ಬೆಂಗಳೂರು: ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೆ ಪ್ರಯತ್ನ ಆರಂಭಿಸಿದೆ. ಇಲಾಖಾವಾರು ಸಭೆಗಳು ನಡೆಯುತ್ತಿದ್ದು, ಜೂನ್ 1ರ ಸಂಪುಟ ಸಭೆಯಲ್ಲಿ ಘೋಷಣೆ ಹೊರಬೀಳಬಹುದು ಎಂಬ ನಿರೀಕ್ಷೆಯಿದೆ. ಆದರೆ ಇದೆಲ್ಲದರ ನಡುವೆ ಕಾಂಗ್ರೆಸ್ ನಾಯಕರು ಹೊಸ ವರಸೆ ತೆಗೆದಿದ್ದಾರೆ.
ರಾಜ್ಯದ ಎಲ್ಲೇ ಗ್ಯಾರಂಟಿ ಯೋಜನೆಗಳ ಜಾರಿ ಆಗಲಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದು ಕೇಳಿದರೆ ಸಾಕು, ಪ್ರಧಾನಿ ನರೇಂದ್ರ ಮೋದಿ 15 ಲಕ್ಷ ರೂ. ಕೊಡುತ್ತೇನೆ ಎಂದಿದ್ದರು, ಕೊಟ್ರ? ಎನ್ನುತ್ತಿದ್ದಾರೆ. ಸೋಮವಾರ ಬೆಂಗಳೂರಿನ ಶಕ್ತಿಭವನದಲ್ಲಿ ಸಭೆ ನಂತರ ಮಾತನಾಡಿದ್ದ ಸಿದ್ದರಾಮಯ್ಯ, ನರೇಂದ್ರ ಮೋದಿಯವರು ಅಕೌಂಟಿಗೆ 15 ಲಕ್ಷ ರೂ. ಹಾಕ್ತೀನಿ ಅಂದ್ರು ಹಾಕಿದ್ರಾ? ಎಂದು ಪ್ರಶ್ನಿಸಿದ್ದರು. ಮಾತಿನ ನಡುವೆ ಮೋದಿ ಬದಲಿಗೆ ಬಾಯಿತಪ್ಪಿ ನರಸಿಂಹರಾವ್ ಎಂದು ಹೇಳಿ, ಸಿಬ್ಬಂದಿ ಎಚ್ಚರಿಸಿದ ನಂತರ ಮೋದಿ ಎಂದು ಹೇಳಿದ್ದರು. ಇದೀಗ 15 ಲಕ್ಷ ರೂ. ವಿಚಾರವನ್ನು ಕಾಂಗ್ರೆಸ್ ನಾಯಕರು ಮಂತ್ರ ಮಾಡಿಕೊಂಡಿದ್ದಾರೆ.
ರಾಮನಗರ ಮಾತನಾಡಿದ ಡಾ. ಜಿ. ಪರಮೇಶ್ವರ್, ಬಿಜೆಪಿಯವರು ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ರು. ಯಾರಿಗಾದರೂ ಒಬ್ಬರ ಅಕೌಂಟ್ ಗೆ ದುಡ್ಡು ಹಾಕಿದ್ದಾರಾ..? ನೀವು ಕೊಟ್ಟಿದ್ದು ಸುಳ್ಳು ಭರವಸೆ ನಮಗೆ ಬುದ್ದಿ ಹೇಳೋದಕ್ಕೆ ಬರ್ತಿರಾ..? ನಿಮಗೆ 4 ವರ್ಷ ಸರ್ಕಾರ ಕೊಟ್ಟು ಜನ ನೋಡಿದ್ದಾರೆ. ನೀವು ನಡೆಸಿದ ಸರ್ಕಾರವನ್ನ ಜನ ನೋಡಿದ್ದಾರೆ. 17 ಜನ ಶಾಸಕರ ಹೊತ್ತೊಯ್ದು ಸರ್ಕಾರ ಮಾಡಿ ಜನರಿಗಾಗಿ ಒಂದಷ್ಟು ಕೆಲಸ ಆಗಿಲ್ಲ ಎಂದು ಹರಿಹಾಯ್ದರು.
ಚಿತ್ರದುರ್ಗದ ಸಿರಿಗೆರೆಯಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ನಾವು ಗ್ಯಾರಂಟಿ ಅನುಷ್ಠಾನ ಮಾಡಿದ್ರೆ ಬಿಜೆಪಿ ಅಡ್ರೆಸ್ ಇರಲ್ಲ. ನಾವು ಗ್ಯಾರಂಟಿ ಜಾರಿಗೆ ತಂದರೆ ಬಿಜೆಪಿಗೆ ಭಯ ಹುಟ್ಟುತ್ತದೆ. ಹತಾಶೆಯಿಂದ ಬಿಜೆಪಿ ನಾಯಕರು ಈ ರೀತಿ ಮಾತಾಡ್ತಾರೆ. ಸರ್ಕಾರ ಬಂದು ಎಷ್ಟು ದಿನ ಆಗಿದೆ? ಬಿಜೆಪಿಯವರು ಏನು ಮಾಡಿದ್ದಾರೆ ಅಂತ ಮಾತಾಡ್ತಾರೆ? ಒಂದೂ ಭರವಸೆ ಈಡೇರಿಸದೇ ಪ್ರಚೋದನೆ ಮಾಡುವ ಕೆಲಸ ಮಾಡ್ತಾರೆ.
ಗ್ಯಾರಂಟಿ ಅನುಷ್ಠಾನ ಮಾಡಿದ್ರೆ 25 ವರ್ಷ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಾಗಿದೆ. ಮೋದಿ ಸಾಲ ಮನ್ನಾ ಮಾಡಿದ್ರ?, 15 ಲಕ್ಷ ಕೊಟ್ರ? ಜೂನ್ 1ಕ್ಕೆ ಸಚಿವ ಸಂಪುಟ ಇದೆ ಗ್ಯಾರಂಟಿ ಅನುಷ್ಠಾನ ಮಾಡ್ತೀವಿ. ನಾವು ಕೊಟ್ಟ ಮಾತು, ಭರವಸೆ ಉಳಿಸಿಕೊಳ್ತಿವಿ ಎಂದರು.
ಹಾವೇರಿಯಲ್ಲಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, ಗ್ಯಾರಂಟಿಗಳ ಜಾರಿಗೆ ಕಾಲಾವಕಾಶ ಬೇಕಾಗುತ್ತದೆ. ಗ್ಯಾರಂಟಿ ಕೊಡುವುದು ನಮ್ಮ ಜವಾಬ್ದಾರಿ, ನುಡಿದಂತೆ ನಡೆಯುತ್ತೇವೆ. ಕರೆಂಟ್ ಬಿಲ್ ಕಟ್ಟಬೇಡಿ , ಬಸ್ ಟಿಕೆಟ್ ತಗೊಬೇಡಿ ಅಂತಾ ಬಿಜೆಪಿಯವರು ಹೇಳಬಾರದು. ಪ್ರಧಾನ ಮಂತ್ರಿಗಳು ಹೇಳಿದಂಗೆ ನಡಕೊಂಡಿದ್ದಾರಾ? ಅಕೌಂಟ್ ಗೆ ಹದಿನೈದು ಲಕ್ಷ ರೂ. ಹಾಕ್ತೀನಿ ಎಂದಿದ್ದರು, 15 ಪೈಸೆ ಹಾಕಲಿಲ್ಲ. ಇವರು ತಿನ್ನೊದಕ್ಕೂ ಜಿಎಸ್ಟಿ ಕಟ್ಟಿಸಿಕೊಳ್ತಾ ಇದಾರೆ, ನಾಚಿಕೆ ಆಗಬೇಕು ಇವರಿಗೆ. ಅವರು ಕೊಟ್ಟಿರುವ ಭರವಸೆ ಈಡೇರಿಸಿದ್ದಾರಾ? ಬಂದು ತೋರಿಸಲಿ ತಾಕತ್ ಇದ್ದರೆ. ಸುಳ್ಳು ಬಿಜೆಪಿಯವರ ಮನೆಯಲ್ಲಿ ಹುಟ್ಟಿದ್ದು, ನಮ್ಮ ಮನೆಯಲ್ಲಿ ಹುಟ್ಟಿಲ್ಲ ಎಂದರು.
ಮೈಸೂರಿನಲ್ಲಿ ಮಾತನಾಡಿದ ಸಚಿವ ಡಾ.ಎಚ್.ಸಿ ಮಹದೇವಪ್ಪ, ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇತ್ತು. ಆ ವಿರೋಧಿ ಅಲೆ ಜೊತೆಗೆ ನಮ್ಮ ಗ್ಯಾರೆಂಟಿಯನ್ನ ನೋಡಿ ಜನ ಬಹುಮತ ಕೊಟ್ಟಿದ್ದಾರೆ. ಈಗ ಬಿಜೆಪಿ ತಮ್ಮ ಆಡಳಿತ ವಿರೋಧಿ ವೈಫಲ್ಯವನ್ನ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಉಗುಳುವ ಕೆಲಸವನ್ನ ಮಾಡುತ್ತಿದೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಜನರು ಅತೀವ ಸಂಕಷ್ಟದಲ್ಲಿದ್ದರು. ಇದರಿಂದ ಬಿಜೆಪಿ ರಾಜ್ಯದಲ್ಲಿ ತಿರಸ್ಕೃತವಾಗಿದೆ.
ಈ ಚರ್ಚೆಯನ್ನ ಮರೆ ಮಾಚಲು ಗ್ಯಾರೆಂಟಿ ಕಾರ್ಡ್ ವಿಚಾರವನ್ನ ದೊಡ್ಡದು ಮಾಡುತ್ತಿದ್ದಾರೆ. ಅಷ್ಟು ತಾರಾತುರಿಯಲ್ಲಿ ಗ್ಯಾರಂಟಿ ಅನುಷ್ಟಾನಕ್ಕೆ ಬಿಜೆಪಿಯವರು ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿಯ ಈ ತಂತ್ರ ಜನರಿಗೆ ಅರ್ಥವಾಗುತ್ತಿದೆ. ಮೋದಿಯವರು 2013ರಲ್ಲಿ ಕೊಟ್ಟ ಭರವಸೆ ಈಡೇರಿದೆಯ? 15 ಲಕ್ಷ ರೂ. ಜನರ ಖಾತೆಗೆ ಬಂದಿದ್ಯಾ? ಮೊದಲು ಬಿಜೆಪಿ ಇದಕ್ಕೆ ಉತ್ತರ ಕೊಡಲಿ. ನಾವು ಗ್ಯಾರಂಟಿಯ ಬಗ್ಗೆ ಜನರಿಗೆ ಏನೂ ಹೇಳಿದ್ದೆವೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.
ಈ ರೀತಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವುದಕ್ಕೆ ಉಡುಪಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಉತ್ತರ ಕೊಡಬೇಕಾಗಿರೋದು ಸರಕಾರದ ಜವಾಬ್ದಾರಿ. ಅನುಷ್ಠಾನ ಮಾಡಲು ಸಾಧ್ಯ ಅಸಾಧ್ಯ ಎಂಬುದನ್ನು ಜನತೆ ಮುಂದೆ ಹೇಳಬೇಕು. ಪ್ರಧಾನಿ ಮೋದಿ 15 ಲಕ್ಷ ರೂ. ಕೊಡುತ್ತೇನೆ ಎಂದು ಎಲ್ಲೂ ಆಶ್ವಾಸನೆ ನೀಡಿಲ್ಲ. ವಿದೇಶದ ಕಪ್ಪು ಹಣ ಬಂದರೆ ಒಬ್ಬರಿಗೆ 15 ಲಕ್ಷ ರೂ. ಕೊಡಬಹುದು ಎಂದು ಹೇಳಿದ್ದರು. ಜನರ ಖಾತೆಗೆ ಹಣ ಹಾಕುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿಲ್ಲ. ಬಿಜೆಪಿಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಖಂಡನೀಯ. ‘ಪ್ರತಿಯೊಬ್ಬರಿಗೂ’ ಎಂದು ಹೇಳಿದ ಆಶ್ವಾಸನೆ ಈಡೇರಿಸಿ ಎಂದಿದ್ದಾರೆ.
ಇದನ್ನೂ ಓದಿ: ಪಿ.ವಿ. ನರಸಿಂಹರಾಯರು 15 ಲಕ್ಷ ರೂ. ಹಾಕಿದ್ರಾ? ಮತ್ತೆ ಸಿದ್ದರಾಮಯ್ಯ ಎಡವಟ್ಟು! ಇಲ್ಲಿದೆ ನೋಡಿ ವಿಡಿಯೊ