Site icon Vistara News

ಶೆಲ್ಟರ್‌ ಗುಂಬಜ್‌ | ಪ್ರತಾಪ್‌ ಸಿಂಹ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಎಂಪಿಯಾಗಲು ನಾಲಾಯಕ್‌ ಎಂದ ಸಲೀಂ ಅಹಮದ್‌

saleem ahamad

ಗದಗ: ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್‌ ಸಿಂಹ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಸಂಸದರಾಗಲು ನಾಲಾಯಕ್‌ ಎಂದಿದ್ದಾರೆ ಕಾಂಗ್ರೆಸ್‌ ನಾಯಕ, ಮೇಲ್ಮನೆ ಸದಸ್ಯ ಸಲೀಂ ಅಹ್ಮದ್‌.

ಮೈಸೂರಿನಲ್ಲಿ ಬಸ್‌ ಶೆಲ್ಟರ್‌ನ ಮೇಲೆ ಗುಂಬಜ್‌ ಮಾದರಿಯ ನಿರ್ಮಾಣಗಳನ್ನು ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಾಪ್‌ ಸಿಂಹ ಅವರು ನೀಡುತ್ತಿರುವ ಹೇಳಿಕೆಗಳಿಗೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದ್ದಾರೆ.

ಗದಗ ಜಿಲ್ಲೆ‌ ಮುಂಡರಗಿ ತಾಲೂಕಿನ ಕಲಕೇರಿ‌ ಗ್ರಾಮದಲ್ಲಿ ಮಾತನಾಡಿದ ಅವರು, ಗುಂಬಜ್‌ ಒಡೆಯುತ್ತೇವೆ ಎಂಬಿತ್ಯಾದಿ ಹೇಳಿಕೆಗಳ ಮೂಲಕ ನೀವು ಸಮಾಜಕ್ಕೆ ಏನು‌ ಸಂದೇಶ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ʻʻಬೆಂಗಳೂರಿನಲ್ಲಿ, ದೆಹಲಿಯಲ್ಲಿ ಗುಂಬಜ್ ರೀತಿಯಲ್ಲಿ ಕಟ್ಟಡಗಳಿವೆ. ಎಲ್ಲ ಗುಂಬಜ್ ರೀತಿಯ ಕಟ್ಟಡಗಳನ್ನು ಒಡೆಯುತ್ತಾರಾ‌ ಎಂಪಿ, ಒಬ್ಬ ಸಂಸದನಾಗಿ ಇಂಥ ಮಾತು ಆಡಬಾರದು..ಜನ ನಗ್ತಾರೆʼʼ ಎಂದು ಸಲೀಂ ಹೇಳಿದರು.

ʻʻಕರ್ನಾಟಕ ಇತಿಹಾಸದಲ್ಲಿಯೇ ಇಂಥ ಘಟನೆ ಯಾವತ್ತೂ ಆಗಿಲ್ಲ. ಸರ್ಕಾರಕ್ಕೆ ಯಾವುದೇ‌ ಸಿದ್ಧಾಂತ,ವಿಚಾರಗಳಿಲ್ಲ. ಭ್ರಷ್ಟಾಚಾರದಲ್ಲಿ ಉದಯವಾಗಿರೋ‌ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆʼʼ ಎಂದು ವಾಗ್ದಾಳಿ ನಡೆಸಿದರು ಸಲೀಂ ಅಹ್ಮದ್‌.

ಕೇಸರಿ ಬಣ್ಣ ನಮ್ಮ ಧ್ವಜದಲ್ಲೂ ಇದೆ.. ಆದರೆ,
ವಿವೇಕ ಕೊಠಡಿ ಹೆಸರಿನಲ್ಲಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಸರ್ಕಾರ ಮುಂದಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ʻʻಸರ್ಕಾರಿ ಶಾಲೆಗಳಲ್ಲಿ ಟೀಚರ್‌ಗಳಿಲ್ಲ.. ಕೊಠಡಿಗಳಿಲ್ಲ.. ಸರಿಯಾದ‌ ಸಮವಸ್ತ್ರ ಇಲ್ಲ.. ಮಧ್ಯಾಹ್ನ ಬಿಸಿಯೂಟ ಸಿಗ್ತಾಯಿಲ್ಲ.. ಇದೆಲ್ಲ ಬಿಟ್ಟು ಬಣ್ಣದ ಹಿಂದೆ ಬಿದ್ದಿದ್ದಾರೆʼʼ ಎಂದರು. ʻʻನಾವೂ ಸಹ‌ ಕೇಸರಿ‌ ಬಣ್ಣಕ್ಕೆ ಗೌರವ ಕೊಡ್ತೇವೆ.. ನಮ್ಮ ಕಾಂಗ್ರೆಸ್‌ ಧ್ವಜದಲ್ಲೂ ಕೇಸರಿ‌ ಇದೆ. ನಮ್ಮ ದೇಶದ ಧ್ವಜದಲ್ಲೂ ಕೇಸರಿ ಬಣ್ಣ ಇದೆ. ಆದರೆ ಇವರು‌ ಕೇಸರೀಕರಣ ಮಾಡೋದಕ್ಕೆ ಹೊರಟಿದ್ದಾರೆʼʼ ಎಂದು ಆಪಾದಿಸಿದರು. ʻʻಸಣ್ಣ‌ ಮಕ್ಕಳಿಗೆ ಈ ರೀತಿ ಮಾಡುವ ಬದಲು ಒಳ್ಳೆ ಶಿಕ್ಷಣ ನೀಡಿʼʼ ಎಂದು ಕಿವಿಮಾತು ಹೇಳಿದರು.

ʻʻಶಾಲೆಗಳ ಅಭಿವೃದ್ಧಿ ಮಾಡೋ ಬದಲು ಭ್ರಷ್ಟಾಚಾರ ಮಾಡುತ್ತಿದ್ದೀರಿ. ಸರ್ಕಾರದಲ್ಲಿ‌ ಭ್ರಷ್ಟಾಚಾರ ತಾಂಡವಾಡುತ್ತಿದೆ. 40% ಕಮೀಷನ್ ಸರ್ಕಾರ ಅಂತ‌ ಇಡೀ ಜಗಜ್ಜಾಹೀರಾಗಿದೆ. ಪ್ರಪಂಚದಲ್ಲೇ ಇದರ ಬಗ್ಗೆ ಚರ್ಚೆಯಾಗುತ್ತಿದೆ. 40 % ಕಮೀಷನ್ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹುಬ್ಬಳ್ಳಿ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿದಾರೆ. ಅದರ ಬಗ್ಗೆ ಮಾತನಾಡುವ ಧೈರ್ಯ ಈ‌ ಎಂಪಿಗಿದೆಯಾʼʼ ಎಂದು ಪ್ರಶ್ನಿಸಿದ್ದಾರೆ ಸಲೀಂ ಅಹಮದ್‌.

ಇದನ್ನೂ ಓದಿ | ಶೆಲ್ಟರ್‌ನಲ್ಲಿ ಗುಂಬಜ್‌!| ಇನ್ನು 2 ದಿನದಲ್ಲಿ ಬಸ್‌ ಶೆಲ್ಟರ್‌ ಮೇಲಿನ ಗುಂಬಜ್‌ ತೆಗೆಯದಿದ್ದರೆ ನಾನೇ ಒಡೀತೇನೆ ಎಂದ ಪ್ರತಾಪ್ ಸಿಂಹ

Exit mobile version