Site icon Vistara News

Congress Politics | ಚುನಾವಣಾ ವರ್ಷದಲ್ಲಿ ದಲಿತೋತ್ಸವಕ್ಕೆ ಕಾಂಗ್ರೆಸ್ ಪ್ಲ್ಯಾನ್‌

karnataka congress leader parameshwar asking two tickets

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಂತೆ ವಿವಿಧ ಸಮುದಾಯಗಳ ಮತ ಸೆಳೆಯಲು ಕಾಂಗ್ರೆಸ್‌ ಸಮುದಾಯವಾರು ಸಮಾವೇಶಗಳನ್ನು ಆಯೋಜನೆ ಮಾಡುತ್ತಿದ್ದು, ಇದೀಗ ದಲಿತೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ.

ಅನೇಕ ಸಮುದಾಯಗಳನ್ನು ಕೇಂದ್ರೀಕರಿಸಿ ಸಮಾವೇಶ ಆಯೋಜನೆಯಾಗಿದೆ. ಇತ್ತೀಚೆಗಷ್ಟೆ ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಅಹಿಂದ ಸಮುದಾಯವನ್ನು ಸೆಳೆಯಲಾಗಿತ್ತು. ದಲಿತ ಸಮುದಾಯದ ಕಾರ್ಯಕ್ರಮ ಆಯೋಜನೆ ಮೂಲಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ ಹಾಗೂ ಮೂಲ ಕಾಂಗ್ರೆಸಿಗರ ಬಣದ ನಡುವೆ ಮತ್ತೊಮ್ಮೆ ಹಗ್ಗಜಗ್ಗಾಟ ನಡೆಯುವ ಸಾಧ್ಯತೆಯೂ ಇದೆ.

ದಲಿತ ಸಮಾವೇಶ ಆಯೋಜನೆ ಮಾಡಲು ಎಐಸಿಸಿ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಹಾಗೂ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಅವರಿಗೆ ನೇತೃತ್ವ ವಹಿಸಲಾಗಿದೆ.

ರಾಜ್ಯದ ವಿವಿಧೆಡೆ ಸಮಾವೇಶಗಳನ್ನು ಆಯೋಜಿಸಲು ಚಿಂತನೆ ನಡೆದಿದೆ. ಸಿದ್ದರಾಮೋತ್ಸವದ ಮೂಲಕ ದಲಿತ ಮತದಾರರು ಸಿದ್ದರಾಮಯ್ಯ ಪರವಾಗಿರುವುದು ಕಂಡುಬಂದಿದೆ. ದಲಿತ ಮತಗಳನ್ನು ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್‌ ಪಕ್ಷದ ಕಡೆಗೆ ಸೆಳೆಯುವ ಸಲುವಾಗಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದಲಿತ ಸಮಾವೇಶಗಳನ್ನು ನಡೆಸುವ ಬಗ್ಗೆ ಈಗಾಗಲೆ ದಲಿತ ಶಾಸಕರು, ಪರಿಷತ್ ಸದಸ್ಯರ ಜತೆ ಸಭೆ ನಡೆಸಿರುವ ಪರಮೇಶ್ವರ್‌, ಕೆಲ ಹೆಜ್ಜೆಗಳನ್ನು ಮುಂದಿಟ್ಟಿದ್ದಾರೆ.

ಕಾಂಗ್ರೆಸ್‌ ವಲಯದಲ್ಲಿ ಈ ನಡೆ ಅತ್ತ ಸಿದ್ದರಾಮಯ್ಯ ಅವರ ಗುಂಪಿನ ನಿದ್ದೆಗೆಡಿಸಿದೆ. ದಲಿತ ಸಮಾವೇಶಗಳ ಆಯೋಜನೆಯಲ್ಲಿ ಸಿದ್ದರಾಮಯ್ಯ ಆಪ್ತ ಡಾ. ಎಚ್‌.ಸಿ. ಮಹದೇವಪ್ಪ ಅವರನ್ನು ಸೇರಿಸಿಕೊಂಡಿಲ್ಲ ಎಂಬುದು ಸಂಚಲನ ಮೂಡಿಸಿದೆ.

ತಮ್ಮ ಪರ ಇರುವ ದಲಿತ ಮತಗಳು ಬೇರೆಡೆ ಹೋಗದಂತೆ ತಡೆಯಲು ಸಿದ್ದರಾಮಯ್ಯ ಮತ್ತೆ ಮತ ಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಪರಮೇಶ್ವರ್‌ ಲೆಕ್ಕಾಚಾರಕ್ಕೆ ತಿರುಗೇಟು ನೀಡಲು ಮಹದೇವಪ್ಪ ಮುಂದಾಗಿದ್ದು, ಶನಿವಾರ ಹಾಗೂ ಭಾನುವಾರ ಪ್ರಮುಖ ದಲಿತ ಸಂಘಟನೆಗಳ ಜತೆ ಸಭೆ ನಡೆಸಲಿದ್ದಾರೆ. ದಲಿತ ಮತಗಳು ತಮ್ಮ ಹಾಗೂ ಸಿದ್ದರಾಮಯ್ಯ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ದಲಿತ ಸಿಎಂ ಕಾರ್ಡ್‌

ಸಿದ್ದರಾಮಯ್ಯ ಅವರ ಪರವಾಗಿರುವ ದಲಿತ ಮತಗಳು ಬೇರೆಡೆ ಹೋಗಬಾರದು ಎನ್ನುವುದು ಒಂದು ಕಾರಣವಾದರೆ, ದಲಿತ ಸಿಎಂ ವಿಚಾರ ಮತ್ತೆ ಚರ್ಚೆಗೆ ಬಂದರೆ ತಮ್ಮನ್ನು ಪರಿಗಣಿಸಬಹುದು ಎಂಬ ನಿರೀಖ್ಷೆ ಮಹದೇವಪ್ಪ ಅವರಲ್ಲಿದೆ. ಮಹದೇವಪ್ಪ ಅವರ ಬೆನ್ನಿಗೆ ಸಿದ್ದರಾಮಯ್ಯ ನಿಂತಿದ್ದಾರೆ. ಇದೇ ನಿರೀಕ್ಷೆಯಲ್ಲೆ ಪರಮೇಶ್ವರ್‌ ಸಹ ಮುಂದಡಿ ಇಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ಮುರುಘಾ ಶ್ರೀ ಪ್ರಕರಣ | ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ, ಹೇಳಿದ್ದೇನು?

Exit mobile version