Site icon Vistara News

ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ: ಡಿಕೆಶಿ, ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ

‌ ಡಿ.ಕೆ.ಶಿವಕುಮಾರ್ siddaramaiah

ಬೆಂಗಳೂರು: ಕಾಂಗ್ರೆಸ್‌ ನಾಯಕರ ಇ.ಡಿ. ವಿಚಾರಣೆ ಖಂಡಿಸಿ ಕರ್ನಾಟಕ ಕಾಂಗ್ರೆಸ್‌ ಗುರುವಾರ ರಾಜಭವನ ಚಲೋ ಹಮ್ಮಿಕೊಂಡಿದೆ. ‘ದೇಶದಲ್ಲಿ ನಡೆಯುತ್ತಿರುವ ಅಧಿಕಾರ ದುರುಪಯೋಗ, ಸಂವಿಧಾನಿಕ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿರುವ ದ್ವೇಷದ ರಾಜಕಾರಣ ಹಾಗೂ ಪ್ರತಿಭಟನೆ ನಿರತರ ಮೇಲೆ ದೌರ್ಜನ್ಯ ಖಂಡಿಸಿ ಗುರುವಾರ(ಜೂನ್ 16) ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ತುರ್ತು ಜಂಟಿ ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್‌ ಮಾತನಾಡಿದರು.

‘ದೇಶದಲ್ಲಿ ಸಂವಿಧಾನ, ಕಾನೂನನ್ನು ಗಾಳಿಗೆ ತೂರಿ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಇಡಿ ನೋಟೀಸ್ ಕೊಟ್ಟು ವಿಚಾರಣೆ ಮಾಡುತ್ತಿದೆ. ಎರಡು-ಮೂರು ಗಂಟೆಯಲ್ಲಿ ಮಾಡುವ ವಿಚಾರಣೆಯನ್ನು 10, 14 ಗಂಟೆಗಳ ಕಾಲ ಮಾಡಿ ಕಿರುಕುಳ ನೀಡುತ್ತಿದ್ದಾರೆ.

ಇದನ್ನೂ ಓದಿ | ರಾಹುಲ್‌ ಗಾಂಧಿ ನಿವಾಸ ತಲುಪಿದ ಪ್ರಿಯಾಂಕಾ ಗಾಂಧಿ; ಕೆಲವೇ ಕ್ಷಣಗಳಲ್ಲಿ ಇ ಡಿ ಕಚೇರಿಯತ್ತ

ಈ ವಿಚಾರದ ಬಗ್ಗೆ ಮಾತನಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ತಲೆಯಲ್ಲಿ ಮೂರು ಕಾಸಿನ ಬುದ್ದಿ ಇಲ್ಲ. ಕೇವಲ ಸಗಣಿ ಇದೆ. ಅವರು ಬೇಕಾದರೆ ಈ ಬಗ್ಗೆ ಚರ್ಚೆಗೆ ಕರೆಯಲಿ, ಪಕ್ಷದ ಅಧ್ಯಕ್ಷ ಎಂಬುದನ್ನು ಮರೆತು ಚರ್ಚೆಗೆ ಸಿದ್ಧನಿದ್ದೇನೆ. ರಾಹುಲ್ ಗಾಂಧಿ ಅವರು ಏನು ಉತ್ತರ ಕೊಡಬೇಕೋ ಕೊಡುತ್ತಾರೆ. ಕಾಂಗ್ರೆಸ್ ನ ಯಾವುದೇ ನಾಯಕರು ನಿಮ್ಮ ಜೈಲು ಬೆದರಿಕೆಗೆ ಹೆದರುವುದಿಲ್ಲ.

ನಮ್ಮ ನಾಯಕರು ಏನು ಮಾಡಿದ್ದಾರೆ ಎಂದು ದೆಹಲಿಯಲ್ಲಿ ಅವರನ್ನು ಎಳೆದುಕೊಂಡು ಹೋಗುತ್ತಿದ್ದೀರಿ. ಡಿ.ಕೆ ಸುರೇಶ್, ದಿನೇಶ್ ಗುಂಡೂರಾವ್, ಶ್ರೀನಿವಾಸ್, ಹೆಚ್.ಕೆ ಪಾಟೀಲ್, ಚಿದಂಬರಂ, ವೇಣುಗೋಪಾಲ್ ಅವರನ್ನು ದನಗಳನ್ನು ಎಳೆದುಕೊಂಡು ಹೋಗುವಂತೆ ಎಳೆದುಕೊಂಡು ಹೋಗುತ್ತಿದ್ದೀರಿ. ಇದು ಬಿಜೆಪಿಯ ದುರಾಡಳಿತ. ನಿಮಗೆ ತಾಕತ್ತಿದ್ದರೆ ಕಾನೂನು ಬದ್ಧ ಹೋರಾಟ ಮಾಡಿ, ಅದನ್ನು ಎದುರಿಸಲು ನಾವು ಸಿದ್ಧವಿದ್ದೇವೆ.

ಸರ್ಕಾರದ ಈ ನಡೆ ವಿರುದ್ಧ ಪಕ್ಷದ ಕಚೇರಿಯಿಂದ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ನಾಯಕರು ಭಾಗವಹಿಸಬೇಕು. ನಾಡಿದ್ದು ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. ನೀವು ಜೈಲಿಗಾದರೂ ಹಾಕಿ, ಎಷ್ಟು ಕೇಸಾದರೂ ಹಾಕಿ, ನಾವು ಹೆದರುವುದಿಲ್ಲ ಎಂದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಬರಬೇಕು ಎಂದು ನಿತ್ಯ 9-10 ಗಂಟೆಗಳ ಕಾಲ ವಿಚಾರಣೆ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಿರ್ದೇಶಕರಾಗಿದ್ದು, ಖರ್ಗೆ ಹಾಗೂ ಇತರರು ಟ್ರಸ್ಟಿಗಳಾಗಿದ್ದಾರೆ. ಇದೊಂದು ಸುಳ್ಳು ಮೊಕದ್ದಮೆ. ನನಗೆ ಕಾನೂನು ರೀತಿಯ ವಿಚಾರಣೆಗೆ ನಮ್ಮ ತಕರಾರಿಲ್ಲ. ಕಾಂಗ್ರೆಸ್ ಕಾನೂನನ್ನು ಗೌರವಿಸುತ್ತದೆ. ಆದರೆ ಯಾವುದೇ ಸಾಕ್ಷಿ ಇಲ್ಲದಿದ್ದರೂ ದ್ವೇಷದ ರಾಜಕಾರಣಕ್ಕೆ ಬಿಜೆಪಿ ಸರ್ಕಾರ ಕಿರುಕುಳ ನೀಡುತ್ತಿದ್ದು, ಇದನ್ನು ನಾವು ವಿರೋಧಿಸುತ್ತಿದ್ದೇವೆ.

ನೀವು ಶಾಶ್ವತವಾಗಿ ಅಧಿಕಾರದಲ್ಲಿರುತ್ತೀರಿ ಎಂದು ಭಾವಿಸಿದ್ದೀರಿ. ನಿಮಗೆ ಕೇಡುಗಾಲ ಬಂದಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ನೀವು ನಡೆದುಕೊಳ್ಳುತ್ತಿದ್ದೀರಿ. ನಾಳೆ ಪಕ್ಷದ ವತಿಯಿಂದ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಕ್ಷದ ಎಲ್ಲ ನಾಯಕರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನಾಡಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಇದೇ ತರಹದ ಕಾರ್ಯಕ್ರಮ ನಡೆಯಲಿದೆ ಎಂದರು.

ಇದನ್ನೂ ಓದಿ | 2ನೇ ದಿನವೂ ಮುಂದುವರಿದ ರಾಹುಲ್‌ ಗಾಂಧಿ ಇ ಡಿ ವಿಚಾರಣೆ; ಧರಣಿ ಕುಳಿತ ಕಾಂಗ್ರೆಸ್ಸಿಗರು

ಬಿಜೆಪಿಯವರು ನಿಯಮ ಉಲ್ಲಂಘನೆ ಮಾಡಿಲ್ಲವೇ?

ನಗರದಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂಬ ಹೈಕೋರ್ಟ್ ನಿರ್ದೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ‘ಬಿಜೆಪಿಯವರು ನಿಯಮ ಉಲ್ಲಂಘನೆ ಮಾಡಿಲ್ಲವೇ? ಜನರ ಹಣ ಲೂಟಿ ಮಾಡಿಲ್ಲವೇ? ಸಂವಿಧಾನ ನೀಡಿರುವ ಹಕ್ಕು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

ಇದೇ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ದ್ವೇಷದ ರಾಜಕಾರಣ ಮಾಡುವಾಗ, ಅನ್ಯಾಯ ಆಗುತ್ತಿರುವಾಗ ಸುಮ್ಮನೆ ಕೂರಲು ಸಾಧ್ಯವೇ? ಗಾಂಧಿಜಿ ಅವರು ಕಾನೂನು ಮುರಿದು ಹೋರಾಟ ಮಾಡಲಿಲ್ಲವೇ? ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ಹುಡುಗರು ನಾಗೇಶ್ ಮನೆ ಮುಂದೆ ಚಡ್ಡಿ ಸುಟ್ಟಿದ್ದಕ್ಕೆ ಕೇಸ್ ಹಾಕಿದರು, ಬಿಜೆಪಿ ಛಲವಾದಿ ನಾರಾಯಣ ಹಳೇ ಚಡ್ಡಿ ಹೊತ್ತು ಬಂದಾಗ ಅವನ ಮೇಲೆ ಯಾವ ಕೇಸ್ ಹಾಕಿದ್ದೀರಿ? ಅವರಿಗೆ ಹೈಕೋರ್ಟ್ ಆದೇಶ ಅನ್ವಯಿಸುವುದಿಲ್ಲವೇ? ಎಂದರು.

ಇದನ್ನೂ ಓದಿ | ವಿಸ್ತಾರ Explainer | ಕಾಂಗ್ರೆಸ್‌ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ ನ್ಯಾಷನಲ್‌ ಹೆರಾಲ್ಡ್‌ ಉರುಳು!

Exit mobile version