Site icon Vistara News

ಬೆಂಗಳೂರಲ್ಲೇ ವಂಚಕ ಸುಕೇಶ್‌ ಚಂದ್ರಶೇಖರ್‌ 12 ಲಕ್ಸುರಿ ಕಾರುಗಳ ಹರಾಜು; ನಿಮಗೂ ಇದೆ ಚಾನ್ಸ್!

Sukesh Chandrasekhar

Conman Sukesh Chandrasekhar's high-end cars to be auctioned on November 28

ಬೆಂಗಳೂರು: ದೇಶದ ಹಲವು ಉದ್ಯಮಿಗಳಿಂದ ಸುಮಾರು 200 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಪ್ರಕರಣದಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್‌ ಚಂದ್ರಶೇಖರ್‌ಗೆ (Conman Sukesh Chandrasekhar) ಸೇರಿದ ಸುಮಾರು 12 ಐಷಾರಾಮಿ ಕಾರುಗಳನ್ನು ಬೆಂಗಳೂರಿನಲ್ಲಿಯೇ ಹರಾಜು ನಡೆಸಲು ಆದಾಯ ತೆರಿಗೆ ಇಲಾಖೆ (Income Tax Department) ತೀರ್ಮಾನಿಸಿದೆ. ಸುಖೇಶ್‌ ಚಂದ್ರಶೇಖರ್‌ನಿಂದ ವಶಪಡಿಸಿಕೊಂಡಿರುವ ಐಷಾರಾಮಿ ಕಾರುಗಳನ್ನು (Luxury Cars) ನವೆಂಬರ್‌ 28ರಂದು ಬೆಂಗಳೂರಿನಲ್ಲಿಯೇ ಹರಾಜು ಹಾಕಲಾಗುತ್ತದೆ. ಆ ಮೂಲಕ ಜಮೆಯಾದ ಹಣವನ್ನು ಹಲವು ಕಂಪನಿಗಳು ಹಾಗೂ ಉದ್ಯಮಿಗಳಿಗೆ ಸುಕೇಶ್‌ ಚಂದ್ರಶೇಖರ್‌ ಉಳಿಸಿಕೊಂಡಿರುವ ಬಾಕಿಯನ್ನು ಪಾವತಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಹತ್ತಾರು ಜನರಿಗೆ ವಂಚಿಸಿರುವ ಸುಕೇಶ್‌ ಚಂದ್ರಶೇಖರ್‌ನಿಂದ ಐಟಿ ಇಲಾಖೆ ಅಧಿಕಾರಿಗಳು 308 ಕೋಟಿ ರೂಪಾಯಿಯನ್ನು ವಸೂಲಿ ಮಾಡಬೇಕಿದೆ. ಇದರ ಭಾಗವಾಗಿಯೇ ಆತನಿಗೆ ಸೇರಿದ, ಆತನಿಂದ ಜಪ್ತಿ ಮಾಡಿರುವ 12 ಐಷಾರಾಮಿ ಕಾರುಗಳನ್ನು ಹರಾಜಿಗಿಡಲು ತೀರ್ಮಾನಿಸಲಾಗಿದೆ. ನಿಸಾನ್‌ ಟಿಯಾನಾದಿಂದ ಹಿಡಿದು ರೋಲ್ಸ್‌ ರಾಯ್ಸ್‌ವರೆಗೆ ಹಲವು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವೆಲ್ಲವೂ ಸುಸ್ಥಿತಿಯಲ್ಲಿದ್ದು, ಮಾರಾಟ ಮಾಡುವ ಮೂಲಕ ಹಣ ವಸೂಲಿ ಮಾಡುವುದು ಐಟಿ ಇಲಾಖೆ ಅಧಿಕಾರಿಗಳ ಉದ್ದೇಶವಾಗಿದೆ. ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲೇ ಕಾರುಗಳು ಇವೆ.

ಹರಾಜಿಗಿರುವ ಕಾರುಗಳು ಹಾಗೂ ಅವುಗಳ ಮೀಸಲು ಬೆಲೆ

  1. ಬಿಎಂಡಬ್ಲ್ಯೂ ಎಂ-5- ಮೀಸಲು ಬೆಲೆ 18.79 ಲಕ್ಷ ರೂ.
  2. ರೇಂಜ್‌ ರೋವರ್-‌ ಮೀಸಲು ಬೆಲೆ 44.43 ಲಕ್ಷ ರೂ.
  3. ಜಾಗ್ವಾರ್‌ ಎಕ್ಸ್‌ಕೆಆರ್‌ ಕೂಪ್-‌ 31.07 ಲಕ್ಷ ರೂ.
  4. ಡುಕಾಟಿ ಡೈವೆಲ್-‌ 3.56 ಲಕ್ಷ ರೂ.
  5. ಇನೋವಾ ಕ್ರಿಸ್ಟಾ- 11.89 ಲಕ್ಷ ರೂ.
  6. ನಿಸಾನ್‌ ಟಿಯಾನಾ- 2.03 ಲಕ್ಷ ರೂ.
  7. ಟೊಯೋಟಾ ಪ್ರ್ಯಾಡೋ-22.50 ಲಕ್ಷ ರೂ.
  8. ಲ್ಯಾಂಬೋರ್ಗಿನಿ- 38.52 ಲಕ್ಷ ರೂ.
  9. ರೋಲ್ಸ್‌ ರಾಯ್ಸ್-‌ 1.74 ಕೋಟಿ ರೂ.
  10. ಬೆಂಟ್ಲೆ- 83.35 ಲಕ್ಷ ರೂ.
  11. ಟೊಯೋಟಾ ಫಾರ್ಚುನರ್-‌ 15.31 ಲಕ್ಷ ರೂ.
  12. ಪೋರ್ಶೆ- 5.08 ಲಕ್ಷ ರೂ.

ಏನಿದು ಪ್ರಕರಣ?

ದೇಶದ ಹಲವು ಉದ್ಯಮಿಗಳಿಗೆ ಸುಮಾರು 200 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಸುಕೇಶ್‌ ಚಂದ್ರಶೇಖರ್‌ ಬಂಧಿತನಾಗದ್ದಾನೆ. ಈತನ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚನೆ, ಸುಲಿಗೆ ಹಾಗೂ ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣಗಳು ದಾಖಲಾಗಿವೆ. 2023ರ ಫೆಬ್ರವರಿ 16ರಂದು ಇ.ಡಿ ಅಧಿಕಾರಿಗಳು ಈತನನ್ನು ಬಂಧಿಸಿದ್ದು, ಸದ್ಯ ದೆಹಲಿ ಜೈಲಿನಲ್ಲಿದ್ದಾನೆ. ಈತನ ಹಣಕಾಸು ವಹಿವಾಟಿನ ಕುರಿತು ಐ.ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಾಲಿವುಡ್‌ ನಟಿಯರ ಜತೆ ಸುಕೇಶ್‌ ಚಂದ್ರಶೇಖರ್

ಸುಕೇಶ್‌ ಚಂದ್ರಶೇಖರ್‌ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್‌ ನಂಟೂ ಬಿಚ್ಚಿಟ್ಟಿದೆ. ಸುಕೇಶ್‌ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್‌ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ ಯಾರು? ಹಿನ್ನೆಲೆ ಏನು?

ಸುಕೇಶ್‌ ಮೂಲತಃ ಬೆಂಗಳೂರಿನವನು. ವಿಲಾಸಿ ಜೀವನದ ಅಭಿಲಾಷೆ ಹೊಂದಿದ್ದ ಈತ ತನ್ನ 17ನೇ ವಯಸ್ಸಿನಿಂದಲೇ ಸಿಕ್ಕಸಿಕ್ಕವರಿಗೆ ವಂಚನೆ ಎಸಗುತ್ತಾ ಬಂದಿದ್ದಾನೆ ಎಂದು ತನಿಖಾ ಮೂಲಗಳು ಹೇಳಿವೆ. ಆರಂಭದಲ್ಲಿ ಈತ ಬೆಂಗಳೂರಿನಲ್ಲಿ ಫೋರ್ಜರಿ ಮಾಡುತ್ತಿದ್ದ. ನಂತರ ಚೆನ್ನೈಗೆ ಸಾಗಿದ. ನಂತರ ಇತರ ಮೆಟ್ರೋ ಸಿಟಿಗಳಿಗೂ ಇವನ ವಂಚನೆಯ ಬಾಹುಗಳು ಚಾಚಿದವು. ಸುಮಾರು 15 ಎಫ್‌ಐಆರ್‌ಗಳು ಇವನ ವಿರುದ್ಧ ದಾಖಲಿಸಲಾಗಿವೆ. ಚೆನ್ನೈಯಲ್ಲಿ ಹತ್ತತ್ತಿರ ಒಂದು ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಂಗಲೆ ಹಾಗೂ ಒಂದು ಡಜನ್‌ ಐಷಾರಾಮಿ ಕಾರುಗಳನ್ನು ಇವನಿಂದ ಸೀಜ್ ಮಾಡಲಾಗಿದೆ.

ಸುಕೇಶ್‌ ಚಂದ್ರಶೇಖರ್‌ ಪತ್ನಿ ಲೀನಾ ಮಾರಿಯಾ ಪೌಲ್‌

ಇದಕ್ಕೂ ಮೊದಲು ಇವನು ತಿಹಾರ್‌ ಜೈಲಿನಲ್ಲಿದ್ದುಕೊಂಡೇ ತನ್ನ ಜಾಲದ ಮೂಲಕ ಸುಮಾರು 200 ಕೋಟಿ ರೂ. ಮೌಲ್ಯದ ವಂಚನೆ ಎಸಗಿದ ಪ್ರಕರಣಗಳು ಬಯಲಾಗಿವೆ. ಇವನಿಗೆ ಸಹಕರಿಸುತ್ತಿದ್ದ ಇವನ ಪತ್ನಿ ಲೀನಾ ಮಾರಿಯಾ ಪೌಲ್‌ ಸೇರಿದಂತೆ ಇತರ ಏಳು ಮಂದಿಯನ್ನೂ ಬಂಧಿಸಲಾಗಿದೆ. ರಾಜಕಾರಣಿಯಂತೆ ಪೋಸು ಕೊಟ್ಟು, ಕೆಲಸ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದಾನೆ.

ಇದನ್ನೂ ಓದಿ: Sukesh Chandrashekar : ಜೈಲಲ್ಲಿದ್ದುಕೊಂಡೇ ಜಾಕ್ವೆಲಿನ್‌ಗೆ ಚಿನ್ನ, ಬಂಗಾರವೆಂದು ಪ್ರೇಮ ಪತ್ರ ಬರೆದ ಸುಕೇಶ್‌!

2011ರಲ್ಲೇ ಕೆನರಾ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಇವನನ್ನೂ ಲೀನಾ ಮಾರಿಯಾಳನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಸುಕೇಶ್‌ ತನ್ನ ವಕ್ರಬುದ್ಧಿ ಬಿಟ್ಟಿರಲಿಲ್ಲ. ಇವನಿಂದ ಮೋಸ ಹೋದವರ ಪಟ್ಟಿಯಲ್ಲಿ ಪ್ರತಿಷ್ಠಿತ ಫೋರ್ಟಿಸ್‌ ಆಸ್ಪತ್ರೆಯ ಪ್ರಮೋಟರ್‌ ಶಿವಿಂದರ್‌ ಮೋಹನ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಕೂಡ ಇದ್ದಾರೆ. ಕತ್ರಿನಾ ಕೈಫ್‌ ಅವರನ್ನು ಪ್ರಮೋಷನ್‌ ಇವೆಂಟ್‌ಗೆ ಕರೆತರುತ್ತೇನೆಂದು ಹೇಳಿ ಕೊಚ್ಚಿಯ ಎಮಾನ್ಯುಯೆಲ್‌ ಸಿಲ್ಕ್ಸ್‌ನ ಎಂಡಿ ಬೈಜು ಅವರಿಗೂ ಕೈ ಎತ್ತಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version