Site icon Vistara News

R Ashok: ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ: ಆರ್‌. ಅಶೋಕ್‌

Congress has no right to change district name says Opposition party Leader R Ashok

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಿದ್ದು, ಸದನದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ತಿಳಿಸಿದರು.

ಬಿಜೆಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾದ ಮುಡಾ ಹಗರಣದ ಬಗ್ಗೆ ಮಾತನಾಡಲು ಸದನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ ಮಂಡಿಸಲಾಗುವುದು. ಜುಲೈ 15ರಿಂದ ನಡೆಯಲಿರುವ ಸದನವನ್ನು ಇನ್ನೂ ಒಂದು ವಾರ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಝೀಕಾ ವೈರಸ್‌, ಡೆಂಘೀ ರೋಗಗಳು ಹೆಚ್ಚಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಆಗ್ರಹಿಸಿದ್ದರೂ ಅದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ದರಗಳ ಏರಿಕೆಯಿಂದಾಗಿ ರೈತರ ಆತ್ಮಹತ್ಯೆ ಹೆಚ್ಚಿದೆ. ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿದೆ. ಇಲಾಖೆಗಳ ಅನುದಾನ ಕಡಿತ, 700 ಕೋಟಿ ರೂ. ಹಾಲು ಪ್ರೋತ್ಸಾಹಧನ ಬಾಕಿ ಮೊದಲಾದ ಸಮಸ್ಯೆಗಳು ಕಂಡುಬಂದಿದೆ. ಒಂದೇ ವರ್ಷದಲ್ಲಿ ಕಾಂಗ್ರೆಸ್‌ ಶಿಶುಪಾಲನಂತೆ ನೂರು ತಪ್ಪುಗಳನ್ನು ಮಾಡಿದೆ ಎಂದು ದೂರಿದರು.

ಇದನ್ನೂ ಓದಿ: ICC T20 Rankings : ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಭರ್ಜರಿ ಜಿಗಿತ ಕಂಡ ಋತುರಾಜ್​​

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಯಾರೂ ಭಾಗಿಯಾಗಿಲ್ಲ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಆದರೀಗ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಎಸ್‌ಐಟಿ ಮೂಲಕ ಎಲ್ಲರಿಗೂ ಕ್ಲೀನ್‌ ಚಿಟ್‌ ನೀಡುವ ಪ್ರಯತ್ನ ನಡೆದಿದೆ. ಇದರಲ್ಲಿ ಇನ್ನೂ ಮೂವರು ಸಚಿವರು ಶಾಮೀಲಾಗಿದ್ದಾರೆ. ನಿಗಮದ ಅಧ್ಯಕ್ಷರೇ ಶಾಂಗ್ರೀಲಾ ಹೋಟೆಲ್‌ನಲ್ಲಿ ಸಭೆ ಸೇರಿದ್ದರ ಬಗ್ಗೆ ಹೇಳಿದ್ದಾರೆ. ಈ ಕುರಿತು ಬಿಡುಗಡೆಯಾದ ಆಡಿಯೋದಲ್ಲಿ ಎಲ್ಲವೂ ಹೊರಬಂದಿದೆ ಎಂದು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ 187 ಕೋಟಿ ರೂ. ಹಣ ದಲಿತ ಕಾಲೋನಿಗೆ ರಸ್ತೆ ನಿರ್ಮಿಸಲು, ಮನೆ ನಿರ್ಮಿಸಲು ಮೀಸಲಾಗಿತ್ತು. ಜತೆಗೆ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿದ್ದು, ಇದು ದೊಡ್ಡ ಲೂಟಿಯ ಪ್ರಯತ್ನ. ಇದರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದರು.

ಕಾಂಗ್ರೆಸ್‌ಗೆ ಹೆಸರು ಬದಲಿಸುವ ಹಕ್ಕಿಲ್ಲ

ರಾಮನಗರ ಜಿಲ್ಲೆಗೆ ಸ್ಥಳ ಮಹಿಮೆ ಇದೆ. ಈ ಹೆಸರನ್ನು ಕಾಂಗ್ರೆಸ್‌ ನಾಯಕರು ಇಟ್ಟಿಲ್ಲ ಅಂದ ಮೇಲೆ ಅದನ್ನು ತೆಗೆಯಲು ಅವರಿಗೆ ಯಾವುದೇ ಹಕ್ಕು ಇಲ್ಲ. ಕರ್ನಾಟಕದಲ್ಲಿ ರಾಮ-ಕೃಷ್ಣ ಎಂದಿರುವ ಊರುಗಳ ಹೆಸರುಗಳನ್ನು ಬದಲಾಯಿಸುತ್ತಾರಾ? ಶೋಲೆ ಸಿನಿಮಾ ಚಿತ್ರೀಕರಣವಾದಾಗಲೂ ಅಲ್ಲಿ ರಾಮಗಢ ಎಂಬ ಹೆಸರನ್ನೇ ಇಟ್ಟಿದ್ದರು. ಹೆಸರು ಬದಲಾಯಿಸುವ ಬದಲು ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿ. ರಾಮನ ಮೇಲೆ ದ್ವೇಷ ಇದ್ದರೆ ಬೇರೆ ದಾರಿ ನೋಡಿಕೊಳ್ಳಲಿ. ಆಯಾಯ ಜಿಲ್ಲೆಗೆ ಅದರದ್ದೇ ಆದ ಘನತೆ ಇದೆ. ಹುಚ್ಚರಂತೆ, ತುಘಲಕ್‌ರಂತೆ ಎಲ್ಲವನ್ನೂ ಬೆಂಗಳೂರಿಗೆ ಸೇರಿಸಬಾರದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Kannada New Movie: ಮೋಷನ್ ಪೋಸ್ಟರ್‌ನಲ್ಲೇ ಕುತೂಹಲ ಮೂಡಿಸಿದ ವಿಭಿನ್ನ ಕಥಾಹಂದರ ಹೊಂದಿರುವ ‘ಹಗ್ಗ’

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಜೆಡಿಎಸ್‌-ಬಿಜೆಪಿಯಲ್ಲಿ ಸಮನ್ವಯದ ಕೊರತೆ ಇಲ್ಲ ಎಂದು ತಿಳಿಸಿದರು.

Exit mobile version