Site icon Vistara News

Congress Politics | ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ ಮಾಜಿ ಸಂಸದ ಮುದ್ದಹನುಮೇಗೌಡ; ಮುಂದಿನ ದಾರಿ?

muddahanumegowda 1

ಬೆಂಗಳೂರು: ಮಾಜಿ ಸಂಸದ, ಕಾಂಗ್ರೆಸ್‌ ಹಿರಿಯ ಮುಖಂಡ ಮುದ್ದಹನುಮೇಗೌಡ ಕಾಂಗ್ರೆಸ್‌ ತೊರೆದಿದ್ದಾಗಿ ಅಧಿಕೃತವಾಗಿ (Congress Politics) ಘೋಷಣೆ ಮಾಡಿದ್ದಾರೆ.

ಗುರುವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಮುದ್ದಹನುಮೇಗೌಡ ಅವರು ಪಕ್ಷ ತೊರೆಯುವ ಸಂಬಂಧ ಮಾತನಾಡಿದ್ದಾರೆನ್ನಲಾಗಿದೆ. ಬಳಿಕ ಅಲ್ಲಿಂದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮಗೆ ಪಕ್ಷದಿಂದ ಆದ ಅನ್ಯಾಯಗಳು, ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿದ ಮಾಜಿ ಸಂಸದ ಮುದ್ದಹನುಮೇಗೌಡ.

ದೇಶದ ಕಾಂಗ್ರೆಸ್‌ ಸಂಸದರ ಪೈಕಿ ಟಿಕೆಟ್‌ ತಪ್ಪಿದ್ದ ಏಕೈಕ ಸಂಸದ
೨೦೧೯ರ ಲೋಕಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಸಹ ಕೆಲವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮೊಮ್ಮಗನಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಗೆಲುವಿಗೆ ಸುಲಭವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ತುಮಕೂರಿನಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂಬ ತೀರ್ಮಾನವನ್ನು ಪ್ರಕಟಿಸಿತು. ಇದರಿಂದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದ ಆಗಿನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಸ್ಪರ್ಧೆಯಿಂದ ವಂಚಿತರಾದರು. ಈ ಮೂಲಕ ಇಡೀ ದೇಶದಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ಸಂಸದ ಪೈಕಿ ಟಿಕೆಟ್‌ ತಪ್ಪಿದ ಏಕೈಕ ವ್ಯಕ್ತಿ ಎಂಬ ಅಪಖ್ಯಾತಿಗೂ ಮುದ್ದಹನುಮೇಗೌಡ ಗುರಿಯಾದರು.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಸಾಗರ | ಕಾಂಗ್ರೆಸ್‌ ಟಿಕೆಟ್‌ ಬೇಳೂರುಗೋ, ಕಾಗೋಡು ಪುತ್ರಿಗೋ ?

ಚುನಾವಣೆ ಬಳಿಕ ನಿರ್ಲಕ್ಷ್ಯ ಆರೋಪ
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಸೂಕ್ತ ಸ್ಥಾನಮಾನ ಕೊಡುವ ಭರವಸೆಯನ್ನು ಕಾಂಗ್ರೆಸ್‌ ವರಿಷ್ಠರು ನೀಡಿದ್ದರು. ಆದರೆ, ಅದನ್ನೂ ಸಹ ಈಡೇರಿಸಲಿಲ್ಲ, ನನಗೆ ಭೇಟಿ ಮಾಡಿ ಚರ್ಚೆ ನಡೆಸಲೂ ಅವಕಾಶ ನೀಡಿಲ್ಲ ಎಂದು ಮುದ್ದಹನುಮೇಗೌಡ ಆಕ್ರೋಶವನ್ನು ಹಲವು ಬಾರಿ ಹೊರಹಾಕಿದ್ದರು. ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಅಲ್ಲೂ ನಿರಾಸೆ ಕಾದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್‌ನಿಂದ ಎಂಎಲ್ಎ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಟಿಕೆಟ್ ಸಿಗುವ ಯಾವುದೇ ಭರವಸೆ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಸಂಸದರು ಅಸಮಾಧಾನಗೊಂಡಿದ್ದರು.

ಟಿಕೆಟ್‌ ಕೊಟ್ಟರೆ ಮಾತ್ರ ಪಕ್ಷದಲ್ಲಿ ಉಳಿಯುವ ಷರತ್ತು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದ ಸಂದರ್ಭದಲ್ಲಿ ತಮಗೆ ಕುಣಿಗಲ್‌ ಕ್ಷೇತ್ರದಲ್ಲಿ ಟಿಕೆಟ್‌ ಕೊಡುವುದಾದರೆ ಮಾತ್ರ ಪಕ್ಷದಲ್ಲಿ ಉಳಿಯುತ್ತೇನೆ. ಇಲ್ಲವಾದರೆ ಪಕ್ಷ ತೊರೆಯುತ್ತೇನೆ ಎಂದು ಮುದ್ದಹನುಮೇಗೌಡ ಪಟ್ಟುಹಿಡಿದಿದ್ದರು. ಆದರೆ, ಉಭಯ ನಾಯಕರಿಂದ ಈ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.

ಪಕ್ಷದಿಂದ ಬಿಡುಗಡೆ ಕೇಳಿದ್ದೇನೆ- ಮುದ್ದಹನುಮೇಗೌಡ
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರನ್ನೂ ಭೇಟಿ ಮಾಡಿದ್ದೇನೆ. ಪಕ್ಷದಿಂದ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ನಾನು ಕಾಂಗ್ರೆಸ್‌ನಿಂದ ದೂರ ಸರಿದಿದ್ದೇನೆ. ಸಾಂಕೇತಿಕವಾಗಿ ಭೇಟಿ ಮಾಡಬೇಕಿತ್ತು. ಹೀಗಾಗಿ ಭೇಟಿ ಮಾಡಿದ್ದೇನೆ ಎಂದು ಮುದ್ದಹನುಮೇಗೌಡ “ವಿಸ್ತಾರ ನ್ಯೂಸ್”ಗೆ ಹೇಳಿಕೆ ನೀಡಿದ್ದಾರೆ.‌

ಇದನ್ನೂ ಓದಿ | ಬರಗೂರು ರಾಮಚಂದ್ರಪ್ಪ ವಿರುದ್ಧ BJP ದೂರು: ಸಿದ್ದರಾಮಯ್ಯ ಉತ್ತರಿಸಲಿ ಎಂದ ರವಿಕುಮಾರ್

ಹೈಕಮಾಂಡ್‌ ಹೇಳಿದರೂ ಹಿಂದೆ ಸರಿಯಲಾರೆ
2019ರಲ್ಲಿ ಯಾರಿಂದ ಟಿಕೆಟ್ ತಪ್ಪಿತು ಎಂಬುದನ್ನು ನಾನು ಹಲವು ಬಾರಿ ಹೇಳಿದ್ದೇನೆ. 1989ರಿಂದಲೂ ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ. ಹೀಗಾಗಿ ಮುಂದುವರಿಯಬಾರದು ಎಂದು ನಿರ್ಧಾರ ಮಾಡಿದ್ದೇನೆ. ಒಮ್ಮೆ ನಾನು ನಿರ್ಧಾರ ತೆಗೆದುಕೊಂಡ ಬಳಿಕ ಹೈಕಮಾಂಡ್‌ನಿಂದ ಕರೆ ಬಂದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಕ್ಷ ನನಗೆ ಹಲವು ಸ್ಥಾನ ಕೊಟ್ಟಿದೆ. ಅದಕ್ಕಿಂತಲೂ ಹೆಚ್ಚು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಯಾರ ವಿರುದ್ಧವೂ ಮಾತನಾಡಲಾರೆ. ಅದು ನನ್ನ ಸ್ವಭಾವವೂ ಅಲ್ಲ ಎಂದು ಹೇಳಿದ್ದಾರೆ.

ಕೆಲವೇ ದಿನದಲ್ಲಿ ಮುಂದಿನ ನಡೆ ಘೋಷಣೆ
ನನ್ನ ಮುಂದಿನ ನಡೆ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. 2023ಕ್ಕೆ ನಾನು ಕುಣಿಗಲ್ ಕ್ಷೇತ್ರದಿಂದಲೇ ಅಭ್ಯರ್ಥಿ ಆಗುತ್ತೇನೆ. ಪಕ್ಷದಲ್ಲಿ ನನಗೆ ಟಿಕೆಟ್ ತಪ್ಪಿಸಿದವರು ವಿವರಣೆ ಕೊಡಲಿ. ರಾಜ್ಯಸಭಾ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ನಾನು ಪಕ್ಷ ತೊರೆಯುತ್ತಿಲ್ಲ. ವರಿಷ್ಠರು 2019ರಲ್ಲಿ ಹೇಳಿದಂತೆ ನಡೆದುಕೊಳ್ಳಲಿಲ್ಲ ಎಂದು ಮುದ್ದಹನುಮೇಗೌಡ ಅವರು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ | Video | ಯುವತಿಯರೊಂದಿಗೆ ಕುಣಿಗಲ್ ಶಾಸಕ ಡಾ. ರಂಗನಾಥ್ ಕಬಡ್ಡಿ ಆಟ!

Exit mobile version