡಿದರು.
ಇದನ್ನೂ ಓದಿ: Karnataka Election 2023: ಬಿಜೆಪಿಗಾಗಿ ಕರ್ನಾಟಕದ ಜನರೇ ಚುನಾವಣೆ ಮಾಡುತ್ತಿದ್ದಾರೆ ಎಂದ ಪ್ರಧಾನಿ ಮೋದಿ
ಮೇ 10ರ ನಂತರ ಕಾಂಗ್ರೆಸ್ ಗಳಗಂಟಿ: ಬೊಮ್ಮಾಯಿ
ನರೇಂದ್ರ ಮೋದಿ ಅವರಿಗೂ ಮುನ್ನ ಭಾಷಣ ಮಾಡಿದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. “ಮೇ 10ರವರೆಗೆ ಕಾಂಗ್ರೆಸ್ ಗ್ಯಾರಂಟಿ, ಅದರ ನಂತರ ಗಳಗಂಟಿ” ಎಂದು ಟೀಕಿಸಿದರು. “ನರೇಂದ್ರ ಮೋದಿ ಅವರು ಹಾವೇರಿ ಮಣ್ಣನ್ನು ಮೆಟ್ಟಿದ ಕ್ಷಣದಿಂದ ಜಿಲ್ಲೆಯಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ರಾಜ್ಯದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಆದ್ಯತೆ ನೀಡಿದೆ. ಹಾಗಾಗಿ, ಮೇ 10ರಂದು ಮತ್ತೊಮ್ಮೆ ಬಿಜೆಪಿಗೆ ಮತ ನೀಡಬೇಕು. ಮತ್ತೆ, ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು” ಎಂದು ಮನವಿ ಮಾಡಿದರು.