Site icon Vistara News

ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ; ಉಡುಪಿಯಲ್ಲಿ ಸಂತೋಷ್‌ ಸಾವು

ಉಡುಪಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (RDPR) ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಲಂಚ ಬೇಡಿಕೆ ಆರೋಪ ಮಾಡಿದ್ದ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರ ಸಂತೋಷ ಕೆ. ಪಾಟೀಲ್‌ (37) ಉಡುಪಿಯ ಖಾಸಗಿ ಲಾಡ್ಜ್‌ ಒಂದರಲ್ಲಿ ಡೆತ್‌ನೋಟ್‌ ಬರೆದಿಟ್ಟು ಮಂಗಳವಾರ ಆತ್ಮಹತ್ಯೆ (Santosh suicide) ಮಾಡಿಕೊಂಡಿದ್ದಾರೆ. ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ತಮ್ಮ ಸಾವಿಗೆ ಸಚಿವ ಈಶ್ವರಪ್ಪ ನೇರ ಕಾರಣವೆಂದು ವಿವಿಧ ಮಾಧ್ಯಮ ಪ್ರತಿನಿಧೀಗಳಿಗೆ ಸಂತೋಷ್‌ ಕಳುಹಿಸಿದ whatsapp ಮೆಸೇಜ್‌ ಲಭ್ಯವಾಗಿದೆ.

ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್.‌ ಈಶ್ವರಪ್ಪ ರಸ್ತೆ ಕಾಮಗಾರಿಗಳ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಸಂತೋಷ್ ಪಾಟೀಲ್‌ 15 ದಿನದ ಹಿಂದಷ್ಟೆ ಆರೋಪ ಮಾಡಿದ್ದರು. ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದಾಗ ಸಚಿವರ ಆಪ್ತರು 40% ಕಮಿಷನ್‌ ಕೇಳುತ್ತಿದ್ದಾರೆ ಎಂದು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ (bribe allegations) ಮಾಡಿ ಪ್ರಧಾನಿ ಮೋದಿ ಹಾಗೂ ಇನ್ನಿತರೆ ಬಿಜೆಪಿ ವರಿಷ್ಠರಿಗೂ ಪತ್ರ ಬರೆದಿದ್ದರು. ಸಚಿವ ಈಶ್ವರಪ್ಪ ವಿರುದ್ಧ ಈ ರೀತಿಯ ಆರೋಪ ಬಂದಿದ್ದು ಹಾಗೂ ಸಂತೋಷ್‌ ಆತ್ಮಹತ್ಯೆಯ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.

ಈ ಬೆನ್ನಲ್ಲೇ ಮಾತನಾಡಿದ ಸಚಿವ ಈಶ್ವರಪ್ಪ ʼನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನಗೆ ಸಂತೋಷ್‌ ಪರಿಚಯವೂ ಇಲ್ಲ. ಹಾಗಾಗಿ ಕಾನೂನು ಹೋರಾಟಕ್ಕೆ ನಾನು ಸಿದ್ಧನಿದ್ದೇನೆʼ ಎಂದು ಈ ಆರೋಪವನ್ನು ನಿರಾಕರಿಸಿದ್ದಾರೆ.

ವಿವಿಧೆಡೆ ಪ್ರತಿಭಟನೆಗಳು

ರಾಜ್ಯದೆಲ್ಲೆಡೆ ಈ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಸಚಿವ ಈಶ್ವರಪ್ಪ ತಮ್ಮ ಸ್ಥಾನದಿಂದ ರಾಜಿನಾಮೆ ನೀಡಬೇಕು ಎಂದು ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ನೂರಕ್ಕೂ ಅಧಿಕ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಚಿವ ಈಶ್ವರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದರು. ಗುತ್ತಿಗೆದಾರ ಸಂತೋಷ್‌ ಪಾಟೀಲ್ ಆತ್ಮಹತ್ಯೆಗೆ ಕಾರಣವಾಗಿರುವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಈಶ್ವರಪ್ಪ ಅವರ ಮನೆಗೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು‌ ವಶಕ್ಕೆ ಪಡೆದರು. ಸಂತೋಷ್‌ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಉಡುಪಿಯ ಎಸ್‌ಡಿಪಿಐ ನೇತೃತ್ವದಲ್ಲಿ ಅಜ್ಜರಕಾಡು ಸೈನಿಕರ ಸ್ಮಾರಕದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪಾರದರ್ಶಕ ತನಿಖೆ ಎಂದ ಸಿಎಂ ಬೊಮ್ಮಾಯಿ

ಪ್ರಕರಣದ ಕುರಿತ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʼಸಂತೋಷ್‌ ಪಾಟೀಲ್‌ ಆತ್ಮಹತ್ಯೆಯ ಪ್ರಕರಣವನ್ನು ಯಾವುದೇ ಹಸ್ತಕ್ಷೇಪ ಇಲ್ಲದೆ ಪಾರದರ್ಶಕವಾಗಿ ತನಿಖೆ ನಡೆಸುವಂತೆ ಪೋಲಿಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆʼ ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹಸಚಿವ ಆರಗ ಜ್ಞಾನೇಂದ್ರ ʼಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಉಡುಪಿಯ ಎಸ್‌ಪಿ ಜೊತೆ ಸಂಪರ್ಕದಲ್ಲಿದ್ದೇನೆ. ಕಮಿಷನ್ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಸ್ಪಷ್ಟ ಕಾರಣ ಇಲ್ಲ. ಕಾಂಗ್ರೆಸ್‌ ಮುಖಂಡರು ಸೇರಿದಂತೆ ಪ್ರತಿಪಕ್ಷಗಳ ಕಾರ್ಯಕರ್ತರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ತನಿಖೆ ನಡೆದ ನಂತರವಷ್ಟೇ ಸತ್ಯಾಂಶ ತಿಳಿದು ಬರಲಿದೆʼ ಎಂದು ಹೇಳಿದ್ದಾರೆ.

ಸಂತೋಷ್‌ ಪಾಟೀಲ್‌ ಆರೋಪಗಳೇನು?

  1. ಸಚಿವ ಈಶ್ವರಪ್ಪ ಹಳಿದಂತೆ ರಸ್ತೆ ಕಾಮಗಾರಿ ಮುಗಿಸಿದ್ದರೂ ಯಾವುದೇ ಹಣ ನೀಡಲಾಗಿಲ್ಲ.
  2. 108 ಕಾಮಗಾರಿಗಳಾಗಿದ್ದು, ₹4 ಕೋಟಿಗಳಷ್ಟು ಮೊತ್ತ ಬರಬೇಕಿತ್ತು. ಆದರೆ ಕಾಮಗಾರಿ ಮುಗಿದು 1 ವರ್ಷವಾದರೂ ಯಾವುದೇ ಆದೇಶ ಬಂದಿಲ್ಲ ಹಾಗೂ ಬಾಕಿ ಹಣ ಪಾವತಿಯಾಗಿಲ್ಲ.
  3. ಹಣ ಪಾವತಿ ಮಾಡಲು ಸಚಿವರ ಬಳಿ ಹೋದರೆ ಅವರ ಆಪ್ತರು ಕಾಮಗಾರಿ ಮೊತ್ತದ 40% ಲಂಚ ಕೇಳುತ್ತಿದ್ದರು.
  4. ಈ ಹಿಂದೆಯೇ ವಿಡಿಯೋ ಮೂಲಕ ವಿಚಾರವನ್ನು ಹಂಚಿಕೊಳ್ಳಲಾಗಿತ್ತು ಹಾಗೂ ಈ ಕುರಿತು ಮೋದಿಯವರಿಗೆ ದೂರು ನೀಡಲಾಗಿತ್ತು. ಆದರೂ ಯಾವುದೇ ಸ್ಪಂದನೆ ಇರಲಿಲ್ಲ.

ಹೆಚ್ಚಿನ ಓದಿಗಾಗಿ: ಶೌಚಾಲಯ ಕಟ್ಟಿಸಿದರೂ ಕೆಲವರಿಗೆ ತಂಬಿಗೆ ಹಿಡಿದರೇ ಆನಂದ: ಸಚಿವ ಈಶ್ವರಪ್ಪ

Exit mobile version