Site icon Vistara News

High court observation : 5 ವರ್ಷ ಸಹಮತದ ಸಂಬಂಧ ಇಟ್ಕೊಂಡು ನಂತ್ರ ರೇಪ್‌ ಅಂದ್ರೆ ಆಗುತ್ತಾ?; ಹೈಕೋರ್ಟ್‌ ಪ್ರಶ್ನೆ

Twitter annot claim protection under article 19, Centre tells Karnataka HC

ಬೆಂಗಳೂರು: ಐದು ವರ್ಷಗಳ ಕಾಲ ಸಹಮತದ ಒಪ್ಪಿತ ಲೈಂಗಿಕ ಸಂಬಂಧ (Consensual sex) ಇಟ್ಟುಕೊಂಡು ಕೊನೆಗೆ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಅತ್ಯಾಚಾರ ಮಾಡಲಾಗಿದೆ ಎಂದು ದೂರಿದರೆ ಆಗುತ್ತಾ? ಅದು ಲೈಂಗಿಕ ದೌರ್ಜನ್ಯ ಎಂದು ಪರಿಗಣನೆ ಆಗುವುದಿಲ್ಲ: ಹೀಗೆಂದು ಕರ್ನಾಟಕ ಹೈಕೋರ್ಟ್‌ (High court observation) ಅಭಿಪ್ರಾಯಪಟ್ಟಿದೆ. ಯುವತಿಯೊಬ್ಬಳು ಐದು ವರ್ಷಗಳ ಕಾಲ ಬಾಯ್‌ ಫ್ರೆಂಡ್‌ ಆಗಿದ್ದ ಯುವಕನ ಮೇಲೆ ಮಾಡಿದ ಲೈಂಗಿಕ ದೌರ್ಜನ್ಯ ಆರೋಪಗಳಿಗೆ ಸಂಬಂಧಿಸಿದ ದಾವೆಯ ವಿಚಾರಣೆಯ ವೇಳೆ ಕೋರ್ಟ್‌ ಈ ಮಾತು ಹೇಳಿತು.

ಆರೋಪಿ ಮತ್ತು ಅರ್ಜಿದಾರರು ಪರಸ್ಪರ ಪ್ರೀತಿಸುತ್ತಿದ್ದರು. ಐದು ವರ್ಷಗಳ ಅವಧಿಯಲ್ಲಿ ಹಲವು ಬಾರಿ ಸಹಮತದ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಪರಿಗಣಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಅವರ ನಡುವಿನ ಸಂಬಂಧ ಸಹಮತದಿಂದ ಕೂಡಿತ್ತು. ದೈಹಿಕ ಸಂಬಂಧ ಹೊಂದುವಾಗ ಯಾವುದೇ ಬಲವಂತ ಇರಲಿಲ್ಲ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

ʻʻಈ ಪ್ರಕರಣದಲ್ಲಿ ಒಪ್ಪಿತ ಸೆಕ್ಸ್‌, ಸಹಮತದ ಸಂಪರ್ಕ ಎನ್ನುವುದು ಒಂದು ಬಾರಿ ನಡೆದಿರುವುದಲ್ಲ, ಎರಡು ಬಾರಿ, ಮೂರು ಬಾರಿಯೂ ಅಲ್ಲ, ಕೆಲವು ದಿನವೂ ಅಲ್ಲ, ತಿಂಗಳಷ್ಟೇ ಅಲ್ಲ, ಹಲವಾರು ವರ್ಷಗಳವರೆಗೆ, ನಿರ್ದಿಷ್ಟವಾಗಿ ಹೇಳಬೇಕು ಎಂದರೆ ಐದು ವರ್ಷಗಳ ಕಾಲ ನಡೆದಿತ್ತು. ಅವರೇ ದೂರಿನಲ್ಲಿ ಹೇಳಿಕೊಂಡಿರುವಂತೆ ಅವರಿಬ್ಬರೂ ಪ್ರೀತಿಸುತ್ತಿದ್ದರು. ಹೀಗಾಗಿ ಐದು ವರ್ಷಗಳ ಸುದೀರ್ಘಾವಧಿಯಲ್ಲಿ ಒಬ್ಬ ಮಹಿಳೆ ಒಬ್ಬ ವ್ಯಕ್ತಿಯ ಜತೆ ಸಂಬಂಧ ಹೊಂದಿದ್ದಾಳೆ ಎಂದರೆ ಅದು ಆಕೆಯ ಇಚ್ಛೆಗೆ ವಿರುದ್ಧವಾಗಿತ್ತು, ಆಕೆಯ ಒಪ್ಪಿಗೆ ಪಡೆದಿರಲಿಲ್ಲʼʼ ಎಂದು ಹೇಳಲಾಗದು ಎಂದು ನ್ಯಾಯಮೂರ್ತಿಗಳು ಹೇಳಿದರು. ಈ ಮೂಲಕ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದರು.

ಆರೋಪಿ ಹೇಳುವ ಪ್ರಕಾರ ಮತ್ತು ಅರ್ಜಿದಾರ ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಅವರಿಬ್ಬರೂ ಆರಂಭದಲ್ಲಿ ಗೆಳೆಯರಾಗಿದ್ದರು, ಬಳಿಕ ಅವರ ಸಂಬಂಧ ಒಂದು ಪ್ರೇಮ ವ್ಯವಹಾರವಾಯಿತು. ಅವರು ಐದು ವರ್ಷಗಳ ಕಾಲ ಪ್ರೀತಿಸಿದರು. ಜತೆಗೆ ಲೈಂಗಿಕ ಸಂಬಂಧವನ್ನೂ ಹೊಂದುತ್ತಿದ್ದರು. ಆದರೆ, ಜಾತಿಯ ಕಾರಣಕ್ಕೆ ಅವರಿಬ್ಬರ ನಡುವೆ ಮದುವೆ ಸಾಧ್ಯವಾಗಿರಲಿಲ್ಲ.

ಈ ನಡುವೆ ಯುವತಿ ಆತನ ಮೇಲೆ ಅತ್ಯಾಚಾರದ ಆರೋಪಗಳನ್ನು ಮಾಡಿದ್ದಳು. ಆಕೆಯ ಪ್ರಕಾರ, ನಮ್ಮ ನಡುವೆ ಸಮ್ಮತಿಯ ಸೆಕ್ಸ್‌ ಸಂಬಂಧ ಇದ್ದಿದ್ದು ನಿಜ. ಆದರೆ, ಮದುವೆಯಾಗುತ್ತೇನೆ ಎಂಬ ಭರವಸೆ ನೀಡಿ ಸಂಬಂಧವನ್ನು ಹೊಂದಲಾಗಿತ್ತು. ಮದುವೆಯಾಗದೆ ಇರುವುದರಿಂದ ಇದು ಅತ್ಯಾಚಾರವಾಗುತ್ತದೆ ಎನ್ನುವುದು ಆಕೆಯ ವಾದ.

ಆರೋಪಿಯು ಆರಂಭಿಕ ಹಂತದಲ್ಲಿ ಬಲವಂತವಾಗಿ ತನ್ನ ಜತೆ ಲೈಂಗಿಕ ಸಂಪರ್ಕ ಮಾಡಿದ್ದ ಎಂದು ಯುವತಿ ಆರೋಪಿಸಿದರಾದರೂ ಕೋರ್ಟ್‌ ಇದನ್ನು ಒಪ್ಪಲಿಲ್ಲ. ʻನಿಮ್ಮ ನಡುವಿನ ಲೈಂಗಿಕ ಸಂಬಂಧ ಸುದೀರ್ಘ ಐದು ವರ್ಷಗಳಷ್ಟು ಕಾಲ ನಡೆದಿದೆ. ಹಾಗಿರುವಾಗ ಇದನ್ನು ಸಮ್ಮತವಿಲ್ಲದ ಸೆಕ್ಸ್‌ ಎಂದು ಪರಿಗಣಿಸಲಾಗದುʼʼ ಎಂದು ಅದು ಹೇಳಿತು. ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಅದು ಒಪ್ಪಿತವಾಗಿದ್ದರೆ, ಸಹಮತದ್ದಾಗಿದ್ದರೆ ಐಪಿಸಿ ಸೆಕ್ಷನ್‌ 375ರ ಅಡಿಯಲ್ಲಿ ಅದು ಅತ್ಯಾಚಾರ ಎಂದು ಪರಿಗಣಿತವಾಗುವುದಿಲ್ಲ. ಸೆಕ್ಷನ್‌ 376ರ ಅಡಿಯಲ್ಲಿ ಶಿಕ್ಷಾರ್ಹವಾಗುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

ಈ ಅಂಶಗಳನ್ನು ಆಧರಿಸಿ ಕೋರ್ಟ್‌ ಆರೋಪಿತ ವ್ಯಕ್ತಿಯ ಮೇಲಿನ ಆರೋಪಪಟ್ಟಿಯನ್ನು ರದ್ದುಪಡಿಸಿತು ಮತ್ತು ಕ್ರಿಮಿನಲ್‌ ವಿಚಾರಣೆಯನ್ನು ಕೈಬಿಟ್ಟಿತು.

ಇದನ್ನೂ ಓದಿ : Harrassment : ಹಾಸನದ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಪ್ರಿನ್ಸಿಪಾಲ್‌ ಸೇರಿ ಐವರ ಸೆರೆ

Exit mobile version