ಬೆಂಗಳೂರು: ವಿದ್ಯುತ್ ದರ ಏರಿಕೆಯ (Power tariff hike) ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದ್ದು, ಹಲವು ಕಡೆ ಪ್ರತಿಭಟನೆಗಳು ನಡೆದಿವೆ. ಈ ನಡುವೆ, ಜೂನ್ 22ರಂದು ರಾಜ್ಯದ ಹಲವೆಡೆ ವಾಣಿಜ್ಯ ಸಂಘಟನೆಗಳು ಬಂದ್‌ಗೆ (trade bundh) ಕರೆ ನೀಡಿವೆ.
ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ (Free electricity) ನೀಡುವುದಾಗಿ ಪ್ರಕಟಿಸಿದ್ದು, ಅದರ ನೋಂದಣಿ ಕಾರ್ಯ ನಡೆಯುತ್ತಿದೆ. ಅದರಲ್ಲಿನ ಕೆಲವೊಂದು ನ್ಯೂನತೆಗಳು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ವಿದ್ಯುತ್ ದರ ಏರಿಕೆಯ ಬರೆಯ ವಿರುದ್ಧ ಅವರು ಸಿಡಿದೆದಿದ್ದಾರೆ.
ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಮಂಡಳಿಯ ಪ್ರಸ್ತಾಪದಂತೆ ಕಳೆದ ಏಪ್ರಿಲ್‌ನಿಂದಲೇ ಅನ್ವಯವಾಗುವಂತೆ ವಿದ್ಯುತ್ ದರವನ್ನು ಏರಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಒಂದು ತಿಂಗಳ ಪೂರ್ವಾನ್ವಯ ಬಾಕಿಯನ್ನೂ ಸೇರಿಸಿ ಬಿಲ್ ಹಾಕಲಾಗಿದೆ. ಕೆಲವೊಂದು ಮನೆಗಳಿಗೆ ದುಪ್ಪಟ್ಟು ಬಿಲ್ ಬಂದಿದೆ. ಕೆಲವರ ಬಿಲ್‌ನಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಇದು ಜನರಲ್ಲಿ ಆಕ್ರೋಶ ಮೂಡಿಸಿದೆ. ಸರಕಾರ ಒಂದು ಕಡೆ ಉಚಿತದ ಹೆಸರು ಹೇಳುತ್ತಾ ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದೆ ಎಂಬ ಆರೋಪವನ್ನು ಅವರು ಮಾಡುತ್ತಿದ್ದಾರೆ.
ರಾಮನಗರದಲ್ಲೂ ಪ್ರತಿಭಟನೆ
ರಾಜ್ಯಾದ್ಯಂತ ಮಹಿಳೆಯರು ಬಿಲ್ ಪ್ರದರ್ಶನ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲೂ ಪ್ರತಿಭಟನೆಯ ಕಿಚ್ಚೆತ್ತಿದೆ.
ವಿವಿಧ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಕನಕಪುರದ ಚನ್ನಬಸಪ್ಪ ಸರ್ಕಲ್ ನಿಂದ ಬೆಸ್ಕಾಂ ಕಚೇರಿವರೆಗೂ ಮೆರವಣಿಗೆ ನಡೆಸಿದವು. ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು
ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಧಾರವಾಡದಲ್ಲಿ ನಾಳೆ ಬಂದ್; ವ್ಯಾಪಾರಿಗಳ ಬೆಂಬಲ
ವಿದ್ಯುತ್ ದರ ಏರಿಕೆ ವಿರುದ್ಧ ಧಾರವಾಡದಲ್ಲಿ ವಾಣಿಜ್ಯೋದ್ಯಮ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ವ್ಯಾಪಾರಿಗಳು ಬೆಂಬಲ ಘೋಷಿಸಿದ್ದಾರೆ. ಧಾರವಾಡದಲ್ಲಿ ಬಹುತೇಕ ಎಲ್ಲ ವಲಯಗಳಿಂದ ಬಂದ್‌ಗೆ ಬೆಂಬಲ ದೊರೆತಿದ್ದು, ಕಿರಾಣಿ ವರ್ತಕರು, ಎಪಿಎಂಸಿ, ಬಟ್ಟೆ ವ್ಯಾಪಾರ, ಸ್ಟೇಷನರಿ, ಹೊಟೇಲ್, ಬೇಕರಿ, ಹಾರ್ಡವೇರ್ ವ್ಯಾಪಾರಿಗಳ ಸಂಘಗಳು ಬೆಂಬಲಿಸಿವೆ.
ಬೇಲೂರು ಕೈಗಾರಿಕಾ ಪ್ರದೇಶದ ಎಲ್ಲ ಉದ್ಯಮಗಳು ಬಂದ್ ಆಗಲಿದ್ದು, ಪೇಟೆಯಲ್ಲಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕೆಸಿಸಿ ಬ್ಯಾಂಕ್ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ.
ಹುಬ್ಬಳ್ಳಿ ವಾಣಿಜ್ಯೋದ್ಯಮ ನೀಡಿದ ಬಂದ್ ಕರೆಗೆ ವಿಜಯನಗರ ವಾಣಿಜ್ಯ, ಕೈಗಾರಿಕಾ ಸಂಘ ಬೆಂಬಲ ಘೋಷಿಸಿದ್ದು, ತುರ್ತು ಸೇವೆ ಬಿಟ್ಟು ಎಲ್ಲಾ ಅಂಗಡಿಗಳು, ಉದ್ಯಮಗಳು ಬಂದ್ ಆಗಲಿವೆ. ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಎಲ್ಲಾ ಚಟುವಟಿಕೆ ಬಂದ್ ಆಗಮಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಅಶ್ವಿನ್ ಕೋತಂಬ್ರಿ ಹೇಳಿಕೆ ನೀಡಿದ್ದಾರೆ.
ಎಫ್‌ಕೆಸಿಸಿಐನಿಂದ ಬಂದ್ ಕರೆ ಇಲ್ಲ
ಈ ನಡುವೆ, ವಿದ್ಯುತ್ ಏರಿಕೆ ಪ್ರತಿಭಟಿಸಿ ಬೆಂಗಳೂರಿನ ಎಫ್‌ಕೆಸಿಸಿಐ ಜೂನ್ 22ರಂದು ಈ ಹಿಂದೆ ಕರೆ ನೀಡಿತ್ತು. ಆದರೆ, ಬಳಿಕ ಶಾಂತಿಯುತ ಪ್ರತಿಭಟನೆಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿ ಬಂದ್ ಕರೆಯನ್ನು ಹಿಂದಕ್ಕೆ ಪಡೆದಿತ್ತು. ಎಂಎಸ್ಎಂಇ ಕೌನ್ಸಿಲ್ ನಿಂದಲೂ ಪ್ರತಿಭಟನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್: ಏನಿದು ಸರ್ಕಾರದ 53 ಯುನಿಟ್ ಸೂತ್ರ?