ಬೆಂಗಳೂರು: ಹಾಲಿನ ಉತ್ಪನ್ನಗಳು ಸೇರಿ ಜನಸಾಮಾನ್ಯರು ದಿನಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ಹೇರಿಕೆ ಹಾಗೂ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಿಂದ ರಾಜ್ಯ ಬಂದ್ಗೆ ಕರೆ ನೀಡುವ ಸಾಧ್ಯತೆಯಿದೆ.
ಈಗಾಗಲೆ ಕಾಂಗ್ರೆಸ್ ನಾಯಕರು ಈ ಕುರಿತು ಮುನ್ಸೂಚನೆ ನೀಡಿದ್ದಾರೆ. ಹಾಲಿನ ಉತ್ಪನ್ನಗಳು, ಜೇನುತುಪ್ಪ, ಮಕ್ಕಳ ಪೆನ್ಸಿಲ್ ಸೇರಿ ಅನೇಕ ಉತ್ಪನ್ನಗಳ ಮೇಲೆ ಜಿಎಸ್ಟಿ ಹೇರಿಕೆ ಹಾಗೂ ದರ ಹೆಚ್ಚಳ ಮಾಡಲಾಗಿದೆ.
ಈಗಾಗಲೆ ಸೋಮವಾರದಿಂದ ಕರ್ನಾಟಕದ ಗ್ರಾಹಕರ ಮೇಲೆ ಇದರ ಹೊರೆ ಆರಂಭವಾಗಿದೆ. ಕೆಎಂಎಫ್ ತನ್ನ ಉತ್ಪನ್ನಗಳಾದ ಮೊಸರು, ಮಸಾಲ ಮಜ್ಜಿಗೆ ಹಾಗೂ ಲಸ್ಸಿ ಮೇಲೆ ದರ ಹೆಚ್ಚಳ ಮಾಡಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | ಹಾಲು ಉತ್ಪನ್ನ ದರ ಹೆಚ್ಚಳ ವಾಪಸ್? ಮುನ್ಸೂಚನೆ ನೀಡಿದ ಸಿಎಂ, ಪ್ರತಿಪಕ್ಷಗಳ ವಾಗ್ದಾಳಿ
ಉತ್ಪಾದಕ ಕಂಪನಿಗಳು ದರವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವ ಅಗತ್ಯವಿಲ್ಲ, ನಂತರ ತೆರಿಗೆ ಮರುಪಾವತಿ ಪಡೆಯಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೂ ಪ್ರತಿಪಕ್ಷಗಳು ವಾಗ್ದಾಳಿ ಮೂಲಕ ಉತ್ತರಿಸಿವೆ.
ಕಾಂಗ್ರೆಸ್ ಟ್ವಿಟರ್ ಮೂಲಕ ಸೋಮವಾರ ಬೆಳಗ್ಗಿನಿಂದಲೇ ಬಿಜೆಪಿ ವಿರುದ್ಧ ದಾಳಿ ನಡೆಸುತ್ತಿದೆ. ಅಕ್ಕಿ, ಮೊಸರು, ಹಾಲು ಸೇರಿದಂತೆ ಬಡ, ಮದ್ಯಮವರ್ಗದ ಅಗತ್ಯಗಳನ್ನೇ ಗುರಿಯಾಗಿಸಿ ‘ತೆರಿಗೆ ದಾಳಿ’ ನಡೆಸಿದೆ ಸರ್ಕಾರ. ಜನರನ್ನು ಪೀಡಿಸಿ ಬೊಕ್ಕಸ ತುಂಬಿಸುವ ಸರ್ಕಾರ ಉತ್ತರಿಸಲಿ. ಬ್ಲಾಕ್ ಮನಿ ಎಲ್ಲೋಯ್ತು? ನೋಟ್ ಬ್ಯಾನ್‌ನಿಂದ ಎಷ್ಟು ಹಣ ಸಿಕ್ಕಿತು? ಸಿರಿವಂತ ಉದ್ಯಮಿಗಳಿಗೆ ಎನ್ಪಿಎ ಉಡುಗೊರೆ ಕೊಟ್ಟಿದ್ದೇಕೆ? ಎಂದು ಪ್ರತಿಕ್ರಿಯಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಹೆಚ್ಚಿನ ತೆರಿಗೆಗಳು, ಇಲ್ಲದ ಉದ್ಯೋಗಗಳು. ಒಂದು ಕಾಳದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಯನ್ನು ನಾಶಪಡಿಸುವುದು ಹೇಗೆ ಎಂಬುದರ ಕುರಿತು ಬಿಜೆಪಿಯ ಮಾಸ್ಟರ್ ಕ್ಲಾಸ್ ಎಂದು ಟೀಕಿಸಿದ್ದಾರೆ.
ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಜೆ ಕೆಪಿಸಿಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಗುತ್ತದೆ. ಅಲ್ಲಿ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ಮೂಲಗಳು, ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಅನೇಕರು ಭಾಗವಹಿಸಲಿದ್ದಾರೆ. ಜನಸಾಮಾನ್ಯರು ಬೆಲೆ ಏರಿಕೆ ವಿಚಾರದಲ್ಲಿ ಆಕ್ರೋಶಭರಿತರಾಗಿದ್ದಾರೆ. ಬಾಯಿ ಮಾತಿನಲ್ಲಿ ಹೇಳಿದರೆ ಸರ್ಕಾರ ಮಾತು ಕೇಳುವುದಿಲ್ಲ. ಒಂದು ದಿನ ರಾಜ್ಯ ಬಂದ್ ಮಾಡಿದರೆ ಸರಿಯಾಗುತ್ತದೆ. ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ, ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ.
ಚುನಾವಣೆ ವರ್ಷದಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದ, ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ.
ಇದನ್ನೂ ಓದಿ | ಪೆಟ್ರೋಲ್, ಡೀಸೆಲ್ ರಫ್ತಿನ ಮೇಲೆ ಸುಂಕ ಹೆಚ್ಚಳ, ಆದ್ರೆ ದರ ಏರಿಕೆ ಆಗಲ್ಲ