ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಬಿರುಸುಗೊಳಿಸಿದ್ದು, ಈ ಹಿಂದೆ ಯುವ ಕಾಂಗ್ರೆಸ್ ಆರಂಭಿಸಿದ್ದ ಅಭಿಯಾನವನ್ನು ಘಟಾನುಘಟಿ ನಾಯಕರೇ ಬೀದಿಗಿಳಿದು ಮುಂದುವರಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿ ನೆರೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮುಂತಾದವರು ಪೋಸ್ಟರ್ ಅಂಟಿಸಿದರು. ಡಿ.ಕೆ. ಶಿವಕುಮಾರ್ ಗಮ್ ಹಚ್ಚಿದರೆ ಸಿದ್ದರಾಮಯ್ಯ ಪೋಸ್ಟರ್ ಅಂಟಿಸಿದರು.
ಈ ಸಮಯದಲ್ಲಿ ಸ್ಥಳಕೆಕ ಆಗಮಿಸಿದ ಪೊಲೀಸ್ ವಾಹನದ ಮೇಲೇರಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಆಗಮಿಸಿ ಎಲ್ಲರನ್ನೂ ಬಿಎಂಟಿಸಿ ಬಸ್‌ಗೆ ಹತ್ತಿಸಿದರು.
ಆದರೆ ಆ ಬಸ್‌ನ ಬ್ರೇಕ್ ಸರಿಯಿಲ್ಲ ಎಂದ ಸಿಬ್ಬಂದಿ, ಬೇರೆ ಬಸ್ ಹತ್ತುವಂತೆ ತಿಳಿಸಿದರು. ಈ ಸರ್ಕಾರಕ್ಕೆ ಬ್ರೇಕ್ ಇಲ್ಲ, ಭ್ರಷ್ಟಾಚಾರಿ ಸರ್ಕಾರ ಎಂದು ಘೋಷಣೆ ಕೂಗುತ್ತಲೇ ಎಲ್ಲರೂ ಬಸ್ ಹತ್ತಿದರು. ಎಲ್ಲರನ್ನೂ ಸ್ಥಳದಿಂದ ಬೇರೆ ಕಡೆಗೆ ಕರೆದೊಯ್ಯಲಾಯಿತು.
ಸುದ್ದಿಗೋಷ್ಠಿಯಲ್ಲಿ ಆಕ್ರೋಶ
ಪೋಸ್ಟರ್ ಅಂಟಿಸುವುದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ. ಅವರು ಭಾಗವಹಿಸಲಿರುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ರಾಹುಲ್ ಗಾಂಧಿ ಅವರು ಯುವಕರು, ಮಹಿಳೆಯರು, ರೈತರು, ನಾಗರೀಕ ಸಮುದಾಯಗಳು, ವಿದ್ಯಾರ್ಥಿಗಳು, ಬುಡಕಟ್ಟು ಜನರ ಜೊತೆ ಒಂದೊಂದು ದಿನ ಮಾತುಕತೆ ನಡೆಸಲಿದ್ದಾರೆ. ಪ್ರತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ, ಪಕ್ಷದ ಘಟಕಗಳು, ಪರಾಜಿತ ಅಭ್ಯರ್ಥಿಗಳು ಜನರನ್ನು ಕರೆ ತಂದ ದಿನ ರಾಹುಲ ಗಾಂಧಿ ಅವರ ಜತೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗುವುದು. ನಾಗರೀಕ ಸಮಾಜದ ಗಣ್ಯರು, ಕಲಾವಿದರೂ, ಕೈಗಾರಿಕೋದ್ಯಮಿಗಳು, ಚಿಂತಕರು ಸೇರಿದಂತೆ ಪ್ರಮುಖರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ಇಂದು ಭಾರತ ಐಕ್ಯತಾ ಯಾತ್ರೆಯ ಸಿದ್ಧತಾ ಪರಿಶೀಲನಾ ಸಭೆ ಮಾಡಿದ್ದೇವೆ. ಪ್ರದೇಶ ಕಾಂಗ್ರೆಸ್ ಹಾಗೂ ರಾಜ್ಯ ನಾಯಕರು ಮಾಡಿರುವ ಎಲ್ಲಾ ಸಿದ್ಧತೆಗಳು ಎಐಸಿಸಿಗೆ ತೃಪ್ತಿ ತಂದಿದೆ. ನಮ್ಮ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿತ್ಯ ತಯಾರಿ ಕುರಿತು ಪರಿಶೀಲನೆ ನಡೆಸುತ್ತಿದ್ದು, ರಾಜ್ಯದಲ್ಲಿನ ಯಾತ್ರೆ ಅತ್ಯಂತ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಇದೆ. ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಆರಂಭವಾಗಿದ್ದು, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಎಲ್ಲಾ ವರ್ಗದಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ ಎಂದರು.
ಪೇ ಸಿಎಂ ಅಭಿಯಾನ ಕುರಿತು ಪ್ರತಿಕ್ರಿಯಿಸಿ, ಈ ಅಭಿಯಾನ ಆರಂಭಿಸಿರುವುದು ಕಾಂಗ್ರೆಸ್ ಪಕ್ಷ ಅಲ್ಲ. ಇದು ಜನರ ಸಮಸ್ಯೆಗೆ ಧ್ವನಿಯಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಈ ಸರ್ಕಾರ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜನ ಹೇಳುತ್ತಿದ್ದಾರೆ. ಇದು ಬಿಜೆಪಿ ಚಿಂತೆಗೀಡು ಮಾಡಿದೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಹಲವರನ್ನು ದೇಶಾದ್ಯಂತ ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ | PayCM | ಪೇಸಿಎಂ ಅಭಿಯಾನ ರಾಜ್ಯ ಮಟ್ಟಕ್ಕೆ ವಿಸ್ತರಣೆ; ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಲನೆ?