ರಾಮನಗರ: ಜಿಲ್ಲೆಯ ಕನಕಪುರ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಮತಾಂತರ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸುಮಾರು ೧೫ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಮನೆಯೊಂದರಲ್ಲಿ ಈ ಕೆಲಸ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಕನಕಪುರ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದರು.
ಬಡವರು ಮತ್ತು ಅಮಾಯಕರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಜಾಲ ಇಲ್ಲಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಪೊಲೀಸರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರು ನೀಡಿದ್ದರು. ಮನೆಯಲ್ಲೇ ಇದ್ದುಕೊಂಡು ಮತಾಂತರ ನಡೆಯುತ್ತಿತ್ತು ಎನ್ನಲಾಗಿದೆ. ದಾಳಿ ಮಾಡಿದ ಪೊಲೀಸರ ಕೈಗೆ ಒಂದೇ ಕುಟುಂಬದ ಐವರು ಮತ್ತು ಇತರ ೧೨ ಮಂದಿ ಸೆರೆ ಸಿಕ್ಕಿದ್ದಾರೆ. ಇದರಲ್ಲಿ ಮತಾಂತರಕ್ಕೆ ಒಳಗಾದವರು ಕೂಡಾ ಇದ್ದರು ಎನ್ನಲಾಗಿದೆ.
ವಶದಲ್ಲಿರುವ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದಾದ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.
ಮನೆಯಲ್ಲಿದ್ದವರು ಬಂಧುಗಳಾ?
ಪೊಲೀಸರ ದಾಳಿಯ ವೇಳೆ ಸಂಬಂಧವೇ ಇಲ್ಲದ ಹಲವರು ಮನೆಯಲ್ಲಿದ್ದರು. ಅವರೆಲ್ಲರನ್ನೂ ಮತಾಂತರಕ್ಕಾಗಿ ಅಲ್ಲಿಗೆ ತರಲಾಗಿತ್ತು ಎನ್ನುವುದು ಹಿಂದೂ ಕಾರ್ಯಕರ್ತರ ಆರೋಪ. ಆದರೆ, ಮನೆಯವರು ಇವರು ನಮ್ಮ ಬಂಧುಗಳು. ಆ ಕಾರಣಕ್ಕಾಗಿ ಮನೆಯಲ್ಲಿ ಬಂದು ಇದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇದರ ನಿಜವಾದ ಸತ್ಯಾಸತ್ಯತೆಯನ್ನು ಪೊಲೀಸರು ಬಯಲಿಗೆಳೆಯಬೇಕಾಗಿದೆ.
ಕನಕಪುರ ಭಾಗದಲ್ಲಿ ಮತಾಂತರದ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಅದರ ಒಂದು ಭಾಗವೇ ಇದೆಂದು ಹೇಳಲಾಗುತ್ತಿದೆ.