Site icon Vistara News

MP Kumaraswamy: ನಾನು ದಲಿತನೆಂಬ ಕಾರಣಕ್ಕೆ ನನ್ನ ವಿರುದ್ಧ ಪಿತೂರಿ: ಎಂ.ಪಿ. ಕುಮಾರಸ್ವಾಮಿ ಕಣ್ಣೀರು

bjp karnataka Mudigere MLA visits bengaluru to complain about ct ravi

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ವಿರುದ್ಧ ಬಿಜೆಪಿ ಕಾರ್ಯಕರ್ತರು ತಿರುಗಿಬಿದ್ದು ಬೀದಿ ರಂಪಾಟ ಮಾಡಿದ್ದ ಪರಿಣಾಮ ಬೇಸರಗೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ವಿಜಯ ಸಂಕಲ್ಪ ರಥ ಯಾತ್ರೆಯನ್ನು ರದ್ದುಪಡಿಸಿ ತೆರಳಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಎಂ.ಪಿ. ಕುಮಾರಸ್ವಾಮಿ, ನಾನು ದಲಿತ ಎಂಬ ಕಾರಣಕ್ಕೆ ಕಾರ್ಯಕರ್ತರು ಹೀಗೆಲ್ಲ ಪಿತೂರಿ, ಗಲಾಟೆ ಮಾಡಿದ್ದಾರೆ. ಬೇರೆ ಸಮುದಾಯದ ಶಾಸಕರಾಗಿದ್ದರೆ ಹೀಗೆ ಮಾಡುತ್ತಿದ್ದರೇ ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಬಿಎಸ್‌ವೈ ಅವರಲ್ಲಿ ನಾನು ಈ ಗೊಂದಲಕ್ಕಾಗಿ ವಿಷಾದಿಸುತೇನೆ ಎಂದೂ ಹೇಳಿದ್ದಾರೆ.

ಮೂಡಿಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅದ್ಧೂರಿಯಾಗಿ ನಡೆದಿದೆ. ಕೆಲವರು ಬೇಕು ಎಂದೇ ಹೀಗೆ ಮಾಡಿದ್ದಾರೆ. ಅವರು 2000ನೇ ಇಸವಿಯಿಂದ ಇದ್ದವರೇ ಗಲಾಟೆ ಮಾಡಿದ್ದಾರೆ. 2013ರಲ್ಲಿ ನಾನು ಸ್ವಲ್ಪ ಮೈಮರೆತಿದ್ದಕ್ಕೆ 1000 ಮತಗಳಿಂದ ಸೋಲು ಕಾಣಬೇಕಾಯಿತು. ಆಗ ಇದ್ದವರೂ ಇವರೇ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಈ ಗಲಾಟೆ ಹಿನ್ನೆಲೆಯಲ್ಲಿ 100 ಮೀಟರ್ ದೂರಕ್ಕೆ ನನ್ನನ್ನು ಕರೆದೊಕೊಂಡು ಹೋಗಿ ಸಮಾಧಾನ ಹೇಳಿದ್ದಾರೆ. ಮೂಡಿಗೆರೆಗೆ ನೀನೇ ಅಭ್ಯರ್ಥಿ, ಗೆಲ್ಲೋದು ನೀನೆ ಎಂದು ಅಭಯ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Karnataka Elections : ಅಪಾಯದಲ್ಲಿರುವುದು ಸಂವಿಧಾನವಲ್ಲ, ಕಾಂಗ್ರೆಸ್‌ ಎಂದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ನಾನು ಪಕ್ಷಕ್ಕಾಗಿ ಹೋರಾಡುತ್ತೇನೆ. ನಾನು ಒಬ್ಬನೇ ಆಗಿದ್ದೇನೆ. ನನಗೆ ಹೆಂಡತಿ, ಮಕ್ಕಳು ಇಲ್ಲ. ಎಲ್ಲ ಚಾನೆಲ್ ಸರ್ವೆಗಳಲ್ಲೂ ಮೂಡಿಗೆರೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಇದೆ. ಅದಕ್ಕೇ ಸೋಲಿಸಬೇಕೆಂದು ಈ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಪಕ್ಷದ ಹುದ್ದೆಯಲ್ಲಿ ಇದ್ದವರು ಯಾರೂ ಇಲ್ಲ. ಎಲ್ಲರೂ ಮನೆಯಿಂದ ಬಂದವರು, ಅವರು ಪಕ್ಷದವರಲ್ಲ ಎಂದು ಎಂ.ಪಿ. ಕುಮಾರಸ್ವಾಮಿ ಆರೋಪಿಸಿದರು.

ರಥಯಾತ್ರೆಯನ್ನೇ ಮೊಟಕು ಮಾಡಿದ ಬಿ.ಎಸ್.‌ ಯಡಿಯೂರಪ್ಪ

ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ತಿರುಗಿಬಿದ್ದಿದ್ದು, ಗುರುವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಈ ಸಂದರ್ಭದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಸಮ್ಮುಖದಲ್ಲಿ ಹೈಡ್ರಾಮಾವನ್ನೇ ನಡೆಸಿದ್ದು, ಬೇಸತ್ತ ಬಿಎಸ್‌ವೈ ಯಾತ್ರೆಯನ್ನು ಮೊಟಕುಗೊಳಿಸಿ ಹೊರನಡೆದಿದ್ದಾರೆ.

ಮೂಡಿಗೆರೆ ಪಟ್ಟಣದ ಬಸ್ಟ್ಯಾಂಡ್ ವೃತ್ತದಲ್ಲಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಬೇಕಿತ್ತು. ಬಿಎಸ್‌ವೈ ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌ ಸಹ ಭಾಗಿಯಾಗಿದ್ದರು. ಆದರೆ, ಮೂಡಿಗೆರೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರ ಎರಡು ಬಣ ಪ್ರತಿಭಟನೆ ನಡೆಸಿವೆ. ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧವಾಗಿ ಒಂದು ಗುಂಪಿನವರು ನಿಂತುಕೊಂಡಿದ್ದು, ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ ನೀಡದಂತೆ ಕೂಗಾಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಪರವಾಗಿ ಇನ್ನೊಂದು ಗುಂಪಿನವರು ಗಲಾಟೆ ಮಾಡಿದ್ದು, ಅವರಿಗೇ ಟಿಕೆಟ್‌ ನೀಡಬೇಕು ಎಂದು ಪಟ್ಟುಹಿಡಿದಿದ್ದರು.

ಇದನ್ನೂ ಓದಿ: ನೇಕಾರ ಸಮುದಾಯಕ್ಕೆ 10 ಕ್ಷೇತ್ರದಲ್ಲಿ ಟಿಕೆಟ್‌ ಕೊಡಿ, ಇಲ್ಲದಿದ್ದರೆ ಪರಿಣಾಮ ಎದುರಿಸಿ; ಮೂರೂ ಪಕ್ಷಗಳಿಗೆ ಸ್ವಾಮೀಜಿಗಳ ಖಡಕ್‌ ಎಚ್ಚರಿಕೆ

ಹೊರ ನಡೆದ ಬಿಎಸ್‌ವೈ

ರೋಡ್‌ ಶೋ ನಡೆಸಲು ಬಿ.ಎಸ್.‌ ಯಡಿಯೂರಪ್ಪ ಆಗಮಿಸಿದ್ದರೆ, ಬಿಜೆಪಿ ಕಾರ್ಯಕರ್ತರ ಗಲಾಟೆಯೇ ಮುಗಿದಿರಲಿಲ್ಲ. ನೂರಾರು ಕಾರ್ಯಕರ್ತರಿಂದ ನಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದು, ಕುಮಾರಸ್ವಾಮಿ ಬೇಡವೇ ಬೇಡ ಎಂದು ಘೋಷಣೆ ಕೂಗಿದ್ದಾರೆ. ಹೊಸ ಮುಖಕ್ಕೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದ್ದು, 1000ಕ್ಕೂ ಅಧಿಕ ಜನರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರನ್ನು ಬೇರೆ ಕಡೆಗೆ ಪೊಲೀಸರು ಕರೆದೊಯ್ದರು. ಒಂದು ಹಂತದಲ್ಲಿ ಸಿ.ಟಿ. ರವಿ, ಎಂಎಲ್‌ಸಿ ಪ್ರಾಣೇಶ್ ಅವರನ್ನೇ ಕಾರ್ಯಕರ್ತರು ತಳ್ಳಿದ್ದಾರೆ.

ಆದರೆ, ರ‍್ಯಾಲಿ ನಡೆಸಲು ಕಾರ್ಯಕರ್ತರಿಗಾಗಿ ಬಿಎಸ್‌ವೈ ಬರೋಬ್ಬರಿ ಅರ್ಧ ಗಂಟೆ ರಸ್ತೆಯಲ್ಲಿ ಕಾದರೂ ಗಲಾಟೆ ನಿಲ್ಲಲಿಲ್ಲ. ಎರಡು ಗುಂಪುಗಳ ನಡುವೆ ತಳ್ಳಾಟ, ನೂಕಾಟ ನೋಡಿ ಅಸಮಾಧಾನಗೊಂಡ ಯಡಿಯೂರಪ್ಪ, ರೋಡ್‌ ಶೋವನ್ನು ರದ್ದುಗೊಳಿಸಿ ಹೆಲಿಪ್ಯಾಡ್‌ನತ್ತ ಹೊರಟರು.

ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು. ಈ ರೀತಿ ಮುಖಂಡರು ಬಂದಾಗ ಗಲಾಟೆ ಮಾಡುವುದು ಎಷ್ಟು ಸರಿ? ನೀವೆಲ್ಲರೂ ಸೇರಿ ಪಕ್ಷದ ಮರ್ಯಾದೆಯನ್ನು ಕಳೆಯುತ್ತಿದ್ದೀರ ಎಂದು ಸಿ.ಟಿ. ರವಿ ಕಿಡಿಕಾರಿದರು.

ಇದನ್ನೂ ಓದಿ: Karnataka Congress: ಕಾಂಗ್ರೆಸ್‌ಗೆ ಅಗ್ನಿಪರೀಕ್ಷೆಯ ಸಮಯ: ಸಮಾಧಾನ ಮಾಡಿದರೂ ಬಗೆಹರಿಯದ ಟಿಕೆಟ್‌ ಕಗ್ಗಂಟು

ಕುಮಾರಸ್ವಾಮಿ ಬೇಡವೆಂದು ಸಭೆ

ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ, ಬೇಡವೇ ಬೇಡ ಕುಮಾರಸ್ವಾಮಿ ಎಂಬ ಬ್ಯಾನರ್‌ ಅಡಿ ಮೂಡಿಗೆರೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ (ಮಾ. 16) ಬಿಜೆಪಿ ಕಾರ್ಯಕರ್ತರ ಒಂದು ಗುಂಪು ಸಭೆ ನಡೆಸಿದ್ದಾರೆ. ಹಾಲಿ ಶಾಸಕರನ್ನೇ ಹೊರಗಿಟ್ಟು ಸಭೆ ನಡೆಸಿದ್ದಾರೆ. ಬಿಜೆಪಿ ಶಲ್ಯ ಧರಸಿ ಸಭೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು, ಬಿಜೆಪಿ ಬಜಾವೋ, ಕುಮಾರಸ್ವಾಮಿ ಹಠಾವೋ ಎಂದು ಘೋಷಣೆ ಕೂಗಿದ್ದಾರೆ.

Exit mobile version