oಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾದ ಅನಾಹುತ ಸೇರಿ ವಿವಿಧ ವಿಚಾರಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕರು, ಮೂಲಸೌಕರ್ಯ ವ್ಯವಸ್ಥೆಯನ್ನು ಹದಗೆಡಿಸುವ ಮೂಲಕ ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿ ಅನುಸರಿಸಲಾಗುತ್ತಿದೆ ಎಂದು ಗೇಲಿ ಮಾಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಕಾರಣ, ಅವರು ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದಾರೆ. ಬೊಮ್ಮಾಯಿ ಅವರು ಸದಾ ಉತ್ತರ ಪ್ರದೇಶ ಮಾಡೆಲ್ ತರುವುದಾಗಿ ಹೇಳುತ್ತಿದ್ದರು. ಈಗ ಮಹದೇವಪುರ ಸೇರಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಕುಸಿದಿದೆ. ಬೆಂಗಳೂರಿನ ಇತಿಹಾಸದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ಸಾಗಿಸಲು ಟ್ರ್ಯಾಕ್ಟರ್ ಬಳಸಿರಲಿಲ್ಲ ಎಂದರು.
ಈ ಮಳೆಯ ಮೂಲಕ ಬಿಜೆಪಿ ಸರ್ಕಾರ ಈ ರಾಜ್ಯವನ್ನು ಹಾಗೂ ಬೆಂಗಳೂರಿನ ಆಡಳಿತ ನಡೆಸಲು ತಾವುಗಳು ಯೋಗ್ಯರಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿ ಭಾರಿ ಮಳೆ ಬರುವುದು ಹೊಸತಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಸ್ತೆಗಳ ಪಕ್ಕದಲ್ಲಿ ಚರಂಡಿ ಮಾಡುತ್ತಿದ್ದರು. ಬಿಜೆಪಿ ಬಂದಮೇಲೆ ರಸ್ತೆಗಳ ಮೇಲೆ ಬಿಜೆಪಿಯವರು ಚರಂಡಿ ಮಾಡಿದ್ದಾರೆ ಎಂದು ಈ ಮಳೆಯ ಮೂಲಕ ತಿಳಿದಿದೆ. ಎಲ್ಲ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದು ಬೆಂಗಳೂರು ನಗರದ ಅವೈಜ್ಞಾನಿಕ ಆಡಳಿತಕ್ಕೆ ಸಾಕ್ಷಿ ಎಂದರು.
ಇದನ್ನೂ ಓದಿ | Bengaluru Rain | ಕನಸಿನ ಮನೆಗಳು ನೀರಲ್ಲಿ ಮುಳುಗಡೆ; ಬೋಟ್ ಮೂಲಕ ಜನರ ರಕ್ಷಣೆ
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಬೆಂಗಳೂರಿಗೆ ಗಂಡಾಂತರ, ಕೆಟ್ಟ ಘಳಿಗೆ ಆರಂಭವಾಗುತ್ತದೆ. 2008-13ರವರೆಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಾಗಲೂ ಇದೇ ಅವ್ಯವಸ್ಥೆ ತಾಂಡವವಾಡಿತ್ತು.
ಬೆಂಗಳೂರಿನಲ್ಲಿರುವ ಎಲ್ಲ ಫ್ಲೈ ಓವರ್ ಮಾಡಿದ್ದು, ಸ್ವಚ್ಛ ಬೆಂಗಳೂರು ತಂದಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಇರುವವರೆಗೂ ಕಸದ ಸಮಸ್ಯೆ ಇರಲಿಲ್ಲ. ಬಿಜೆಪಿ ಬಂದ ದಿನದಿಂದ ಕಸದ ಸಮಸ್ಯೆ ಹೆಚ್ಚಾಯಿತು. ಆಟದ ಮೈದಾನ, ಉದ್ಯಾನವನ, ಇಂದಿರಾ ಕ್ಯಾಂಟೀನ್, ಟೆಂಡರ್ ಶ್ಯೂರ್ ರಸ್ತೆಗಳು, ವೈಟ್ ಟಾಪಿಂಗ್ ರಸ್ತೆ ಆರಂಭವಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ರಾಜ್ಯ ಸರ್ಕಾರ ಬೆಂಗಳೂರಿನ ಜನರಿಗೆ ನರಕ ದರ್ಶನ ಮಾಡಿಸುತ್ತಿದೆ. ಈ ಸರ್ಕಾರಕ್ಕೆ ಬದ್ಧತೆ ಇಲ್ಲ. ಹಲವು ದಿನಗಳಿಂದ ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಳೆಯಿಂದ ಬೋಟಿನಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ವಿಫಲವಾಗಿದೆ. ಐಟಿ ಬಿಟಿ ಕಂಪನಿಗಳ ಸಂಸ್ಥೆ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಪತ್ರ ಬರೆದು ಬೆಂಗಳೂರು ತ್ಯಜಿಸುವುದಾಗಿ ತಿಳಿಸಿವೆ. ಆದರೂ ರಾಜ್ಯ ಸರ್ಕಾರಕ್ಕೆ ಇದು ಅರ್ಥವಾಗುತ್ತಿಲ್ಲ. ಸಚಿವರುಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ.
ಈ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಂದು ಬೆಂಗಳೂರಿನ ಉಸ್ತುವಾರಿ ಮಂತ್ರಿಗಳಾಗಿದ್ದಾರೆ. ತಾವು ಸರಿಯಾಗಿ ಕೆಲಸ ಮಾಡಬೇಕು ಅಥಾ ಬೇರೆಯವರಿಗೆ ಅವಕಾಶ ಮಾಡಿಕೊಳ್ಳಬೇಕು. ಅಟಲ್ ಬಿಹಾರಿ ವಾಜಪೇಯಿ ಅವರೇ ವಿಶ್ವದ ನಾಯಕರು ಬೆಂಗಳೂರಿಗೆ ಬರಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಇಂದು ಜನ ಬೆಂಗಳೂರಿಗೆ ಬರಲು ಹೆದರುತ್ತಿದ್ದಾರೆ ಎಂದರು.
ಬಿಜೆಪಿಯಿಂದ ಬೆಂಗಳೂರು ಉಳಿಸಲು ಆಗುತ್ತಿಲ್ಲ
ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಬೆಂಗಳೂರು ಈ ವರ್ಷ ಮಾತ್ರವಲ್ಲ ಕಳೆದ ವರ್ಷವೂ ಭಾರಿ ಮಳೆಗೆ ಮುಳುಗಿತ್ತು. ಆದರೂ ಬಿಜೆಪಿಯಿಂದ ಬೆಂಗಳೂರು ಉಳಿಸಲು ಆಗುತ್ತಿಲ್ಲ. ಬೆಂಗಳೂರು ಉಳಿಸುವ ಬದಲು ಮುಳುಗಿಸುತ್ತಿದ್ದಾರೆ. ಬೆಂಗಳೂರು ಕೇವಲ ನೀರಿನಲ್ಲಿ ಮುಳುಗುತ್ತಿಲ್ಲ, ಬೆಂಗಳೂರಿನ ಘನತೆ, ಖ್ಯಾತಿ, ಗೌರವ ಎಲ್ಲವೂ ಮುಳುಗುತ್ತಿದೆ. ಐಟಿ ಕ್ಯಾಪಿಟಲ್, ಸಿಲಿಕಾನ್ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಲ್ಲವೂ ಮುಳುಗುತ್ತಿದೆ. ಬೆಂಗಳೂರು ಉದ್ಯೋಗಗಳು, ಜನರ ಜೀವನ, ಬೆಂಗಳೂರಿನಲ್ಲಿ ಉತ್ಪಾದನೆ, ತೆರಿಗೆ ಆದಾಯ ಎಲ್ಲವೂ ಮುಳುಗುತ್ತಿದೆ. ದೇಶದ ಆಸ್ತಿಯಾಗಿ, ಪ್ರಪಂಚದ ಆಕರ್ಷಕವಾಗಿದ್ದ ಬೆಂಗಳೂರು ಮುಳುಗುತ್ತಿದೆ. ಇದಕ್ಕೆ ನೇರ ಕಾರಣ ಬಿಜೆಪಿಯ ದುರಾಡಳಿತ, 40% ಸರ್ಕಾರ ಬೆಂಗಳೂರನ್ನು, ಜನರ ಜೀವನ ಬಲಿ ಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | Bengaluru Rain | ವಿಲ್ಲಾದಲ್ಲಿ ಶ್ವಾನ ವಿಲವಿಲ, ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣೆ