Site icon Vistara News

Congress Protest | ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ; ರಾಜ್ಯಾದ್ಯಂತ ಭುಗಿಲೆದ್ದ ಕೈ ಕಾರ್ಯಕರ್ತರ ಆಕ್ರೋಶ

Congress Protest

ಬೆಂಗಳೂರು: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮಳೆ ಹಾನಿ ಪ್ರದೇಶಗಳ ವಿಕ್ಷಣೆಗೆ ತೆರಳಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದನ್ನು ವಿರೋಧಿಸಿ ರಾಜ್ಯದ ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ (Congress Protest) ನಡೆಸಿ ಆಕ್ರೋಶ ಹೊರಹಾಕಿದರು. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಿದ ಪ್ರತಿಭಟನಾಕಾರರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮಡಿಕೇರಿಯಲ್ಲಿ ಎಸ್‌ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ
ಮಡಿಕೇರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಗಣಪತಿ ದೇವಾಲಯದಿಂದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ಬರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡರು‌, ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಬಳಿಕ ಮಾಜಿ ಸಿಎಂ ಪೋಸ್ಟರ್ ಹರಿದು ಮೊಟ್ಟೆ ಎಸೆದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಡಿಕೇರಿ ನಗರ ಕಾಂಗ್ರೆಸ್ ಮುಖಂಡ ಪ್ರಕಾಶ್ ಆಚಾರ್ಯ, ನಗರ ಠಾಣೆಗೆ ದೂರು ನೀಡಿದರು.

ಟಿಪ್ಪುಜಯಂತಿ ಆಚರಣೆಯನ್ನು ರದ್ದುಪಡಿಸಲಾಗಿದೆ. ಆದರೂ ಕೂಡ ಕೆಲವರು ಪದೇಪದೆ ಟಿಪ್ಪು ವಿಚಾರವನ್ನು ತೆಗೆಯುವ ಮೂಲಕ ಜನತೆಯನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಕೊಡವ ಜನಾಂಗದ ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಸಂದರ್ಭದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯಲಿಲ್ಲ. ಬಿಜೆಪಿಯವರು ರಾಜಕೀಯ ದ್ವೇಷದಿಂದ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಮುಖಂಡ ಎ.ಎಸ್.ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | ಬಿಜೆಪಿಯ ಗೋಬ್ಯಾಕ್‌ ‌ವಿರುದ್ಧ ಸಿದ್ದರಾಮಯ್ಯ ಗರಂ, ಆ. 26ರಂದು ಕೊಡಗಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಷಪೂರಿತ ಮೊಟ್ಟೆ ಎಸೆಯಲಾಗಿದೆ
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಮೊಟ್ಟೆ ತಿಂದು ವಿನೂತನ ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ. ಕಾರಿನ ಮೇಲೆ ವಿಷಪೂರಿತ ಮೊಟ್ಟೆಯನ್ನು ಎಸೆಯಲಾಗಿದ್ದು, ಭದ್ರತೆ ಲೋಪದಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮೊಟ್ಟೆ ಎಸೆದವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಿದ್ದರಾಮಯ್ಯ ತಂಟೆಗೆ ಬಂದರೆ ರಾಜ್ಯ ಹೊತ್ತಿ ಉರಿಯುತ್ತದೆ: ಕೆ‌.ಎನ್.ರಾಜಣ್ಣ
ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿರುವುದು ಅನಾಗರಿಕ ವರ್ತನೆಯಾಗಿದೆ. ಬಿಜೆಪಿಯಲ್ಲಿ ಅಲ್ಲೊಂದು, ಇಲ್ಲೊಂದು ಇಂತಹ ಕುಕೃತ್ಯ ಎಸಗುವ ನಾಯಿಕೊಡೆಗಳು ತಲೆ ಎತ್ತಿವೆ. ಸಿದ್ದರಾಮಯ್ಯ ಅವರ ತಂಟೆಗೆ ಬಂದರೆ ಇಡೀ ರಾಜ್ಯ ಹೊತ್ತಿ ಉರಿಯುತ್ತದೆ. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ತುಮಕೂರಿನಲ್ಲಿ ಮಾಜಿ ಶಾಸಕ ಕೆ‌.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.

ಇಂತಹ ಘಟನೆಗಳನ್ನು ಎಲ್ಲರೂ ಖಂಡಿಸಬೇಕು. ಸಿದ್ದರಾಮಯ್ಯ ಮಳೆ ಸಂತ್ರಸ್ತರ ಭೇಟಿ ಮಾಡಿ, ಸ್ಥಳ ಪರಿಶೀಲನೆ ಮಾಡಲು ಮಡಿಕೇರಿಗೆ ಹೋಗಿದ್ದರು. ಆದರೆ, ಅವರ ಕಾರಿನ ಮೇಲೆ ಮುತ್ತಿಗೆ ಹಾಕಿರುವುದು ಇಡೀ ರಾಜ್ಯದ ತಳ ಸಮುದಾಯದ ಮೇಲೆ ಆಗಿರುವ ಹಲ್ಲೆ ಎಂದು ಹೇಳಲಾಗಿದೆ. ಈ ಘಟನೆ ಖಂಡಿಸಿ ಆ.26ರಂದು ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಆರಗ ಜ್ಞಾನೇಂದ್ರ, ಸಾವರ್ಕರ್‌ ಭಾವಚಿತ್ರ ದಹನ
ಧಾರವಾಡ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಧಾರವಾಡದ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಳಿ ತೆರೆಳಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಭಾವಚಿತ್ರಗಳನ್ನು ದಹಿಸಿದರು.

ಮಾಜಿ ಮುಖ್ಯಮಂತ್ರಿಗೆ ರಕ್ಷಣೆ ನೀಡುವಲ್ಲಿ ವೈಫಲ್ಯ
ಹಾಸನ ಜಿಲ್ಲೆಯ ಬೇಲೂರಿನ ಬಸವೇಶ್ವರ ವೃತ್ತದಲ್ಲಿ ಮಾಜಿ‌‌ ಸಚಿವ ಬಿ.ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗೃಹ ಇಲಾಖೆಯ ವೈಫಲ್ಯದಿಂದಲೇ ಕಾರಿನ ಮೊಟ್ಟೆ ಎಸೆಯಲಾಗಿದೆ. ಅನೇಕ ಕಡೆಗಳಲ್ಲಿ ಸಿದ್ದರಾಮಯ್ಯ ಅವರ ಕಾರನ್ನು ಸುತ್ತುವರಿದು ಪ್ರತಿಭಟನೆ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ‌‌ ಸಚಿವ ಬಿ.ಶಿವರಾಂ ಕಿಡಿಕಾರಿದರು.

ಇದನ್ನೂ ಓದಿ | ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರಿನಲ್ಲೂ ಕಪ್ಪು ಬಾವುಟ ಪ್ರದರ್ಶನ

Exit mobile version