ಬೆಂಗಳೂರು: ವಿಶ್ವ ಹಿಂದು ಪರಿಷತ್‌ನ ಪರಿವಾರ ಸಂಘಟನೆಗಳಲ್ಲಿ ಒಂದಾಗಿರುವ ಬಜರಂಗ ದಳವನ್ನು ನಿಷೇಧಿಸುವ ಕುರಿತು ಪ್ರಣಾಳಿಕೆಯಲ್ಲಿ (Congress Manifesto) ಮಂಡಿಸಿದ್ದ ಪ್ರಸ್ತಾಪವನ್ನು ಕೈಬಿಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಮಂಗಳವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪ್ರಣಾಳಿಕೆ ʻಸರ್ವ ಜನಾಂಗದ ಶಾಂತಿಯ ತೋಟʼದಲ್ಲಿ ʻʻಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದುʼʼ ಎಂಬ ಹೇಳಲಾಗಿತ್ತು.
ಇದು ಬಿಜೆಪಿ ಮತ್ತು ಸಂಘ ಪರಿವಾರವನ್ನು ತೀವ್ರವಾಗಿ ಕೆರಳಿಸಿತ್ತು. ಬಿಜೆಪಿಯ ಹಲವು ನಾಯಕರು ʻತಾಕತ್ತಿದ್ದರೆ ಬ್ಯಾನ್ ಮಾಡಿʼ ಎಂದು ಸವಾಲು ಹಾಕಿದರೆ, ಬಜರಂಗದಳದ ನಾಯಕರಂತೂ ಇದು ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಯಕರು ʻನಾನು ಬಜರಂಗಿ, ನನ್ನನ್ನು ಬಂಧಿಸಿʼ ಎಂದೆಲ್ಲ ಸವಾಲು ಹಾಕಿದರು. ಪ್ರಣಾಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ಅವರು ಕೂಡಾ ಇದಕ್ಕೆ ಪ್ರತಿಕ್ರಿಯಿಸಿದರು. ಹೆಚ್ಚಿನವರು ಬಜರಂಗದಳ ಮತ್ತು ಪಿಎಫ್‌ಐ ನಡುವೆ ಸಂಬಂಧ ಕಲ್ಪಿಸಿದ್ದನ್ನು ಕಟುವಾಗಿ ಟೀಕಿಸಿದರು.
ವಿಶ್ವ ಹಿಂದು ಪರಿಷತ್‌ನ ರಾಷ್ಟ್ರ ಮಟ್ಟದ ನಾಯಕರು ಬಜರಂಗ ದಳ ನಿಷೇಧದ ಪ್ರಸ್ತಾಪದ ವಿರುದ್ಧ ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೇ ನಡೆಯಿತು.
ಕಾಂಗ್ರೆಸ್ ಪರವಾಗಿದ್ದವರು ಕೂಡಾ ಚುನಾವಣೆಯ ಸಂದರ್ಭದಲ್ಲಿ ಇಂಥ ಎಡವಟ್ಟು ಬೇಕಿತ್ತಾ ಎಂದು ಪ್ರಶ್ನಿಸಲು ತೊಡಗಿದರು. ಇತ್ತ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ಈ ಪ್ರಸ್ತಾಪವನ್ನು ಬಲವಾಗಿ ಸಮರ್ಥಿಸಿದರೆ, ಸಿದ್ದರಾಮಯ್ಯ ಅವರು ತಾವು ನಿಷೇಧ ಮಾಡಲಿರುವುದು ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಸಂಘಟನೆಗಳನ್ನು. ಅದು ಬಜರಂಗ ದಳವೂ ಇರಬಹುದು, ಪಿಎಫ್‌ಐ ಸಂಘಟನೆಯೂ ಇರಬಹುದು ಎಂದು ಹೇಳಿದರು.
ಈ ಎಲ್ಲ ವಿಚಾರಗಳನ್ನು ಪರಿಗಣಿಸಿದ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಬಜರಂಗ ದಳ ಬ್ಯಾನ್ ವಿಚಾರವನ್ನು ಪ್ರಣಾಳಿಕೆಯಿಂದ ಕೈ ಬಿಡುವ ಸಾಧ್ಯತೆ ಕಂಡುಬಂದಿದೆ. ಮಂಗಳವಾರ ರಾತ್ರಿ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಸಭೆಯ ಬಳಿಕ ರಾತ್ರಿಯೇ ಅಥವಾ ಬುಧವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಬಜರಂಗದಳ ವಿಚಾರದಲ್ಲಿ ಪ್ರಣಾಳಿಕೆಯಲ್ಲಿ ಇರುವುದೇನು?
ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲೀ, ಬಜರಂಗ ದಳ ಮತ್ತು ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು, ಸಹಿಸುವುದಿಲ್ಲ. ಆದ ಕಾರಣ ಇಂಥ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Karnataka Election : ಬಿಜೆಪಿ ಕೈಗೆ ಸಿಕ್ತು ಬಜರಂಗದಳ ಅಸ್ತ್ರ; ನಿಷೇಧ ಪ್ರಸ್ತಾಪ ವಿರುದ್ಧ ಕೆಂಡಾಮಂಡಲ
congress-manifesto : Congress may backtrack from Bajaranga dal ban proposal in Manifesto