Site icon Vistara News

Congress Manifesto : ಬಜರಂಗದಳ ನಿಷೇಧ ಪ್ರಸ್ತಾಪ ವಿರುದ್ಧ ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

congress-manifesto: Bajaranga dal ro arrange Hanuman chalisa recital in all temples in state on May 4

congress-manifesto: Bajaranga dal ro arrange Hanuman chalisa recital in all temples in state on May 4

ಬೆಂಗಳೂರು: ಬಜರಂಗ ದಳವನ್ನು ನಿಷೇಧಿಸುವ (Bajaranga dal ban) ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ (Congress Manifesto) ಭರವಸೆಯ ವಿರುದ್ಧ ಹಿಂದೂ ಸಂಘಟನೆಗಳು ಸಿಡಿದೆದ್ದಿದ್ದು, ಇದರ ವಿರುದ್ಧ ಆಂದೋಲನ ನಡೆಸಲು ಮುಂದಾಗಿವೆ. ಬಜರಂಗ ದಳ ಸಂಘಟನೆಯು ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲಿಸಾ ಪಠಣವನ್ನು ಆಯೋಜಿಸಿದೆ.

ʻʻಬಜರಂಗ ದಳ ಮೇ 4ರಂದು ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ (Hanuman Chalisa) ಪಠಣವನ್ನು ಆಯೋಜಿಸಿದೆ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹನುಮಾನ್‌ ಚಾಲೀಸಾ ಪಠಣ ನಡೆಸಲಾಗುತ್ತದೆ. ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣʼʼ ಎಂದು ಬಜರಂಗ ದಳ ಪ್ರಕಟಣೆ ತಿಳಿಸಿದೆ.

ಮಂಗಳವಾರ ಕಾಂಗ್ರೆಸ್‌ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿದರೆ ಬಜರಂಗ ದಳ, ಪಿಎಫ್‌ಐ ಸೇರಿದಂತೆ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಮಾಡಲಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದೇನು?

ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲೀ, ಬಜರಂಗ ದಳ ಮತ್ತು ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು, ಸಹಿಸುವುದಿಲ್ಲ. ಆದ ಕಾರಣ ಇಂಥ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಣಾಳಿಕೆಯ ಈ ಅಂಶದ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆಗಳು ತಾಕತ್ತಿದ್ದರೆ ನಿಷೇಧಿಸಿ ಎಂಬ ಸವಾಲನ್ನು ಹಾಕಿವೆ. ಹಲವು ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ತಮ್ಮ ಪ್ರಚಾರ ಭಾಷಣಗಳಲ್ಲಿ ಇದನ್ನೇ ಪ್ರಧಾನವಾಗಿ ಉಲ್ಲೇಖಿಸುತ್ತಿದ್ದಾರೆ. ಜತೆಗೆ ಜೈ ಬಜರಂಗ ಬಲಿ ಎಂಬ ಘೋಷಣೆಗಳನ್ನು ಕೂಗಿಸುತ್ತಿದ್ದಾರೆ.

ಇದಕ್ಕೆ ಈಗ ಬಜರಂಗ ದಳ ಹೋರಾಟದ, ಪ್ರತಿಭಟನೆಯ, ಆಂದೋಲನದ ಸ್ವರೂಪವನ್ನು ನೀಡಿದೆ. ಬಜರಂಗದಳದ ನಿಷೇಧವೆಂದರೆ ಅದು ಬಜರಂಗಿ ಹನುಮಾನ್‌ನ ನಿಷೇಧ ಎಂದು ವ್ಯಾಖ್ಯಾನಿಸಿರುವ ಸಂಘಟನೆ, ರಾಮನ ಬಳಿಕ ಈಗ ಹನುಮಂತನ ಮೇಲೆ ಕಾಂಗ್ರೆಸ್‌ ಕಣ್ಣು ಬಿದ್ದಿದೆ ಎಂದು ಹೇಳಿಕೊಂಡಿದೆ.

ಹೀಗಾಗಿ ಇದೊಂದು ಧರ್ಮಕ್ಕೆ ಒದಗಿರುವ ಆಪತ್ತು ಎಂದಿರುವ ಅವರು ಧರ್ಮಕ್ಕೆ ಸಂಕಟ ಬಂದಾಗ ಹಿಂದುಗಳೆಲ್ಲ ಒಂದಾಗಬೇಕು ಎಂದು ಹೇಳಿದೆ. ಈ ಮೂಲಕ ಹನುಮಾನ್‌ ಚಾಲೀಸಾ ಪಠಣದ ಮೂಲಕ ಹಿಂದುಗಳನ್ನು ಒಟ್ಟು ಸೇರಿಸುವ ಪ್ರಯತ್ನವನ್ನು ನಡೆಸಿದೆ.

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳದ ನಿಷೇಧ ಪ್ರಸ್ತಾಪವನ್ನು ಸೇರಿಸಿದಾಗಲೇ ಇದೊಂದು ವಿವಾದವಾಗುವ ಸೂಚನೆ ಕಂಡಿತ್ತು. ಬಜರಂಗ ದಳ ಈಗ ಅದಕ್ಕೆ ಧಾರ್ಮಿಕ ಸ್ವರೂಪ ನೀಡುವ ಮೂಲಕ ಹಿಂದು ಮತಗಳ ಕ್ರೋಡೀಕರಣಕ್ಕೆ ಮುಂದಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಿಎಫ್‌ಐ ಜತೆ ಬಜರಂಗ ದಳ ಹೋಲಿಕೆ ಸರಿಯಲ್ಲ
ಪೂರಕ ಸುದ್ದಿ : ನಿರ್ಣಾಯಕ ಹಂತದಲ್ಲಿ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್‌; ಇದು ಚುನಾವಣೆಯ ಟರ್ನಿಂಗ್‌ ಪಾಯಿಂಟ್‌!

Exit mobile version