Site icon Vistara News

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Beware if the Congress Guarantee card is conditioned and Pratap Simha says he will fight from June 1

ಮೈಸೂರು: ಗ್ಯಾರಂಟಿ ಕಾರ್ಡ್ (Congress Guarantee) ಅಲ್ಲಿ ಕಂಡೀಷನ್ ಅಪ್ಲೈ ಅಂತ ಎಲ್ಲೂ ಹಾಕಿಲ್ಲ. ಎಲ್ಲ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು. ಜೂನ್ 1ರವರೆಗೆ ಕಾಯುತ್ತೇನೆ. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ (Electricity Bill) ಬಂದರೆ ಬಿಲ್ ಕಟ್ಟಬೇಡಿ. 200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತೀರೋ ಅದಕ್ಕೆ ಹೆಚ್ಚುವರಿಯನ್ನು ಮಾತ್ರ ಕಟ್ಟಿ. ಕಂಡೀಷನ್ ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್‌ ಸಿಂಹ, ಜನರು ನಿಮ್ಮ‌ ಮುಖ ನೋಡಿ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ ಎಂಬುದು ನೆನಪಿರಲಿ. ನಾವು ಸೋತಿದ್ದೇವೆ. ಆದರೆ, ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ ಎಂದು ಕಿಡಿಕಾರಿದರು.

ಧಮ್ಕಿ ಹಾಕಿ ಎಫ್‌ಐಆರ್

ಸಿದ್ದರಾಮಯ್ಯ ಅವರಾಗಲೀ ಅಥವಾ ನಾನಾಗಲೀ ಯಾರೂ ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಅನ್ನೋದು ಯಾರೋ ಸ್ವತ್ತೂ ಅಲ್ಲ. ಆದರೆ, ಪೊಲೀಸ್ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ. ವಿಧಾನಸೌಧದದಲ್ಲಿ ಕುಳಿತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ? ಮೊದಲು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವುದನ್ನು ನಿಲ್ಲಿಸಿ. ಫೆಬ್ರವರಿಯಲ್ಲಿ ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಈಗ ಧಮ್ಕಿ ಹಾಕಿ ಎಫ್‌ಐಆರ್ ಮಾಡಿಸಿದ್ದಾರೆ ಎಂದು ಪ್ರತಾಪ್‌ ಸಿಂಹ ಆರೋಪ ಮಾಡಿದರು.

ಇದನ್ನೂ ಓದಿ: Jobs News : ಕೇಂದ್ರ ಸರ್ಕಾರದ ಉದ್ಯೋಗ ಬೇಕೇ? ಯುಪಿಎಸ್‌ಸಿ, ಎಸ್‌ಎಸ್‌ಸಿಯ ಈ ವೇಳಾಪಟ್ಟಿ ನೋಡಿ!

ವಿಧಾನಸಭಾ ಚುನಾವಣಾ ಫಲಿತಾಂಶದ ಎಫೆಕ್ಟ್ ಲೋಕಸಭಾ ಚುನಾವಣೆ ಮೇಲೆ ಬೀರಲ್ಲ. ದೇಶಕ್ಕೆ ಎಂಥ ನಾಯಕ ಬೇಕು ಎಂಬುದು ಕನ್ನಡಿಗರಿಗೆ ಗೊತ್ತಿದೆ. ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳಬೇಕಿತ್ತು. ಎಚ್ಚೆತ್ತು ಕೊಂಡಿದ್ದರೆ ಬಿಜೆಪಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಸ್ಕೀಂ ಪರ ನಾನು ಇದ್ದೇನೆ. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮವು ವಿಧಾನಸಭೆಯಲ್ಲಿ ಇದೆ. ಎಸ್.ಎಂ‌. ಕೃಷ್ಣ ಕಾಲದಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಕರ್ನಾಟಕದಲ್ಲಿ ಪಾಸ್ ಆಗಿದೆ. ಮುಂದಿನ ತಲೆಮಾರನ್ನು ಅಪಾಯಕ್ಕೆ ತಳ್ಳಬೇಡಿ ಎಂದು ಪ್ರತಾಪ್‌ ಸಿಂಹ ಸಲಹೆ ನೀಡಿದರು.

ಅಭಿವೃದ್ಧಿಗಾಗಿ ಯಾರ ಕಾಲನ್ನು ಬೇಕಿದ್ದರೂ ಹಿಡಿಯುವೆ

ಮೈಸೂರಿನ ಅಭಿವೃದ್ಧಿಗಾಗಿ ನಾನು ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ. ಮೈಸೂರು-ಕೊಡಗು ಅಭಿವೃದ್ಧಿಗಾಗಿ ಕೈ, ಕಾಲು ಹಿಡಿಯುತ್ತೇನೆ, ಅಂಗಲಾಚುತ್ತೇನೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ಅಭಿವೃದ್ಧಿ ಪರ ಇರುವವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ನಾನು ಸಿಎಂ ಮನೆಗೆ ಹೋಗುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ಸರ್ಕಾರ ತಡೆದ ವಿಚಾರದ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಎಷ್ಟು ಪರ್ಸೆಂಟ್ ಕಮಿಷನ್‌ಗಾಗಿ ಕಾಯುತ್ತಿದ್ದೀರ? ಪರ್ಸೆಂಟೇಜ್‌ಗಾಗಿ ನೀವು ಇಂಥ ಆದೇಶ ಮಾಡಿದ್ದೀರಾ? ಆಡಳಿತ ನಡೆಸುವವರು ಬದಲಾಗುತ್ತಾರೆ. ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ. ವ್ಯವಸ್ಥೆ ಹೀಗಿರುವಾಗ ಕಾಮಗಾರಿಗೆ ಹಣ ಬಿಡುಗಡೆ ಆಗುವುದನ್ನು ಯಾಕೆ ತಡೆದಿದ್ದಿರ ಎಂದು ಪ್ರಶ್ನೆ ಮಾಡಿದರು.

ಕಂಡೀಷನ್‌ ಬಗ್ಗೆ ಪ್ರತಾಪ್‌ ಹೇಳಿದ್ದೇನು?

40% ಕಮೀಷನ್ ತನಿಖೆ ಮಾಡಿ

ಬಿಜೆಪಿ ಸರ್ಕಾರದ ಮೇಲೆ‌ 40% ಕಮಿಷನ್, ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ತಕ್ಷಣ ತನಿಖೆ ಮಾಡಿ. 40% ಕಮೀಷನ್ ಸರ್ಕಾರ ಎಂದು ಊರೂರು ತಿರುಗಿ ಪ್ರಚಾರ ಮಾಡಿದ್ದೀರ. ಈಗ ನೀವೇ ಅಧಿಕಾರಕ್ಕೆ ಬಂದಿದ್ದಿರ ತನಿಖೆ ಮಾಡಿ. ತಪ್ಪು ಮಾಡಿದವರನ್ನು ಶಿಕ್ಷಿಸಿ ನಾನೇ ಬಂದು ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ. ಕಮಿಷನ್ ಪಡೆದವರನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು. ಈ ಜವಾಬ್ದಾರಿ ನಿಭಾಯಿಸದೆ ಇದ್ದರೆ ನೀವು ಹೇಳಿದ್ದು ಸುಳ್ಳು ಎಂದು ಸಾಬೀತು ಆಗುತ್ತದೆ ಎಂದು ಪ್ರತಾಪ್‌ ಸಿಂಹ ಹೇಳಿದರು.

ಇದನ್ನೂ ಓದಿ: Free Bus Rides: ತಕ್ಷಣವೇ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಮಾಡಿ; ಸಿಎಂಗೆ ಸಾರಿಗೆ ಯೂನಿಯನ್‌ ಮೊರೆ

ಗ್ಯಾರಂಟಿ ಬಗ್ಗೆ ಪ್ರತಾಪ್‌ ಸಿಂಹ ಹೇಳಿದ್ದೇನು?

ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ

ನನಗೆ ನೋವಾಗಿದ್ದು ನಿಜ. ನಾನು ಅಂತರಾಳದಿಂದಲೇ ನಮ್ಮ ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ. ನಮ್ಮ‌ ಕಾರ್ಯಕರ್ತರ ಟಾರ್ಗೆಟ್ ನಿಧಾನವಾಗಿ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ನಮ್ಮ‌ ಕಾರ್ಯಕರ್ತರನ್ನು ಅಪಾಯಕ್ಕೆ ತಳ್ಳಿದ್ದಕ್ಕೆ ನಾನು ಕ್ಷಮೆ ಕೇಳಿದ್ದೇನೆ. ನಮ್ಮ ಕಾರ್ಯಕರ್ತರು ನಿಜವಾಗಿಯೂ ನೊಂದಿದ್ದಾರೆ. ದೇಶ, ಧರ್ಮ ಅಂತ ನಮ್ಮ ಕಾರ್ಯಕರ್ತರು ದುಡಿಯುತ್ತಾರೆ. ನಮ್ಮಲ್ಲಿ ಗುತ್ತಿಗೆದಾರಿಕೆ ಮಾಡುವ ಕಾರ್ಯಕರ್ತರೇ ಕಡಿಮೆ ಎಂದು ಪ್ರತಾಪ್‌ ಸಿಂಹ ಹೇಳಿದರು.

Exit mobile version