ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ನಿಮಿತ್ತ ಅವರ ಆಪ್ತರು ಆಚರಿಸಲು ಮುಂದಾಗಿರುವ ಕಾರ್ಯಕ್ರಮಕ್ಕೆ ಇದೀಗ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಟ್ಟುಹಬ್ಬವನ್ನು ಆಚರಿಸುವ ಬದಲಿಗೆ ಬುದ್ಧ-ಬಸವ-ಅಂಬೇಡ್ಕರ್ ತತ್ವಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಎಲ್ಲರೂ ಮಾಡಿ ಎಂದು ತಿಳಿಸಿದ್ದಾರೆ.
ಜುಲೈ 21ರಂದು ಮಲ್ಲಿಕಾರ್ಜುನ ಖರ್ಗೆ 80ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದೇ ದಿನ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅವರಿಗೆ ಇ.ಡಿ. ನೋಟಿಸ್ ನೀಡಿರುವುದರ ವಿರುದ್ಧ ಪ್ರತಿಭಟನೆ ನಡೆಯುತ್ತದೆ. ಇದನ್ನೇ ನೆಪವಾಗಿಸಿಕೊಂಡಿರುವ ಖರ್ಗೆ, ಸಿದ್ದರಾಮಯ್ಯ ಅವರಿಗೆ ತಿವಿದಿದ್ದಾರೆ.
ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ
ಇದೇ ಜುಲೈ 21ಕ್ಕೆ 80 ವರ್ಷ ಪೂರ್ಣಗೊಳ್ಳುತ್ತಿದೆ. ನಾಡಿನ ಸರ್ವ ವರ್ಗಗಳ ಪ್ರೀತಿ ಹಾಗೂ ಸಹಕಾರದಿಂದ ರಾಜಕೀಯ ಸೇವೆಯಲ್ಲಿ 50ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಅಪಾರ ಪ್ರಮಾಣದ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಸದಾ ನಿಮಗೆ ಚಿರಋಣಿಯಾಗಿರುತ್ತೇನೆ.
ನಿಮ್ಮೆಲ್ಲರ ಆಶೀರ್ವಾದ ಫಲವಾಗಿ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜುಲೈ 21 ರಂದು ಸದನವು ಚಾಲ್ತಿಯಲ್ಲಿರುವುದರಿಂದ ಹಾಗೂ ಜುಲೈ 21ರಂದು, ಈ ದೇಶದ ಕಾಂಗ್ರೆಸ್ ಪಕ್ಷದ ತ್ಯಾಗದ ಪ್ರತಿರೂಪವಾದ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಇ.ಡಿ. ವಿಚಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಗ್ನಿಪರೀಕ್ಷೆಗೆ ಒಳಪಡಿಸಿದೆ. ಇಂತಹ ಕಠಿಣ ಸಂದರ್ಭದಲ್ಲಿ ಅವರೊಂದಿಗೆ ಜತೆಯಾಗಿ ನಿಲ್ಲುವುದು ಕೂಡ ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ಧರಿಂದ ಅಂದು ನಾನು ಬೆಂಗಳೂರು ಅಥವಾ ಕಲಬುರಗಿಯಲ್ಲಿ ಭೇಟಿಗೆ ಲಭ್ಯವಿರುವುದಿಲ್ಲ. ಮುಂದಿನ ದಿನಗಳಲ್ಲಿ ಸದನ ಮುಗಿದ ನಂತರ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ.
ನನ್ನ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ನೀವೆಲ್ಲರೂ ಜತೆಗಾರರಾಗಿ ನನಗೆ ಶಕ್ತಿ ತುಂಬಿದ್ದೀರಿ. ನಾನು ಇಂದು ಯಾವುದೇ ಸ್ಥಾನದಲ್ಲಿದ್ದರೂ ಅದು ನಿಮ್ಮ ನಂಬಿಕೆ, ಪ್ರೀತಿ ಹಾಗೂ ಆಶೀರ್ವಾದದ ಫಲ.
ನೀವೆಲ್ಲರೂ ನನ್ನ ಹುಟ್ಟುಹಬ್ಬ ಆಚರಿಸುವ ಬದಲಾಗಿ ಬುದ್ಧ-ಬಸವ-ಬೇಡ್ಕರ್ ತತ್ವಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ನಿರ್ವಹಿಸಬೇಕೆಂದು ಕೇಳಿಕೊಳ್ಳಲು ಇಚ್ಛಿಸುತ್ತೇನೆ. ಆದ್ಧರಿಂದ ತಾವೆಲ್ಲರೂ ಸಹಕರಿಸಬೇಕಾಗಿ ಈ ಮೂಲಕ ಕೋರಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಸಿದ್ದರಾಮೋತ್ಸವದ ಕುರಿತು ಆಗಿಂದಾಗ್ಗೆ ಪ್ರತಿಕ್ರಿಯಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಒಂದು ತಂಡವಾಗಿ ಕೆಲಸ ಮಾಡುತ್ತದೆ. ಇಲ್ಲಿ ವ್ಯಕ್ತಿಪೂಜೆ ಇಲ್ಲ. ನಾನು ಹುಟ್ಟುಹಬ್ಬ ಆಚರಿಸಿಕೊಳ್ಳದೆ ಕೇದಾರನಾಥಕ್ಕೆ ಹೋಗಿಬಂದೆ ಎನ್ನುತ್ತಿರುತ್ತಾರೆ. ಅಂದರೆ, ಸಿದ್ದರಾಮಯ್ಯ ಅವರಿಗೆ ಪಕ್ಷಕ್ಕಿಂತಲೂ ತಮ್ಮ ವೈಯಕ್ತಿಕ ಪ್ರಸಿದ್ಧಿಯೇ ಮುಖ್ಯ ಎಂದು ಆಗಾಗ್ಗೆ ತಿವಿಯುತ್ತಿರುತ್ತಾರೆ. ಇದೀಗ ಸರಿಯಾದ ಸಮಯವನ್ನು ನೋಡಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ | ಸಿದ್ದರಾಮೋತ್ಸವ ಕೇವಲ ಜನುಮ ದಿನ ಕಾರ್ಯಕ್ರಮವೆ? srlopcm75ನಲ್ಲಿದೆ ಈ ಒಗಟಿಗೆ ಉತ್ತರ!