ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ನಡೆಯುತ್ತಿದ್ದ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಕಾರಿಗೆ ಬೆಂಕಿ ಹಚ್ಚಿದ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ (ಜುಲೈ 22) ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗೆ ಒಳಪಡಿಸಿತ್ತು. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರ ಭಾಗವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಕೆಲವು ಉದ್ರಿಕ್ತ ಪ್ರತಿಭಟನಾಕಾರರು ಗುಜರಿ ಕಾರನ್ನು ತಂದು ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚಿದ ಘಟನೆ ತಿಳಿದ ಪೊಲೀಸರು ಕೂಡಲೇ ಅಗ್ನಿಶಾಮಕ ದಳ ಕರೆಸಿ ಬೆಂಕಿಯನ್ನು ನಂದಿಸಿದ್ದರು ಹಾಗೂ ಹೆಚ್ಚಿನ ಅನಾಹುತವಾಗುವದನ್ನು ತಪ್ಪಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ಹೊಣೆಯನ್ನು ಕೇಂದ್ರ ವಿಭಾಗ ಡಿಸಿಪಿಗೆ ವಹಿಸಲಾಗಿದೆ.
ಒಂದು ಕಾರನ್ನು ಇಡಿ ಕಚೇರಿ ಬಳಿ ಬೆಂಕಿ ಹಾಕುವುದು ಹಾಗೂ ಇನ್ನೊಂದು ಕಾರನ್ನು ಸಿಎಂ ನಿವಾಸದ ಬಳಿ ಸುಡುವ ಯೋಜನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಹೊಂದಿದ್ದರು. ಅದರೆ, ಸಿಎಂ ನಿವಾಸದ ಬಳಿ ಭದ್ರತೆ ಹೆಚ್ಚಿದ್ದ ಕಾರಣದಿಂದ ಕಿಡಿಗೇಡಿಗಳು ಶೇಷಾದ್ರಿಪುರ ಬಳಿ ಕಾರಿಗೆ ಬೆಂಕಿ ಹಚ್ಚಿರುವುದಾಗಿ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದಿದೆ ಎನ್ನಲಾಗಿದೆ.
ಪ್ರಕರಣದಲ್ಲಿ ಬಂಧಿತರು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಂದೆ ಎನ್.ಎ. ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ನಾಯಕನ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದು, ಇನ್ನೂ ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Traffic in Bangalore | ಸೋನಿಯಾಗೆ ಇಡಿ ವಿಚಾರಣೆ; ಬೆಂಗಳೂರಲ್ಲಿ ಕೈ ಪ್ರತಿಭಟನೆ, ಇಲ್ಲೆಲ್ಲ ಟ್ರಾಫಿಕ್ ಜಾಮ್