Site icon Vistara News

Congress President Poll | ಬಳ್ಳಾರಿಯಲ್ಲಿ ಮತ ಹಾಕಿದ ರಾಹುಲ್‌; ಖರ್ಗೆ, ಸಿದ್ದು, ಡಿಕೆಶಿ ಬೆಂಗಳೂರಲ್ಲಿ

AICC ELECTION

ಬೆಂಗಳೂರು: ನೂರಾರು ವರ್ಷ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ೫ನೇ ಅಧ್ಯಕ್ಷೀಯ ಚುನಾವಣೆಯ (Congress President Poll) ಮತದಾನ ಪ್ರಕ್ರಿಯೆಗೆ ಬಿರುಸಿನ ಚಾಲನೆ ಸಿಕ್ಕಿದ್ದು, ಭಾರತ್‌ ಜೋಡೋ ಪಾದಯಾತ್ರೆಯಲ್ಲಿರುವ ಕಾರಣ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಇನ್ನಿತರ ನಾಯಕರು ಬಳ್ಳಾರಿಯ ಸಂಗನಕಲ್ಲುವಿನಲ್ಲಿ ಮತದಾನ ಮಾಡಿದ್ದಾರೆ. ಇತ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಯೂ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೊದಲ ಮತದಾನ ಮಾಡಿದ್ದಾರೆ.

ಬಳ್ಳಾರಿಯ ಸಂಗನಕಲ್ಲುವಿನಲ್ಲಿಯೇ ಭಾನುವಾರ ವಾಸ್ತವ್ಯ ಹೂಡಿದ್ದ ರಾಹುಲ್‌ ಗಾಂಧಿ ಹಾಗೂ ೪೦ಕ್ಕೂ ಹೆಚ್ಚು ಸದಸ್ಯರು ಅಲ್ಲಿಯೇ ಮತದಾನ ಮಾಡಿದ್ದಾರೆ. ಸಂಗನಕಲ್ಲುವಿನಲ್ಲಿಯೇ ಮತದಾನಕ್ಕೆ ಮತಗಟ್ಟೆ ಕೇಂದ್ರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರತಿ ಸಾಲಿನಲ್ಲಿ ನಿಂತ ರಾಹುಲ್‌ ಮತದಾನ ನೆರವೇರಿಸಿದ್ದಾರೆ. ರಾಹುಲ್ ಜತೆಯೇ ಸಂಸದ ಡಿ.ಕೆ ಸುರೇಶ್ ಮತದಾನ ಮಾಡಿದ್ದಾರೆ. ನಾಗೇಂದ್ರ, ಡಿ.ಕೆ.ಸುರೇಶ್, ಬಿ.ವಿ. ಶ್ರೀನಿವಾಸ್, ಆಂಜೀನಯಲ್ ಸೇರಿದಂತೆ ಕೆಲವರು ಬಳ್ಳಾರಿಯಲ್ಲಿ ಮತದಾನ ಮಾಡುತ್ತಾರೆ. ಉಳಿದವರು ಬೆಂಗಳೂರಿನಲ್ಲಿ ಮತದಾನ ಮಾಡುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಬೆಂಗಳೂರಿನಲ್ಲಿ ತಿಳಿಸಿದರು.

ಜರ್ಮನ್‌ ಟೆಂಟ್‌ ಅಳವಡಿಕೆ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಜರ್ಮನ್‌ ಟೆಂಟ್ ಅಳವಡಿಸಿ ಮತದಾನ ಕೇಂದ್ರವನ್ನು ಸಿದ್ಧಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಬರುವ ಮತದಾರರು ಅಲ್ಲಿಯೇ ಪಕ್ಕದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಕಾರಣ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಕಿರಿಕಿರಿ ಅನುಭವಿಸಿದರು.

ಖರ್ಗೆ ಮತದಾನ
ಕೆಪಿಸಿಸಿ ಕಚೇರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಗಾದಿಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದರು. ಕಾಂಗ್ರೆಸ್ ನೀಡಿರುವ ಕ್ಯೂ ಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ತೋರಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಬೂತ್ ನಂಬರ್ 3ರಲ್ಲಿ ಮೊದಲಿಗೆ ಮತದಾರರ ಪಟ್ಟಿ ವೀಕ್ಷಣೆ ಮಾಡಿದ ಖರ್ಗೆ, ಅದರಲ್ಲಿ ತಮ್ಮ ಹೆಸರು ಹುಡುಕಿ, 483 ಕ್ರಮ ಸಂಖ್ಯೆ ಮುಂದೆ ಸಹಿ ಹಾಕಿ ಮತದಾನ ನಡೆಸಿದರು.

ಬೂತ್‌ ನಂಬರ್‌ ೩ರಲ್ಲಿ ಡಿಕೆಶಿ ಪ್ರಥಮ ಮತದಾನ
ಬೂತ್ ನಂಬರ್ 3ರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಎಲ್ಲರಿಗಿಂತ ಮೊದಲು ಮತದಾನ ನೆರವೇರಿಸಿದ್ದು, ಬಳಿಕ ಅನೇಕ ನಾಯಕರು ಮತ ಚಲಾವಣೆ ಮಾಡಿದರು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಸಹ ಮತದಾನ ನೆರವೇರಿಸಿದ್ದಾರೆ.

ಇದನ್ನೂ ಓದಿ | Bharat Jodo | ಬಳ್ಳಾರಿ ಸಭೆಗೆ ಬೆವರು ಹರಿಸಿದ್ದು ಡಿಕೆಶಿ, ಚಪ್ಪಾಳೆ-ಶಿಳ್ಳೆ ಗಿಟ್ಟಿಸಿದ್ದು ಸಿದ್ದರಾಮಯ್ಯ !

ಬೆಂಗಳೂರಲ್ಲಿ ಮೂವರು ಏಜೆಂಟ್‌ಗಳ ನೇಮಕ
ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಮೂರು ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 503 ಮತದಾರರು ಮತದಾನ ಮಾಡಲಿದ್ದಾರೆ. ಬೂತ್ ನಂ. 1ರಲ್ಲಿ: 1 ರಿಂದ 149, ಬೂತ್ ನಂ. 2ರಲ್ಲಿ: 150ರಿಂದ 299 ಹಾಗೂ ಬೂತ್ ನಂ. 3ರಲ್ಲಿ: 300 ರಿಂದ 503 ಮಂದಿ ಮತ ಚಲಾಯಿಸಲಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರ ಚೇಂಬರ್‌ಗಳನ್ನೆ ಬೂತ್‌ಗಳನ್ನಾಗಿ ಮಾರ್ಪಾಡು ಮಾಡಲಾಗಿದೆ. ಸಲೀಂ ಅಹ್ಮದ್ ಚೇಂಬರ್ ಮೊದಲ ಬೂತ್ ಆಗಿದ್ದರೆ, ಸತೀಶ್ ಜಾರಕಿಹೊಳಿ ಚೇಂಬರ್ ಎರಡನೇ ಬೂತ್ ಆಗಿದೆ. ಈಶ್ವರ ಖಂಡ್ರೆ ಚೇಂಬರ್ ಮೂರನೇ ಬೂತ್ ಆಗಿ ಮಾರ್ಪಾಡಾಗಿದೆ.

ಮೊದಲ ಬೂತ್‌ನಲ್ಲಿ ಪ್ರತಿನಿಧಿಸುವ ಮತದಾರರು ಬೆಂಗಳೂರು ಭಾಗದ ಪಿಸಿಸಿ ಸದಸ್ಯರಾಗಿದ್ದರೆ, ಎರಡನೇ ಬೂತ್‌ನಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಪಿಸಿಸಿ ಸದಸ್ಯರಿರಲಿದ್ದಾರೆ. ಮೂರನೇ ಬೂತ್‌ನಲ್ಲಿ ಕರಾವಳಿ ಭಾಗದ ಪಿಸಿಸಿ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಚುನಾವಣೆ ಬಳಿಕ ಬದಲಾವಣೆ- ಮಧು ಬಂಗಾರಪ್ಪ
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾದ ಬಳಿಕ ಬದಲಾವಣೆ ಕಾಣಿಸಿಕೊಳ್ಳಲಿದೆ. ಕಾರ್ಯಕರ್ತರಿಗೂ ಇದು ಹುಮ್ಮಸ್ಸು ತಂದಿದೆ. ದೇಶದ ಜನ ಕಾಂಗ್ರೆಸ್‌ನತ್ತ ತಿರುಗಬೇಕು. ದೇಶದಲ್ಲಿ ಹೊಸ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು. ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ನಡ್ಡಾ, ಅಮಿತ್ ಶಾ, ಮೋದಿ ಯಾರು?
ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟ್ಯಾಂಪ್ ರೀತಿ ಬಳಸಿಕೊಳ್ಳುತ್ತಾರೆ ಎಂಬ ಬಿಜೆಪಿ ಆರೋಪಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಎಚ್.ಎಂ. ರೇವಣ್ಣ, ಪಾಪ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ರಾಷ್ಟ್ರಾದ್ಯಂತ ಚುನಾವಣೆ ನಡೆಯುತ್ತಿದೆ. ಪಾರದರ್ಶಕವಾಗಿ ಈ ಚುನಾವಣೆ ನಡೆಯುತ್ತಿದೆ. ಬಿಜೆಪಿಯವರಿಗೆ ಟ್ವೀಟ್ ಮಾಡುವುದಷ್ಟೇ ಕೆಲಸ. ಹಾಗಾದರೆ ಇವರ ಜೆ.ಪಿ. ನಡ್ಡಾ, ಅಮಿತ್ ಶಾ, ನರೇಂದ್ರ ಮೋದಿ ಯಾರು? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ | Bharat Jodo | ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ಸ್ಥಳ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು

Exit mobile version