ನವ ದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯುತ್ತಿರುವ ಮಾರಥಾನ್ ಸಭೆ ಎರಡನೇ ದಿನವೂ ಮುಂದುವರಿದಿದೆ.
ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರದಿಂದ ಸಭೆ ನಡೆಸುತ್ತಿದ್ದಾರೆ.
ಬುಧವಾರವೂ ಸಭೆ ಮುಂದುವರಿದಿದೆ. ರಾಹುಲ್ ಗಾಂಧಿಯವರ ನಿವಾಸವಷ್ಟೆ ಅಲ್ಲದೆ ಹೋಟೆಲ್‌ನಲ್ಲಿಯೂ ಸಭೆ ನಡೆದಿದೆ. ಈ ಕುರಿತ ಫೋಟೊಗಳನ್ನು ನಾಯಕರು ಹಂಚಿಕೊಂಡಿದ್ದಾರೆ. ಸಭೆಯ ಕುರಿತು ಮಂಗಳವಾರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸಿದ್ಧತೆ, ಪ್ರಚಾರ ಹಾಗೂ ತಂತ್ರವನ್ನು ಚರ್ಚೆ ಮಾಡಲಾಗುತ್ತಿದೆ ಎಂದಿದ್ದರು.
ಬುಧವಾರದ ಸರಣಿ ಸಭೆಗಳಲ್ಲಿಯೂ ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮುನಿಸನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.
ಇಬ್ಬರೂ ನಾಯಕರು ಪರಸ್ಪರರ ಕಾರ್ಯವ್ಯಾಪ್ತಿಯನ್ನು ಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಆಗ ಒಬ್ಬರ ಕಾರ್ಯಕ್ಷೇತ್ರದಲ್ಲಿ ಮತ್ತೊಬ್ಬರು ಮೂಗುತೂರಿಸುವುದು ತಪ್ಪುತ್ತದೆ. ಕೆಲಸಗಳನ್ನು ಹಂಚಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಿರಂತರ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಮುನಿಯಪ್ಪ ಅವರನ್ನು ಹಣಿಯಲು ತಂತ್ರ?
ಮಾರಥಾನ್ ಸಭೆಯ ನಡುವೆಯೇ ಅಚ್ಚರಿಯ ಬೆಳವಣಿಗೆಯಲ್ಲಿ ಇಬ್ಬರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಮಾಜಿ ಶಾಸಕ, ಕೋಲಾರ ಜಿಲ್ಲೆಯ ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಹಾಗೂ ಚಿಂತಾಮಣಿಯ ಡಾ.ಎಂ.ಸಿ. ಸುಧಾಕರ್ ಅವರು, ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಈ ಸಮಯದಲ್ಲಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಸೀರ್ ಅಹಮದ್, ಶಿವಶಂಕರ ರೆಡ್ಡಿ, ಶ್ರೀನಿವಾಸಗೌಡ, ನಂಜೇಗೌಡ, ಅನಿಲ್ ಕುಮಾರ್, ನಾರಾಯಣಸ್ವಾಮಿ ಹಾಜರಿದ್ದರು.
ಆದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಾಯಕರ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆ.ಎಚ್ ಮುನಿಯಪ್ಪ ಗೈರು ಆಗಿದ್ದದ್ದು ಎದ್ದು ಕಾಣುತ್ತಿದೆ. ಈ ಹಿಂದೆ ಮುನಿಯಪ್ಪ ಹಾಗೂ ಮಂಜುನಾಥ್ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಿಕೊಂಡಿದ್ದರು. ಇದೀಗ ಮುನಿಯಪ್ಪ ವಿರೋಧಿಯನ್ನೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದರ ಹಿಂದೆ ಮುನಿಯಪ್ಪ ಅವರ ರಾಜಕೀಯ ಭವಿಷ್ಯದ ಮೇಲೆಯೂ ಪ್ರಶ್ನೆಗಳನ್ನೆತ್ತಿದೆ.
ಇದನ್ನೂ ಓದಿ | Assembly 2023 | ಬಾದಾಮಿಯಿಂದ ಕೋಲಾರಕ್ಕೆ ಸಿದ್ದರಾಮಯ್ಯ ಶಿಫ್ಟ್?