ಬಳ್ಳಾರಿ: ಹಿಂಡಲಗ ಜೈಲಿನಲ್ಲಿದ್ದ ಜಯೇಶ್ ಪೂಜಾರಿ ಅಲಿಯಾಸ್ ಶಾಹಿದ್ ಶೇಖ್ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಈ ವಿಚಾರ ನನಗೆ ಗೊತ್ತಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಜತೆಗೆ ಮಾತನಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದ್ದಾರೆ.
ಮನೆ ದೇವರ ಪೂಜೆಗಾಗಿ ಕುಟುಂಬ ಸದಸ್ಯರ ಜತೆಗೆ ಬಳ್ಳಾರಿಗೆ ಬಂದಿರುವ ಈಶ್ವರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದು, ನನ್ನ ಕೊಲೆಗೆ ಸ್ಕೆಚ್ ಹಾಕಿರುವ ಅಪಾಯಕಾರಿ ಸುದ್ದಿ ಕೇಳಿದೆ. ಜಯೇಶ್ ಪೂಜಾರಿ ನನ್ನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದಾನೆ ಎಂಬ ವಿಚಾರ ತಿಳಿದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇನೆ. ಈ ಆರೋಪಿಯ ಹಿಂದೆ ಪಿಎಫ್ಐನವರ ಬೆಂಬಲ ಇದೆ ಎಂದು ಕಿಡಿಕಾರಿದರು.
ಆದರೆ, ನಾನು ಹೆಚ್ಚಿನ ಭದ್ರತೆಗೆ ಯಾವುದೇ ಅರ್ಜಿಯನ್ನು ಹಾಕುವುದಿಲ್ಲ. ರಾಜ್ಯ ಸರ್ಕಾರ ನನಗೆ ಭದ್ರತೆ ಕೊಡಬಹುದು. ಹಿಂದೆಯೂ ಕೊಲೆ ಬೆದರಿಕೆ ಕರೆ ಬಂದಿತ್ತು. ಈ ವಿಚಾರವನ್ನು ನಾನು ಅಧಿವೇಶನದಲ್ಲಿಯೇ ಹೇಳಿದ್ದೆ. ಆಗ ಕಾಂಗ್ರೆಸ್ ಸರ್ಕಾರವಿತ್ತು, ನನಗೆ ಭದ್ರತೆ ನೀಡಿದ್ದರು. ಈಗ ನನ್ನ ಕೊಲೆಗೆ ಸ್ಕೆಚ್ ಹಾಕಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಯಾವುದೇ ಬೆದರಿಕೆಗೂ ಬಗ್ಗಲ್ಲ. ಹಿಂದುತ್ವ ವಾದಿಗಳಿಗೆ ಬೆದರಿಕೆ ಸಾಮಾನ್ಯ. ಯಾವಾಗಲೂ ಇದನ್ನು ಎದುರಿಸುತ್ತೇವೆ. ಇದಕ್ಕೆ ನನ್ನ ನಿಲುವು ಬದಲಾಯಿಸಲ್ಲ. ಪೊಲೀಸರು ನನಗೆ ನೀಡಿದ ಮಾಹಿತಿಯನ್ನು ಮಾಧ್ಯಮಗಳ ಜತೆಗೆ ಹಂಚಿಕೊಂಡಿದ್ದೇನೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ನನಗೆ ಕರೆ ಮಾಡಿ ಚುನಾವಣಾ ರಾಜಕೀಯ ಬೇಡ ಎಂದು ಹೇಳಿದ್ದರು. ಪಕ್ಷದ ಶಿಸ್ತಿನ ಸಿಪಾಯಿಯಂತೆ ಅವರು ಹೇಳಿದಂತೆ ಚುನಾವಣಾ ನಿವೃತ್ತಿ ಪತ್ರ ಬರೆದು ಕಳುಹಿಸಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲಾಬಿ ವಿಚಾರ ನನಗೆ ಸಂಬಂಧ ಇಲ್ಲ. ನಾನಂತೂ ಪಕ್ಷ ಹೇಳಿದಂತೆ ಕೇಳುತ್ತೇನೆ. ಕಾಲಕಾಲಕ್ಕೆ ಪಕ್ಷ ಹೇಳಿದಂತೆ ಕೇಳಿಕೊಂಡು ಬಂದಿದ್ದೇನೆ. ಮಗನಿಗೆ ಟಿಕೆಟ್ ಕೊಟ್ಟರೆ ಸಂತೋಷ. ಬೂತ್ ಮಟ್ಟದ ಕಾರ್ಯಕರ್ತನಿಂದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಇದೀಗ ಪಕ್ಷದ ಕೆಲಸ ಮಾಡು ಎಂದಿದ್ದಾರೆ, ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬರಲು ಯಾವ ಕೆಲಸ ಮಾಡುವುದಕ್ಕೂ ಸಿದ್ಧ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ರೌಡಿಶೀಟರ್‌ಗೆ ಚಿತ್ತಾಪುರ ಬಿಜೆಪಿ ಟಿಕೆಟ್; ರೌಡಿ ರಾಜ್ಯ ಬೇಕಾ ಎಂದ ನೆಟ್ಟಿಗರು
ಆಕಾಂಕ್ಷಿಗಳು ಹೆಚ್ಚಾಗಿರುವುದನ್ನು ನೋಡಿದರೆ ಪಕ್ಷ ಬೆಳೆದಿರುವುದು ಗೊತ್ತಾಗುತ್ತದೆ. ಟಿಕೆಟ್‌ಗಾಗಿ ಇದೀಗ ಹಠಕ್ಕೆ ಬಿದ್ದಿದ್ದಾರೆ. ಹಿಂದೆ ಪಕ್ಷಕ್ಕೆ ಅಭ್ಯರ್ಥಿಗಳೇ ಇರಲಿಲ್ಲ. ರಾಷ್ಟ್ರೀಯ ನಾಯಕರು ಯೋಚನೆ ಮಾಡಿ ತೀರ್ಮಾನ ಮಾಡಿದ್ದಾರೆ. ಬಿಜೆಪಿ ಬಿಟ್ಟು ಹೋಗುತ್ತಾರೆ ಅಂದರೆ ಅವರು ಬಿಜೆಪಿ ಪಕ್ಷಕ್ಕೆ ಯೋಗ್ಯರಲ್ಲ ಎಂದು ಈಶ್ವರಪ್ಪ ಹೇಳುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ತಿವಿದರು.
ಯಾರಿವನು ಜಯೇಶ್ ಪೂಜಾರಿ?
ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್‌ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಕೊಲೆ ಕೇಸ್‌ವೊಂದರಲ್ಲಿ ಜೈಲು ಸೇರಿದ್ದಾನೆ. ಈತ ಜನವರಿ ಹಾಗೂ ಈಚೆಗೆ ಎರಡು ಬಾರಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಮಾರ್ಚ್ 29ರಂದು ಜಯೇಶ್‌ನನ್ನು ಮಹಾರಾಷ್ಟ್ರ ಪೊಲೀಸರು ನಾಗಪುರಕ್ಕೆ ಕರೆದೊಯ್ದಿದ್ದರು.