ಬೆಂಗಳೂರು: ರಾಜ್ಯದ ವಿವಿಧ ಯೋಜನೆಗಳಿಗೆ ಗುತ್ತಿಗೆ ನೀಡುವಾಗ 40% ಕಮಿಷನ್ ಪಡೆಯಲಾಗುತ್ತಿದೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿವಿಧ ಇಲಾಖೆಗಳಿಗೆ ಪತ್ರ ಬರೆದಿದ್ದ ರಾಜ್ಯ ಗುತ್ತಿಗೆದಾರರ ಸಂಘ ಇದೀಗ ಎರಡನೇ ಹಂತದ ಪತ್ರ ಚಳವಳಿಗೆ ಮುಂದಾಗಿದೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಸದಸ್ಯರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ತಮ್ಮ ಮನವಿಗೆ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ಕುರಿತು ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಒಂದು ವರ್ಷ ೨ ತಿಂಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸಿಎಂ ಮಾತಿಗೂ ಇಲ್ಲಿ ಬೆಲೆ ಇಲ್ಲದಂತಾಗಿದೆ. ಮಾನ ಮರ್ಯಾದೆ ಇಲ್ಲದ ಪ್ರತಿನಿಧಿಗಳು ಇವರು ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಂಪಣ್ಣ, ಪ್ರಧಾನಿ ಮೋದಿಯವರಿಗೆ 15 ದಿನದಲ್ಲಿ ಇನ್ನೊಂದು ಪತ್ರ ಬರೆಯುತ್ತಿದ್ದೇನೆ. ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ಸ್ವತಂತ್ರ ದಿನಾಚರಣೆಯಂದು ಪ್ರಧಾನಿ ಹೇಳಿದ್ದಾರೆ. ಹಾಗಾಗಿ ಮತ್ತೊಂದು ಪತ್ರ ಬರೆಯುತ್ತೇನೆ ಎಂದರು.
ಇದನ್ನೂ ಓದಿ | ಬಿಜೆಪಿ ಮಂತ್ರಿಗಳು ಹಣ ಮಾಡುವುದರಲ್ಲಿ ಬ್ಯುಸಿ, ಇದು 40% ಸರ್ಕಾರ: ವೇಣುಗೋಪಾಲ್ ಕಿಡಿ
ಸಿದ್ದರಾಮಯ್ಯ ಅವರಿಗೆ ಯಾವುದೇ ದಾಖಲೆಯನ್ನೂ ಕೊಟ್ಟಿಲ್ಲ ಎಂದ ಕೆಂಪಣ್ಣ, ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ದಾಖಲೆ ಕೊಡುತ್ತೇವೆ. ಈಗಲೇ ದಾಖಲೆಯನ್ನು ಬಹಿರಂಗಪಡಿಸಿದರೆ ಗುತ್ತಿಗೆದಾರರಿಗೆ ತೊಂದರೆ ಆಗುತ್ತದೆ. ಸಿದ್ದರಾಮಯ್ಯ ಅವರಿಗೆ ಒಟ್ಟಾರೆ ಮಾಹಿತಿ ನೀಡಿದ್ದೇವೆ, ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದಿದ್ದಾರೆ ಎಂದು ಕೆಂಪಣ್ಣ ಹೇಳಿದರು.
ಸಿ.ಸಿ. ಪಾಟೀಲ್ ವಿರುದ್ಧ ನೇರ ಆರೋಪ
ಕರ್ನಾಟಕದಲ್ಲಿ ಎಲ್ಲ ಎಂಎಲ್‌ಎಗಳು, ಸಚಿವರು ಕರಪ್ಷನ್‌ನಲ್ಲಿ ನಂಬರ್ ಒನ್ ಇದಾರೆ ಎಂದ ಕೆಂಪಣ್ಣ, ಯಾರಿಗೂ ರ‍್ಯಾಂಕಿಂಗ್ ನೀಡಲು ಆಗುವುದಿಲ್ಲ. ನಮಗೆ ವರದಿ ಬಂದ ಪ್ರಕಾರ, ಕೊಲಾರ ಉಸ್ತುವಾರಿ ಸಚಿವ ಮುನಿರತ್ನ ಅವರು, ಕಮಿಷನ್ ಕಲೆಕ್ಟ್ ಮಾಡಿ ಕೊಡದಿದ್ದರೆ ಎಕ್ಸಿಕ್ಯುಟಿವ್ ಇಂಜಿನಿಯರ್‌ಗಳನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಕೆಲವು ಸಚಿವರು ನಮ್ಮ ಸಂಘವನ್ನು ಒಡೆಯುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಪಿಡಬ್ಲುಡಿ ಸಚಿವರು ನಮ್ಮ ರಾಜ್ಯವನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್ ವಿರುದ್ಧ ನೇರ ಆರೋಪ ಮಾಡಿದರು. ಇನ್ನೂ 22 ಸಾವಿರ ಕೋಟಿ ರೂ. ಬಿಲ್ ಪೆಂಡಿಂಗ್ ಇದೆ. ಕೆಲವರದ್ದು ಮೂರು ವರ್ಷಗಳಿಂದ ಬಾಕಿ ಇದೆ. ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | 40% ಕಮಿಷನ್ ತನಿಖೆ ಹಿಂದೆ ಷಡ್ಯಂತ್ರ : ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪ