Site icon Vistara News

Karnataka Election 2023: ಕಾಂಗ್ರೆಸ್ ಗ್ಯಾರಂಟಿ ಬೋಗಸ್; ಅವರ ಭರವಸೆ ಈಡೇರಿಸಿದ್ದು ಬಿಜೆಪಿ ಎಂದ ಮೋದಿ

Congress guarantees are bogus and BJP is only party is fulfilling its manifesto

ಕೋಲಾರ, ಕರ್ನಾಟಕ: ಪ್ರಣಾಳಿಕೆಯು ಯಾವುದೇ ಪಕ್ಷದ ಸಂಕಲ್ಪವಿದ್ದಂತೆ. ಅದನ್ನು ಈಡೇರಿಸದೇ ಹೋದರೆ ಜನರಿಗೆ ಮಾಡಿದ ಪಾಪ ಎನಿಸಿಕೊಳ್ಳುತ್ತದೆ. 2004ರಲ್ಲಿ ಕಾಂಗ್ರೆಸ್ ಸರ್ಕಾರವು ರೈತರಿಗೆ ಡೈರೆಕ್ಟ್ ಇನಕಮ್ ಸಪೋರ್ಟಿಂಗ್ ಸ್ಕೀಮ್ ಘೋಷಣೆ ಮಾಡಿತ್ತು. ಆದರೆ, 2009ರವರೆಗೂ ಈ ಸ್ಕೀಮ್ ತರಲಿಲ್ಲ. 2009ರ ಪ್ರಣಾಳಿಕೆಯಲ್ಲೂ ಇದೇ ಘೋಷಣೆ ಮಾಡಿತು. 2014ರವರೆಗೂ ಜಾರಿ ಮಾಡಲೇ ಇಲ್ಲ. ಆ ಮೂಲಕ ರೈತರಿಗೆ ಮೋಸ ಮಾಡಿತು. ಯಾವಾಗ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಿಸಾನ್ ಸಮ್ಮಾನ್ ನಿಧಿಯಂಥ ಯೋಜನೆಗಳನ್ನು ಜಾರಿಗೆ ತಂದಿತು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka Election 2023).

ಕೋಲಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ಮೋದಿ ಅವರು, ಕಿಸಾನ್ ಸಮ್ಮಾನ್ ನಿಧಿ ಮೂಲಕ ಕೇಂದ್ರ ಸರ್ಕಾರವು ರೈತರ ಖಾತೆಗಳಿಗೆ 2.5 ಲಕ್ಷ ಕೋಟಿ ರೂಪಾಯಿ ನೀಡಿದೆ. ಗ್ಯಾರಂಟಿ ನೀಡಿದ್ದು ಕಾಂಗ್ರೆಸ್; ದೋಖಾ ನೀಡಿದ್ದು ಕಾಂಗ್ರೆಸ್; ಭರವಸೆಯನ್ನು ಈಡೇರಿಸಿದ್ದು ಬಿಜೆಪಿ ಮಾತ್ರ ಎಂದು ಹೇಳಿದರು.

ಕರ್ನಾಟಕ ನಂಬರ್ 1 ರಾಜ್ಯ

ಕರ್ನಾಟಕವನ್ನು ದೇಶವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಸಂಕಲ್ಪವನ್ನು ಬಿಜೆಪಿ ಮಾಡಿದೆ. ಇದಕ್ಕೆ ಡಬಲ್ ಎಂಜಿನ್ ಸರ್ಕಾರ ಬೇಕು. ಹಾಗಾಗಿ, ನೀವು ಬಿಜೆಪಿ ಪಕ್ಷವನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇದ್ದಾಗ ಯಾವುದೇ ಅಭಿವೃದ್ಧಿಯಾಗಲಿಲ್ಲ. ಯಾವಾಗ ಡಬಲ್ ಎಂಜಿನ್ ಸರಕಾರ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿಯ ವೇಗ ಹೆಚ್ಚಾಯಿತು. ಈ ಅಭಿವೃದ್ಧಿಯನ್ನು ಮುಂದುವರಿಸಬೇಕಾದ ಅಗತ್ಯವಿದೆ. ಹಾಗಾಗಿ, ಕೇಂದ್ರದಲ್ಲಿ ವೇಗವಾದ ಎಂಜಿನ್ ಇದೆ. ಕರ್ನಾಟಕದಲ್ಲೂ ಅಂಥದ್ದೇ ಎಂಜಿನ್ ಬೇಕು ಎಂದು ಹೇಳಿದರು. ಕಾಂಗ್ರೆಸ್‌ನಂಥ ದುರ್ಬಲ, ಔಟ್‌‍ಡೇಟೆಡ್ ಎಂಜಿನ್‌ನಿಂದ ವಿಕಾಸ ಮಾಡಲು ಸಾಧ್ಯವಿಲ್ಲ.

ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ

ಬಡಲ್ ಎಂಜಿನ್ ಸರ್ಕಾರವು ಆಧುನಿಕ ಸಂಪರ್ಕದ ಕೆಲಸವನ್ನು ಮಾಡುತ್ತಿದ್ದೇವೆ. ಇದಕ್ಕೆ ಉದಾಹರಣೆಯಾಗಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣವಾಗುತ್ತಿದೆ. ಇದರಿಂದ ಕೋಲಾರದಂಥ ಜಿಲ್ಲೆಯಲ್ಲೂ ಎಂಎನ್‌ಸಿ ಕಂಪನಿಗಳು ಆರಂಭವಾಗುತ್ತಿವೆ. ಸಂಪರ್ಕದ ಪರಿಣಾಮ ಮುಳಬಾಗಿಲು ದೋಸೆ ಖ್ಯಾತಿ ವಿಶ್ವವಿಖ್ಯಾತವಾಗುತ್ತಿದೆ. ಇದಕ್ಕೆ ಆಧುನಿಕ ಸಂಪರ್ಕವೇ ಕಾರಣ ಎಂದು ಮೋದಿ ಹೇಳಿದರು.

ಬಿಜೆಪಿ ಸರ್ಕಾರವು ಬೀಜದಿಂದ ಮಾರುಕಟ್ಟೆ ತನಕ ರೈತರಿಗಾಗಿ ಕೆಲಸ ಮಾಡುತ್ತಿದೆ. ಕೇಂದ್ರದ ಪಿಎಂ ಸಮ್ಮಾನ್ ನಿಧಿ ಜತೆಗೆ ಇಲ್ಲಿನ ಸರ್ಕಾರವು ಹೆಚ್ಚುವರಿಯಾಗಿ 4 ಸಾವಿರ ರೂ. ನೀಡುತ್ತಿದೆ. ಇದರಿಂದ ಕರ್ನಾಟಕದಲ್ಲಿ 18 ಸಾವಿರ ರೈತರಿಗೆ ಲಾಭವಾಗಿದೆ. ಇದರ ಜತೆಗೆ ಶೈತ್ಯಾಗಾರಗಳು ನಿರ್ಮಾಣ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಇದರಿಂದ ಕರ್ನಾಟಕದ ರೈತರಿಗೆ ನೆರವು ದೊರೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Elections 2023 : ಕೆ.ಎಸ್‌. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್‌ ಖುಷ್‌

ಕಾಂಗ್ರೆಸ್ ಸರ್ಕಾರವು ಎಸ್ಸಿ, ಎಸ್ಟಿ ಮತ್ತು ಒಬಿಸಿ ಜನರಿಗೆ ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ನಾನು ಋಣಿಯಾಗಿದ್ದೇನೆ. ಯಾಕೆಂದರೆ, 2014ರಲ್ಲಿ ನಿಮ್ಮ ಒಂದು ಮತದಿಂದ ಬದಲಾವಣೆ ಆರಂಭವಾಯಿತು. ನಿಮ್ಮ ಒಂದು ಮತದಿಂದ ಅನ್ಯಾಯ ದೂರವಾಯಿತು. ನಿಮ್ಮ ಒಂದು ಮತದಿಂದ ಎಸ್ಸಿ, ಎಸ್ಟಿ, ಒಬಿಸಿ ಜನರಿಗೆ ಮನೆಗಳಾದವು. ನಿಮ್ಮ ಒಂದು ಮತದಿಂದ 109 ಕೋಟಿ ಶೌಚಾಲಯಗಳು ನಿರ್ಮಾಣವಾದವು. ನಿಮ್ಮ ಒಂದು ಮತದಿಂದ 9 ಕೋಟಿ ಮಹಿಳೆಯರಿಗೆ ಗ್ಯಾಸ್ ದೊರೆಯಿತು ಎಂದು ಹೇಳಿದರು.

Exit mobile version