Site icon Vistara News

Congress Election plan | ಡಿಸೆಂಬರ್‌ ಒಳಗೆ 150 ಟಿಕೆಟ್‌ ಫೈನಲ್‌, 150 ಕ್ಷೇತ್ರ ಗೆಲ್ಲುವ ಗುರಿ: ಸಲೀಂ ಅಹಮದ್‌

saleem ahamad

ಧಾರವಾಡ: ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪಕ್ಷದ ವತಿಯಿಂದ ಸಮೀಕ್ಷೆಗಳು ಆರಂಭಗೊಂಡಿವೆ. ಮೂರು ಹಂತದ ಸರ್ವೆಗಳನ್ನು ಮಾಡಲಾಗಿದ್ದು, ಇದರ ಪ್ರಕಾರ, ಕಾಂಗ್ರೆಸ್‌ ಈಗ ೧೩೦ ಕ್ಷೇತ್ರಗಳಲ್ಲಿ ಮುಂದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಹೇಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದು, ರಾಜ್ಯದಲ್ಲಿ ೧೫೦ ಸೀಟುಗಳನ್ನು ಗೆಲ್ಲುವ ಗುರಿ ಇದೆ ಎಂದು ಹೇಳಿದರು.

ಸ್ಪರ್ಧಾಕಾಂಕ್ಷಿಗಳು ೧೫ರೊಳಗೆ ಅರ್ಜಿ ಸಲ್ಲಿಸಬೇಕು
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳಿಂದ ಈ ಬಾರಿ ಅರ್ಜಿಗಳನ್ನು ಕರೆಯಲಾಗಿದೆ. ಸ್ಪರ್ಧೆ ಮಾಡಲು ಬಯಸುವವರು ನವೆಂಬರ್‌ ೧೫ರ ಒಳಗೆ ಅರ್ಜಿಗಳನ್ನು ತುಂಬಿ ಕೊಡಬೇಕು. ಡಿಸೆಂಬರ್‌ ಒಳಗೆ ೧೫೦ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾರ್ಯ ಆರಂಭವಾಗಿದೆ ಎಂದು ಅವರು ತಿಳಿಸಿದರು.

ಭಾರತ್ ಜೋಡೋ‌ ಪಾದಯಾತ್ರೆಯಿಂದ ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಉಂಟಾಗಿದೆ. ಕಾಂಗ್ರೆಸ್‌ ದೇಶವನ್ನು, ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಅದನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ʻʻನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇಳಿಯುವವರು ನಮ್ಮಲ್ಲಿ ಹಣ ಕೊಟ್ಟು ಅರ್ಜಿ ಹಾಕಬೇಕು. ಆ ಹಣವನ್ನು ಪಕ್ಷ ಸಂಘಟನೆ ಮತ್ತು ನಿರ್ಮಾಣಕ್ಕಾಗಿ ಉಪಯೋಗ ಮಾಡುತ್ತೇವೆ. ಅದರ ಉಸಾಬರಿ ಬಿಜೆಪಿಗೆ ಬೇಕಾಗಿಲ್ಲʼʼ ಎಂದು ಹೇಳಿದರು.

ರಾಹುಲ್‌ ಗಾಂಧಿ ಚುನಾವಣೆ ಅಥವಾ ಅಧಿಕಾರಕ್ಕಾಗಿ ಯಾತ್ರೆ ಮಾಡುತ್ತಿಲ್ಲ. ನಿಜವೆಂದರೆ ಬಿಜೆಪಿ ಜನಸಂಕಲ್ಪ ಯಾತ್ರೆ ಮಾಡುತ್ತಿರುವುದು ಹಣ ಸಂಗ್ರಹ ಮಾಡುವುದಕ್ಕಾಗಿ ಎಂದು ಸಲೀಂ ಅಹಮದ್‌ ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಬಳಿಕ ಈಗ ಅವರಿಗೆ ಜ್ಞಾನೋದಯ ಆಗಿದೆ. ಇದು ಹಣ ಸಂಗ್ರಹ ಯಾತ್ರೆ, ಇದು ೪೦% ಕಮಿಷನ್ ಸರ್ಕಾರ ಇದು, ಇವರಿಗೆ ಜನಸ್ಪಂದನೆ ಮಾಡುವ ಯಾವುದೇ ಅರ್ಹತೆ ಇಲ್ಲ ಎಂದು ಸಲೀಂ ಅಹಮದ್‌ ಹೇಳಿದರು.

ʻʻಇನ್ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ ೯ ಲಕ್ಷ ಕೋಟಿ ರೂ. ಬಂಡವಾಳ ಬಂದಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಎಷ್ಟೋ‌ ಸ್ಟಾರ್ಟಪ್‌ ಕಂಪನಿಗಳು ಬೆಂಗಳೂರು ಬಿಟ್ಟು ಹೊರಹೋಗಿವೆʼʼ ಎಂದು ಛೇಡಿಸಿದರು.

ವಿನಯ ಕುಲಕರ್ಣಿ ಜನುಮದಿನ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಆಯೋಜಿಸಿರುವ ಕಾಂಗ್ರೆಸ್‌ ನಾಯಕ ವಿನಯ ಕುಲಕರ್ಣಿ ಅವರ ಜನುಮ ದಿನ ಆಚರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿನಯ ಕುಲಕರ್ಣಿ ಅವರ ಮೇಲೆ ರಾಜಕೀಯ ಪ್ರೇರಿತ ಆಪಾದನೆ ಮಾಡಲಾಗುತ್ತಿದೆ, ಅವರು ನಮ್ಮ ಪಕ್ಷದ ಮುಖಂಡ. ಅವರ ಕಾರ್ಯಕ್ರಮಕ್ಕೆ ಎಲ್ಲ ನಾಯಕರೂ ಹೋಗುವುದರಲ್ಲಿ ತಪ್ಪಿಲ್ಲ ಎಂದರು.

ʻʻಸರ್ಕಾರ ನೆಲದ‌ ಕಾನೂನಿಗೆ ಗೌರವ ಕೊಡಬೇಕು. ಯಾರು ಅಶಾಂತಿ ತರಲು ಪ್ರಯತ್ನ ಮಾಡುತ್ತಾರೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಲಿ. ಇತ್ತೀಚೆಗೆ ಧಾರವಾಡದಲ್ಲಿ ಕೆಲವು ಸಂಘಟನೆ ಮುಖಂಡರು ಸಮಾಜವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರಕ್ಕೆ ಬದ್ಧತೆ‌ ಇದ್ದರೆ ಯಾವುದೇ ಸಮಾಜ ಇರಲಿ, ಕ್ರಮ ತಗೊಳ್ಳಬೇಕುʼʼ ಎಂದು ಹೇಳಿದರು ಸಲೀಂ ಅಹಮದ್‌.

ಇದನ್ನೂ ಓದಿ | Kharge Congress President | ಬೆಲೆಯೇರಿಕೆ ವಿರುದ್ಧ ಹೋರಾಟ, ಅಧ್ಯಕ್ಷರಾದ ಬೆನ್ನಲ್ಲೇ ಕೇಂದ್ರಕ್ಕೆ ಖರ್ಗೆ ಎಚ್ಚರಿಕೆ

Exit mobile version