ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ (Karnataka Election) ರೇಸ್‌ನಲ್ಲಿರುವ ಪ್ರಮುಖ ನಾಯಕರಾಗಿದ್ದು, ಇಬ್ಬರ ನಡುವೆ ಫೈಟ್ ಇದೆ ಎಂಬ ವಿಶ್ಲೇಷಣೆ ಇದೆ. ಇಬ್ಬರ ನಡುವೆ ಮುಸುಕಿನ ಗುದ್ದಾಟ ಇದೆ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಆಪ್ತವಾಗಿ ಮಾತುಕತೆ ನಡೆಸಿದ್ದು, “ಅಧಿಕಾರಕ್ಕೆ ಬಂದ ಮೊದಲ ದಿನವೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಸಾಕಾರಗೊಳಿಸೋಣ” ಎಂದು ಇಬ್ಬರೂ ಒಮ್ಮತದ ನಿರ್ಣಯ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸುತ್ತ ಮಾತು ಆರಂಭಿಸಿದ ಡಿಕೆಶಿ, “ಸರ್, ನಾವು ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ಕಾಂಗ್ರೆಸ್ ಗ್ಯಾರಂಟಿ ಜಾರಿಗೊಳಿಸೋಣ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾವು ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸಲೇಬೇಕು” ಎಂದು ಹೇಳಿದರು, ಹಾಗೆಯೇ, “ನಾವು ಬಿಜೆಪಿಯವರ ರೀತಿ ಇವತ್ತು ಮಾಡುತ್ತೇವೆ, ನಾಳೆ ಮಾಡುತ್ತೇವೆ ಎನ್ನಬಾರದು. ಮೊದಲ ಸಂಪುಟ ಸಭೆಯಲ್ಲೇ ಅನುಮತಿ ಪಡೆದು ಜಾರಿಗೊಳಿಸಬೇಕು” ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಬಿಜೆಪಿ ಉಚಿತ ಉಡುಗೊರೆ ಭರವಸೆಗೆ ಟೀಕೆ
“ನಾವು ಜನರಿಗೆ ಉಚಿತ ಸೌಕರ್ಯ ಕೊಡುತ್ತೇವೆ ಎಂದು ಹೇಳಿದಾಗ ಟೀಕಿಸಿದ ಬಿಜೆಪಿಯವರು, ಈಗ ಉಚಿತ ಗ್ಯಾಸ್ ಸಿಲಿಂಡರ್ ಸೇರಿ ಹಲವು ಉಚಿತ ಯೋಜನೆಗಳನ್ನು ಘೋಷಿಸಿದ್ದಾರೆ ನೋಡಿ” ಎಂದು ಡಿಕೆಶಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಬಿಜೆಪಿಯವರು ಎಂದಿಗೂ ಪ್ರಣಾಳಿಕೆಯನ್ನು ಜಾರಿಗೊಳಿಸುವುದಿಲ್ಲ. ಅವರು ಪ್ರಣಾಳಿಕೆಯನ್ನು ಮರೆತೇಬಿಡುತ್ತಾರೆ. ನಾನು ಐದು ವರ್ಷ ಬಜೆಟ್ ಮಾಡುವಾಗ, ಯಾವ ಭರವಸೆ ನೀಡಿದ್ದೇವೆ, ಯಾವುದನ್ನು ಜಾರಿಗೊಳಿಸಬೇಕು ಎಂಬುದನ್ನು ನೋಡುತ್ತಿದ್ದೆ. ಆದರೆ, ಬಿಜೆಪಿಯವರು ಅದನ್ನೆಲ್ಲ ನೋಡಲ್ಲ. ಆದರೆ, ನಾವು ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿಗಳನ್ನು ಈಡೇರಿಸಬೇಕು” ಎಂದರು.
ಇಲ್ಲಿದೆ ಇಬ್ಬರ ಮಾತುಕತೆ ವಿಡಿಯೊ
ಆರೋಗ್ಯ ಹೇಗಿದೆ ಸರ್ ಎಂದ ಡಿಕೆಶಿ
ಮಾತು ಆರಂಭಿಸಿದ ಡಿಕೆಶಿ, “ಆರೋಗ್ಯ ಹೇಗಿದೆ ಸರ್” ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯ ಅವರು, “ಆರೋಗ್ಯ ಚನ್ನಾಗಿದೆ. ಅದರೆ, ಸೋಂಕಿನಿಂದಾಗಿ ಕೈಗೆ ಸ್ವಲ್ಪ ತೊಂದರೆ ಆಗಿದೆ. ಈಗ ಪರವಾಗಿಲ್ಲ ಕಡಿಮೆಯಾಗಿದೆ” ಎಂದರು. ಆಗ, ಡಿಕೆಶಿ ಅವರು ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿಯಾದ ಪ್ರಸಂಗ ಹೇಳಿದರು. “ನಾಲ್ಕೈದು ಕೆ.ಜಿ ಇರುವ ಪಕ್ಷಿಯು ಹೊಸಕೋಟೆ ದಾಟಿದ ನಂತರ ಹೆಲಿಕಾಪ್ಟರ್‌ಗೆ ಬಡಿಯಿತು. ಟಿ.ವಿಯವರು ಸಂದರ್ಶನ ಮಾಡುತ್ತಿದ್ದರು. ಆಗ ಏಕಾಏಕಿ ಬಡಿಯಿತು. ಬಡಿದ ಪೆಟ್ಟಿಗೆ ಹೆಲಿಕಾಪ್ಟರ್ ನಲುಗಿದಂತಾಯಿತು. ಸ್ವಲ್ಪ ಹೆಚ್ಚು-ಕಡಿಮೆ ಆದರೂ ನಾವು ಈಗ ಕೂತು ಮಾತನಾಡುತ್ತಿರಲಿಲ್ಲ” ಎಂದರು. ಇದಕ್ಕೆ ಸಿದ್ದರಾಮಯ್ಯ ಅವರು “ಹೌದು, ನನಗೂ ಇದರ ಬಗ್ಗೆ ಮರುದಿನ ಗೊತ್ತಾಯಿತು. ನೀವು ಲಕ್ಕಿ” ಎಂದರು.
ಇಬ್ಬರ ಟೂರ್ ಹೇಗಿತ್ತು?
ಟೂರ್ ಎಲ್ಲ ಹೇಗಾಯಿತು ಸರ್ ಎಂದು ಪ್ರಚಾರದ ಬಗ್ಗೆ ಡಿಕೆಶಿ ಕೇಳಿದರು. “ಚೆನ್ನಾಗಿತ್ತು. ನಮ್ಮ ನಿರೀಕ್ಷೆಗಿಂತ ಜನರ ಸ್ಪಂದನೆ ಹೆಚ್ಚಾಗಿತ್ತು. ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ ಪ್ರಚಾರ ಕೈಗೊಂಡಿದ್ದೇನೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿದ್ದೇನೆ. ಸ್ವಲ್ಪ ಹಳೇ ಮೈಸೂರು ಭಾಗದಲ್ಲಿ ಉಳಿದಿದೆ” ಎಂದು ಸಿದ್ದರಾಮಯ್ಯ ಹೇಳಿದರು. ಆಗ ಡಿಕೆಶಿ, “ನಾನು ಹಳೇ ಮೈಸೂರು ಭಾಗವನ್ನು ಪೂರ್ತಿಯಾಗಿ ಕವರ್ ಮಾಡಿದ್ದೇನೆ. ಬೆಂಗಳೂರು ನಗರದಲ್ಲಿ ಪೂರ್ತಿ ಪ್ರಚಾರ ಕೈಗೊಂಡಿದ್ದೇನೆ. ನನ್ನ ಪ್ರಕಾರ, ಮಂಡ್ಯದಲ್ಲಿ ಕನಿಷ್ಠ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ” ಎಂದು ಮಾಹಿತಿ ನೀಡಿದರು. “ಉತ್ತರ ಕರ್ನಾಟಕದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಬರಲಿವೆ” ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Modi In Karnataka: ಕಾಂಗ್ರೆಸ್ ಸುಳ್ಳಿನ ಬಂಡಲ್; ನಂಜನಗೂಡಿನಲ್ಲಿ ಮೋದಿ ಕಿಂಡಲ್
ಕಲ್ಯಾಣ ಕರ್ನಾಟಕದ ಕುರಿತು ಡಿಕೆಶಿ ಪ್ರಸ್ತಾಪ
ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಮಾತಿಗೆ ಎಳೆದ ಡಿ.ಕೆ.ಶಿವಕುಮಾರ್, “ಕಲ್ಯಾಣ ಕರ್ನಾಟಕದಲ್ಲಿ ಜನರಿಗೆ ನಮ್ಮ ಮೇಲೆ ವಿಶೇಷ ಪ್ರೀತಿ ಇದೆ” ಎಂದರು. ಹಾಗೆಯೇ ಬಿಜೆಪಿ ವಿರುದ್ಧ ಆರೋಪಿಸುತ್ತ, “ಬಿಜೆಪಿ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿತಲ್ಲ, ಕರಾವಳಿ, ಮಲೆನಾಡು ಸೇರಿ ಎಲ್ಲೂ ಕನಿಷ್ಠ 5 ಸಾವಿರ ಕೋಟಿ ರೂ. ಹೂಡಿಕೆ ಆಗಿಲ್ಲ” ಎಂದರು. ಅದಕ್ಕೆ ಸಿದ್ದರಾಮಯ್ಯ ಅವರು, “ಸುಮ್ಮನೆ, ಬಲವಂತದಿಂದ ಒಡಂಬಡಿಕೆ (MoU) ಮಾಡಿಸಿದ್ದಾರೆ. ಆದರೆ, ಯಾವ ಎಂಒಯುಗಳು ಜಾರಿಗೆ ಬರುವುದಿಲ್ಲ. ಸುಮ್ಮನೆ MoU ಮಾಡಿಸಿಕೊಳ್ಳುತ್ತಾರೆ, ಹೋಗುತ್ತಾರೆ” ಎಂದು ಟೀಕಿಸಿದರು.