Site icon Vistara News

Karnataka Election 2023: ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದರು ಎಂದ ಸಿದ್ದರಾಮಯ್ಯ

Congress has destroyed the state honour dignity says Siddaramaiah Karnataka Election 2023 updates

ಕೋಲಾರ: ರಾಜ್ಯದ ಮಾನ, ಮರ್ಯಾದೆ, ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳುವ ಮೂಲಕ ಎಡವಟ್ಟಿನ ಭಾಷಣವನ್ನು ಮಾಡಿದ್ದಾರೆ.

ಜೈ ಭಾರತ್‌ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ

ಕೋಲಾರದಲ್ಲಿ ಭಾನುವಾರ (ಏ. 16) ಏರ್ಪಡಿಸಲಾಗಿದ್ದ ಜೈ ಭಾರತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಂದು ವರ್ಷ ಎರಡು ತಿಂಗಳು ಇತ್ತು. ಹಾಗಾಗಿ ಸುಮಾರು ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಆಡಳಿತವನ್ನು ನಡೆಸುತ್ತಿದೆ. ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನೆಲ, ಜಲ, ಭಾಷೆಯನ್ನು ರಕ್ಷಣೆ ಮಾಡುವ ಪಕ್ಷಕ್ಕೆ ನೀವು ಮತ ನೀಡಬೇಕು. ಈ ಬಗ್ಗೆ ವಿಚಾರ ಮಾಡಿ ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: Atiq Ahmed: ಅತೀಕ್‌, ಅಶ್ರಫ್‌ ಹತ್ಯೆ; ಅಯೋಧ್ಯೆಯಲ್ಲಿ ಅಲರ್ಟ್‌, ಯೋಗಿಯ ಎಲ್ಲ ಕಾರ್ಯಕ್ರಮ ರದ್ದು

ಕೇಂದ್ರದಲ್ಲಿ ಬಿಜೆಪಿಯು 9 ವರ್ಷಗಳಿಂದ ಸರ್ಕಾರವನ್ನು ನಡೆಸುತ್ತಾ ಬಂದಿದೆ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ಐದು ವರ್ಷದಲ್ಲಿ 3 ಜನ ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. 1 ವರ್ಷ 2 ತಿಂಗಳು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. 2 ವರ್ಷ ಬಿ.ಎಸ್.‌ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಬಳಿಕ ಸುಮಾರು 2 ವರ್ಷಗಳ ಕಾಲ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬೊಮ್ಮಾಯಿ ಅವರು ತಮ್ಮದು ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯದ ಅಭಿವೃದ್ಧಿ ವೇಗವಾಗಿ ಆಗುತ್ತದೆ ಎಂದು ಹೇಳಿದ್ದರು. ಆದರೆ, ರಾಜ್ಯ ಹಿಂದೆಂದೂ ಇಷ್ಟೊಂದು ಕೆಟ್ಟ ಹೆಸರನ್ನು ತೆಗೆದುಕೊಂಡಿರಲಿಲ್ಲ. ಈ ಡಬಲ್‌ ಎಂಜಿನ್‌ ಸರ್ಕಾರ ಬಂದ ಮೇಲೆ ಹೀಗಾಗಿದೆ. ರಾಜ್ಯದ ಮಾನ, ಮರ್ಯಾದೆ ಹಾಗೂ ಗೌರವವನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬಾಯಿ ತಪ್ಪಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ರಾಜ್ಯದ ಮಾನ, ಮರ್ಯಾದೆ ಹಾಗೂ ಗೌರವವನ್ನು ಹಾಳು ಮಾಡಿದ್ದಾರೆ ಎಂದು ಹೇಳುವ ಬದಲು, ಕಾಂಗ್ರೆಸ್‌ನವರು ಹಾಳು ಮಾಡಿದ್ದಾರೆ ಎಂದು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ವೇದಿಕೆಯಲ್ಲಿದ್ದ ಯಾವುದೇ ಮುಖಂಡರು ಹಾಗೂ ಕಾರ್ಯಕರ್ತರೂ ಸಹ ಸರಿಪಡಿಸುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಾವಾಡಿದ ಮಾತಿನ ಬಗ್ಗೆಯೂ ಗೊತ್ತಾಗಲಿಲ್ಲ. ಹಾಗೇ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.

ಬಿಜೆಪಿಗೆ ವೋಟ್ ಹಾಕಿ ಎಂದಿದ್ದ ಸಿದ್ದರಾಮಯ್ಯ

ಎರಡು ತಿಂಗಳ ಹಿಂದೆ ವಿಜಯಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ವೀರಾವೇಶದಿಂದ ಭಾಷಣ ಮಾಡುತ್ತ, ನೀವೆಲ್ಲ ತಪ್ಪದೇ ಬಿಜೆಪಿಗೆ ವೋಟ್ ಹಾಕಿ, ವೋಟ್ ಹಾಕಿಸಿ ಎಂದು ಕರೆ ಕೊಟ್ಟಿದ್ದರು! ಅವರ ಮಾತು ಕೇಳಿ ಪಕ್ಷದ ಕಾರ್ಯಕರ್ತರು ಹೌಹಾರಿದ್ದರು. ತಕ್ಷಣ ಸಾವರಿಸಿಕೊಂಡ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ವೋಟ್ ಹಾಕಿ, ವೋಟ್ ಹಾಕಿಸಿ ಎಂದು ತಪ್ಪನ್ನು ಸರಿಪಡಿಸಿಕೊಂಡಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಬದಲು ಜಯಮ್ಮ ಎಂದಿದ್ದರು!

ಈ ಹಿಂದೆ ಕಾಂಗ್ರೆಸ್ ಜನಜಾಗೃತಿ ಸಮಾವೇಶದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಮಾಡಿದವರು ನಾವು ಎನ್ನುವ ಬದಲು, ಕಿತ್ತೂರು ರಾಣಿ ಜಯಮ್ಮ ಜಯಂತಿ ಎಂದು ಹೇಳಿ ನಗೆಪಾಟಲಿಗೀಡಾಗಿದ್ದರು.

ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇಲ್ಲ ಎಂಬ ಸಿದ್ದು ಹೇಳಿಕೆಯುಳ್ಳ ವಿಡಿಯೊ

ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದಿದ್ದ ಸಿದ್ದು

ವರ್ಷದ ಹಿಂದೆ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ, ಈ ದೇಶವನ್ನು ಉಳಿಸುವುದಕ್ಕೋಸ್ಕರ, ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೋಸ್ಕರ ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ದೊಡ್ಡ ದನಿಯಲ್ಲಿ ಹೇಳಿದ್ದರು! ಇದನ್ನು ಕೇಳಿ ಕಾರ್ಯಕರ್ತರು ಬೇಸ್ತು ಬಿದ್ದಿದ್ದರು.

ಇದನ್ನೂ ಓದಿ: Karnataka Election 2023: ನಾನು ಸಿಎಂ ರೇಸ್‌ನಲ್ಲಿ ಇಲ್ಲ; ಮುಖ್ಯಮಂತ್ರಿ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ: ಸಿದ್ದು, ಡಿಕೆಶಿಗೆ ಖರ್ಗೆ ಖಡಕ್‌ ವಾರ್ನಿಂಗ್

ರಾಹುಲ್ ಪಾದಯಾತ್ರೆ ಬದಲು ಮೋದಿ ಪಾದಯಾತ್ರೆ

ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವುದಕ್ಕಾಗಿ ನರೇಂದ್ರ ಮೋದಿ ಅವರು ದೇಶಾದ್ಯಂತ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಈ ಹಿಂದೆ ಭಾಷಣವೊಂದರಲ್ಲಿ ಸಿದ್ದರಾಮಯ್ಯ ಹೇಳಿ ಅಚ್ಚರಿ ಮೂಡಿಸಿದ್ದರು.

Exit mobile version