Site icon Vistara News

BJP Karnataka : ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರದ ಹುಟ್ಟು: ಸಚಿವ ಡಾ. ಕೆ. ಸುಧಾಕರ್‌ ಆರೋಪ

karnataka-congress-decided to file ED complaint against Dr K Sudhakar

ಬೆಂಗಳೂರು: ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ ಸಾಧನೆ ಅಂದರೆ ಅದು ಭ್ರಷ್ಟಾಚಾರ ಮಾತ್ರ. ಭ್ರಷ್ಟಾಚಾರ ಎನ್ನುವ ಪದದ ಹುಟ್ಟಿಗೆ ಕಾರಣವಾಗಿರುವುದೇ ಕಾಂಗ್ರೆಸ್‌ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ‌ ( ) ಸುದ್ದಿಗೋಷ್ಠಿಯಲ್ಲಿ ಡಾ. ಕೆ. ಸುಧಾಕರ್‌ ಮಾತನಾಡಿದರು.

60 ವರ್ಷ ದೇಶವಾಳಿದ ಕಾಂಗ್ರೆಸ್‌ ಯಾವುದೇ ಯೋಜನೆ ಮಾಡಿದರೂ ಅದರಲ್ಲಿ ಭ್ರಷ್ಟಾಚಾರ ಇರುತ್ತದೆ. ಅವರಿಗೆ ಅದು ರಕ್ತಗತವಾಗಿ ಬಂದಿದೆ. ಉಳಿದವರು ಕೂಡ ಹಾಗೆಯೇ ಎಂದು ಅಂದುಕೊಂಡು ಅತ್ಯುತ್ತಮ ಆಡಳಿತ ನೀಡುತ್ತಿರುವ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.

2013-2018ರ ತನಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ಈ ಸರ್ಕಾರ 5 ವರ್ಷ ಮಾಡಿದ್ದು ಭ್ರಷ್ಟಾಚಾರ ಮಾತ್ರ. ಆದರೆ, ಇವರು ಇವಾಗ ನಮ್ಮ ಮೇಲೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. 2013ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಬಗ್ಗೆ ನಾವು ಹೇಳಿದ್ದೆವು. ಅದೇ ರೀತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಕೂಡ ಹೇಳಿತ್ತು. ಅವರ ಸರ್ಕಾರ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ ಮಾಡಿತು. ಲೋಕಾಯುಕ್ತ ಸಂಸ್ಥೆಯನ್ನ ಮುಚ್ಚಿದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಲೋಕಾಯುಕ್ತದಂತಹ ಸಂಸ್ಥೆಗಳು ರಾಜ್ಯದಲ್ಲಿ ಇರಬೇಕು ಎಂದು ತಿಳಿಸಿತ್ತು. ಸಿಎಂ ಮೇಲೆ 50-60 ಕಂಪ್ಲೇಟ್‌ ಬಂದ ಮೇಲೆ ತನಿಖೆ ಆಗುತ್ತೆ ಅನ್ನುವ ಭಯಭೀತಿಯಿಂದ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ ಎಸಿಬಿ ಸ್ಥಾಪಿಸಿ ಭ್ರಷ್ಟಾಚಾರ ಮುಚ್ಚಿಕ ಹಾಕುವ ಪ್ರಯತ್ನ ಅದಾಗಿತ್ತು ಎಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರ ಮಾಡಿರೋದೆ ಆಗಿದ್ದರೆ, ನಾವು ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪಿಸಲು ಸ್ಟೇ ತರುತ್ತಿದ್ದೆವು. ಆದರೆ, ನಾವು ಬಂದು ಲೋಕಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇವೆ. ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂಬುದು ನಿಜವಾಗಿದ್ದರೆ ಇವತ್ತು ನಾವು ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡುತ್ತಿರಲಿಲ್ಲ. ಆದರೆ ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನಿಗಳು ಯಾವ ರೀತಿ ಹೇಳಿದ್ದರೋ, ಹಾಗೆಯೇ ನಾವು ಅದಕ್ಕೆ ಕಾಯಕಲ್ಪ ಕೊಟ್ಟಿದ್ದೇವೆ ಎಂದರು.

ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮಿಷನ್ ಹೊಡೆದ ಖ್ಯಾತಿ ನಿಮ್ಮದು . ಅಲ್ಪಸಂಖ್ಯಾತರಿಗೆ, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ನೀವೇ ಉದ್ಧಾರಕರು ಅಂತ ಹೇಳಿಕೊಂಡು ತಿರುಗುವ ನೀವು 2900 ಎಕ್ರೆ ಜಾಗವನ್ನು ಗುಳುಂ ಮಾಡಿದವರು ನೀವು. ಜನರ ಮೈಂಡ್‌ ಅನ್ನು ತಮ್ಮ ಕಡೆ ತಿರುಗಿಸಲು ಇಂತಹ ಆರೋಪವನ್ನು ಬಿಜೆಪಿ ವಿರುದ್ಧ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರ ಆಪ್ತನ ಮನೆ ಮೇಲೆ 2017ರಲ್ಲಿ ರೇಡ್ ಆದಾಗ ಸಿಕ್ಕ ಡೈರಿಯಲ್ಲಿ 1000 ಕೋಟಿ ರೂಪಾಯಿ ಹೈಕಮಾಂಡ್‌ಗೆ ಹೋದ ಬಗ್ಗೆ ಉಲ್ಲೇಖವಿದೆ. ಆದರೆ ಇದು ಯಾರ ಹಣ? ಬಜೆಟ್ ಮೂಲಕವೇ ಸ್ಪೆಷಲ್ ಅನೌನ್ಸ್‌ಮೆಂಟ್‌ ಆಗಿತ್ತಾ ಎಂದು ಪ್ರಶ್ನಿಸಿದರು.

ಪಿಎಸ್ಐ ಸ್ಕ್ಯಾಮ್ ಆಗಿದೆ ಅಂತ ಹೇಳ್ತೀರಿ. ಇದು ನಿಮ್ಮ ಕಾಲದಲ್ಲೇ ಆಗಿದ್ದು. ಮಾಜಿ ಪೊಲೀಸ್‌ ಅಧಿಕಾರಿ ನಿಮ್ಮ ಗೃಹ ಇಲಾಖೆಯ ಸಹಲೆಗಾರರು ಕೆಂಪಯ್ಯ ಹೆರಿನಲ್ಲೇ ಕೇಸ್‌ಗಳು ದಾಖಲಾಗಿದೆ. ಕಸ ವಿಲೇವಾರಿ ಮಾಡೋದ್ರಲ್ಲೂ 1,066 ಕೋಟಿ ರೂ. ಹಗರಣ ಮಾಡಿದ್ದಾರೆ. ಕಸ ವಿಲೇವಾರಿ ಮಾಡುವುದರಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. 2015-16ರಲ್ಲಿ 385ಕೋಟಿ ಖರ್ಚಾಗಿದೆ‌. ಕೇವಲ ಒಂದೇ ವರ್ಷದಲ್ಲಿ 681ಕೋಟಿ ಹೆಚ್ಚಾಗಿದೆ. ಇದು ಯಾವ ಸ್ಕೀಮ್, ಎಷ್ಟು ಪರ್ಸೆಂಟ್ ಆಗಿದೆ ಹೇಳಿ? ಬೆಂಗಳೂರಿಗೆ ಹೊರ ಹೋಗುವ ಕಸ ಮಾಯ ಆಗಿ ಹೋಯ್ತಾ? ನಾನು ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಅಧ್ಯಕ್ಷನಾಗಿದ್ದಾಗ ನೋಡಿದ್ದೇನೆ. ಆ ಪ್ರದೇಶದ ಜನ ರೋಗಗ್ರಸ್ತರಾಗಿದ್ರು ಎಂದೂ ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದಾರೆ.

ಪಿಎಂ ಆವಾಸ್‌ ಯೋಜನೆಯಲ್ಲಿ 250 ಕೋಟಿ ಭ್ರಷ್ಟಾಚಾರ ನಡೆದಿದೆ. 50,000 ಮನೆ ಕಟ್ಟಿಕೊಡಬೇಕು. 10 ಕಂಟ್ರಾಕ್ಟರ್‌ಗಳನ್ನು ಸೆಲೆಕ್ಟ್‌ ಮಾಡಿ, ಅರ್ಹತೆ ಇಲ್ಲದವರಿಗೆ ಟೆಂಡರ್‌ ಕೊಟ್ಟು, ಕೆಟಿಟಿಪಿ ಆಕ್ಟ್‌ ವಿರುದ್ಧ ಟೆಂಡರ್‌ ಕೊಟ್ಟು ಅದರಲ್ಲಿ ಭ್ರಷ್ಟಾಚಾರದ ಮಾಡಿದಿದ್ದೀರಿ. ಕೇಂದ್ರ ಕೊಟ್ಟಿದ್ದ ಎರಡೂವರೆ ಸಾವಿರ ಕೋಟಿ ರೂಪಾಯಿಗಳಲ್ಲಿ 250 ಕೋಟಿ ಗುಳುಂ ಮಾಡಿ ಬಡವರ ಹೊಟ್ಟೆಗೆ ಹೊಡೆದ ಖ್ಯಾತಿ ನಿಮ್ಮದು ಎಂದು ಹೇಳಿದರು.

ಸೈನಿಕರ ಶವ ಪೆಟ್ಟಿಗೆಯಲ್ಲೇ ದುಡ್ಡು ತಿಂದ ಕಾಂಗ್ರೆಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿದಂತೆ ಎಲ್ಲದಲ್ಲೂ ದುಡ್ಡು ತಿಂದಿದೆ. ಪಕ್ಷ ಹಾಗೂ ನಾಯಕರ ಮೇಲೆ ಇರುವುದೇ ಭ್ರಷ್ಟಾಚಾರದ ಹಗರಣ. ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್‌ ತನ್ನ ಆಡಳಿತದ 5 ವರ್ಷದಲ್ಲಿ 13,840 ಕೋಟಿ ಕೇಂದ್ರ ಸರ್ಕಾರದ ನೆರವಿನಿಂದ ಕೇವಲ 43. ಕಿ.ಮೀ ಮಾರ್ಗ ಮಾಡಿತ್ತು. ಆದರೆ ನಾವು 75 ಕಿ.ಮೀ., 61 ಸ್ಟೇಷನ್‌ ನಿರ್ಮಿಸಿದ್ದೇನೆ. 30,695 ಕೋಟಿ ಖರ್ಚು ಮಾಡಿ ಬಿಜೆಪಿ ಸರ್ಕಾರ ಬದ್ಧತೆ ಮತ್ತು ಅಭಿವೃದ್ಧಿಯ ಅಜೆಂಡಾವನ್ನು ತೋರಿಸಿದ್ದೇವೆ ಎಂದರು .

ಮಹಿಳಾ ಮತ್ತು ಮಕ್ಕಳ ಇಲಾಖೆ, ಪಡಿತರ ಇಲಾಖೆ, ನೀರಾವರಿ, ಉನ್ನತ ಶಿಕ್ಷಣ, ಆರೋಗ್ಯ ಇಲಾಖೆ, ಗಣಿ ಇಲಾಖೆ ಎಲ್ಲಿ ನೋಡಿದರೂ ಕಾಂಗ್ರೆಸ್‌ನದ್ದು ಭ್ರಷ್ಟಾಚಾರದ ಇತಿಹಾಸ ಕಾಣುತ್ತದೆ. ಪರಿಶಿಷ್ಟ ಜಾತಿ, ಪಂಗಡ ಜನರ ಪ್ರತಿನಿಧಿ ಅಂತ ಹೇಳಿಕೊಳ್ಳುವ ನೀವು ಮೀಸಲಾತಿ ಹೆಚ್ಚಳ ನೀಡಲಿಲ್ಲ. ನಿಮಗೆ ಬೇಕಾಗಿದ್ದು ಮತ ಮಾತ್ರ. ಅವರ ಅಭಿವೃದ್ಧಿ ಬೇಕಾಗಿರಲಿಲ್ಲ. ನಮ್ಮ ಸರ್ಕಾರ ಅವರಿಗೆ ಬದ್ಧತೆಯಿಂದ ಮೀಸಲಾತಿ ನೀಡಿದೆ. ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವ ನಿಮ್ಮಿಂದ ಏನಾದರೂ ಉಪಯೋಗವಾಗಿದೆಯೇ? ಎಂದು ಪ್ರಶ್ನಿಸಿದರು.

ಸೋಲಾರ್ ಹಗರಣದ ರೂವಾರಿ ಯಾರು..? ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿ ಮಾಡದೆ ಗುಳುಂ ಮಾಡಿದ್ದು ಯಾರು..? ಹಾಸಿಗೆ, ದಿಂಬಿನಲ್ಲೂ ಲಂಚ ಹೊಡೆದಿದ್ದು ಯಾರು.. ಈ ಎಲ್ಲಾ ಪ್ರಶ್ನೆಗಳಿಗೆ ನೇರ ಉತ್ತರ ಕಾಂಗ್ರೆಸ್‌. ಮೋದಿ ಸರ್ಕಾರ ಎರಡೂವರೆ ವರ್ಷದಿಂದ ಕೋವಿಡ್‌ ಬಂದಾಗಿನಿಂದ ಗರೀಬ್‌ ಕಲ್ಯಾಣ ಯೋಜನೆ ಮೂಲಕ ದೇಶದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದೆ. ಹೊರ ದೇಶಗಳಲ್ಲಿ ನಮ್ಮ ದೇಶದ ಜನರನ್ನು ಮಾತ್ರವಲ್ಲ, ಬೇರೆ ದೇಶದ ಜನರನ್ನು ಕೂಡ ಲಸಿಕೆ ಕೊಟ್ಟು ರಕ್ಷಣೆ ಮಾಡಿದ್ದೇವೆ. ವಸುಧೈವ ಕುಟುಂಬಕಂ ತತ್ವದಲ್ಲಿ ನಡೆಯುತ್ತಿದೆ ಬಿಜೆಪಿ ಮುನ್ನಡೆಯುತ್ತಿದೆ ಎಂದರು.

ಇದನ್ನೂ ಓದಿ | Karnataka Election | ಕೋಲಾರದಲ್ಲಿ ಸ್ಪರ್ಧೆ ನಿರ್ಧಾರ ಸಿದ್ದರಾಮಯ್ಯಗೆ ಮಾರಕ, ಬಿಜೆಪಿ ಗೆಲ್ಲಿಸ್ತೀವಿ ಎಂದ ಸುಧಾಕರ್‌

ನಮ್ಮ ಸರ್ಕಾರ ಪ್ರಕೃತಿ ವಿಕೋಪದ ನಡುವೆ, ಶತಮಾನದ ಸಮಸ್ಯೆ ಕೋವಿಡ್‌ ಎದುರಿಸಿ ಗೆದ್ದಿದೆ. ಜೀವ ಉಳಿಸಿ, ಜೀವನ ಮುಂದುವರೆಸುವ ಕಠಿಣ ಸವಾಲು ಗೆದ್ದು ಅತ್ಯುತ್ತಮ ಕೆಲಸ ಮಾಡಿದೆ. ಹೀಗಾಗಿ ಹೂಡಿಕೆ ಹೆಚ್ಚಾಗಿ ಬಂದಿದೆ. ರಾಜ್ಯದ ಆಡಳಿತದ ಬಗ್ಗೆ ನಂಬಿಕೆಯಿಂದ ಇವೆಲ್ಲಾ ನಡೆದಿದೆ. ಆರೋಗ್ಯ ಇಲಾಖೆಯಲ್ಲಿ ಭಾರೀ ಬದಲಾವಣೆ ಆಗಿದೆ. ನೇಮಕಾತಿಯಿಂದ ಹಿಡಿದು, ಮೆಡಿಕಲ್‌ ಕಾಲೇಜು ಸ್ಥಾಪನೆ ತನಕ ಎಲ್ಲವೂ ದಾಖಲೆಯೇ. ನಾವು ಹೇಳಿಕೊಳ್ಳುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್‌ ಏನು ಮಾಡಿದೆ. ಕೇವಲ ಆರೋಪ ಮಾಡುವುದೊಂದೇ ಅವರ ಕೆಲಸ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಜನರು ಅಭಿವೃದ್ಧಿ ಅಜೆಂಡಾದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಮುಂದಿನ ಬಾರಿ 125-150 ಸೀಟುಗಳನ್ನು ಗೆಲ್ಲಿಸಿ ಮತ್ತೊಮ್ಮೆ ಅಧಿಕಾರ ಮಾಡಲು ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

Exit mobile version