ಬೆಂಗಳೂರು: ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಕಾಂಗ್ರೆಸ್ ಹೊಸ ಹೊಸ ತಂತ್ರಗಳನ್ನು ಹೂಡುತ್ತಿರುವಂತೆ ಕಾಣುತ್ತಿದೆ. ಸಿದ್ದರಾಮೋತ್ಸವ, ಕಾಲ್ನಡಿಗೆ ಯಾತ್ರೆಯ ಬಳಿಕ ಈಗ ಭಾರತ್ ಜೋಡೊ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಲು ಸಜ್ಜಾಗಿದೆ. ಸಾರ್ವಜನಿಕ ರ‍್ಯಾಲಿಗಳು, ಜಾಥಾಗಳ ಜತೆಗೇ ಆಂತರಿಕವಾಗಿ ಕೆಲವು ತಂತ್ರಗಳನ್ನು ಹೂಡುವ ಪ್ಲ್ಯಾನ್ ನಡೆಯುತ್ತಿದೆ.
ಅದರ ಭಾಗವಾಗಿಯೇ ಬುಧವಾರ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೇವಾಲಾ ಮತ್ತು ನಾಲ್ವರು ಮಠಾಧೀಶರ ನಡುವೆ ಭೇಟಿ ಮತ್ತು ಮಾತುಕತೆ ನಡೆಯಿತು.
ಬೆಂಗಳೂರಿನ ಮಾಗಡಿಯ ಸಿದ್ದಲಿಂಗ ಸ್ವಾಮೀಜಿ, ದಾವಣಗೆರೆಯ ಬಂಜಾರಪೇಟೆಯ ಸರದಾರ್ ಸೇವಾಲಾಲ್ ಸ್ವಾಮೀಜಿ, ವಿಜಯ ಪುರದ ಸಿದ್ದಲಿಂಗ ಸ್ವಾಮೀಜಿ ಮತ್ತು ಚಿತ್ರದುರ್ಗದ ಮೇದಾರ ಕೇತಾಯ ಸ್ವಾಮೀಜಿ ಅವರು ಅವರು ರಾಜ್ಯ ಉಸ್ತುವಾರಿಯಾಗಿರುವ ಸುರ್ಜೇವಾಲಾ ಅವರನ್ನು ಭೇಟಿಯಾದರು.
ಮಠಾಧೀಶರು ಮತ್ತು ಸುರ್ಜೇವಾಲಾ ನಡುವೆ ರಾಜ್ಯದ ರಾಜಕೀಯ ಪರಿಸ್ಥಿತಿಯೂ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಯಿತು. ಈ ನಡುವೆ, ಚುನಾವಣೆ ಸಂದರ್ಭದಲ್ಲಿ ತಮ್ಮ ಸಮುದಾಯಕ್ಕೆ ಟಿಕೆಟ್ ಕೊಡುವ ಬಗ್ಗೆ ಒತ್ತು ಕೊಡಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಎಲ್ಲ ಮಠಗಳ ಸಂಪರ್ಕ
ಈ ನಡುವೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಸಣ್ಣ ಪುಟ್ಟ ಮಠಗಳಿಂದ ಹಿಡಿದು ಎಲ್ಲಾ ಮಠಗಳ ಶ್ರೀಗಳನ್ನು ಭೇಟಿ ಮಾಡುವ ಇಂಗಿತವನ್ನು ಸುರ್ಜೇವಾಲ ವ್ಯಕ್ತಪಡಿಸಿದರು ಎನ್ನಲಾಗಿದೆ.
ಕಾಂಗ್ರೆಸ್ ಸ್ವಾಮೀಜಿಗಳ ಭೇಟಿಯ ಮೂಲಕ ಆಯಾ ಸಮುದಾಯದಲ್ಲಿ ಧನಾತ್ಮಕ ಸಂಪರ್ಕ ಸೃಷ್ಟಿಸಲು ಮುಂದಾಗಿದೆ ಎನ್ನಲಾಗಿದೆ. ತಾವು ಯಾರಿಗೂ ವಿರೋಧವಿಲ್ಲ. ಎಲ್ಲರ ಅಭಿವೃದ್ಧಿಗೆ ಬದ್ಧ ಎಂಬ ಸಂದೇಶವನ್ನು ನೀಡುವುದು ಈ ಭೇಟಿಗಳ ಉದ್ದೇಶವಾಗಿರಲಿದೆ ಎನ್ನಲಾಗಿದೆ. ಸುರ್ಜೇವಾಲಾ ಮತ್ತು ಸ್ವಾಮೀಜಿಗಳ ಭೇಟಿ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಪ್ರಕಾಶ್ ಖಂಡ್ರೆ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ | ಸಿಎಲ್‌ಪಿ ಸಭೆಗೆ 15 ಶಾಸಕರು ಗೈರು; ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಗರಂ