ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಎಣಿಯುತ್ತಿವೆ. ಸಭೆ-ಸಮಾರಂಭ, ಹಬ್ಬ-ಹರಿದಿನಗಳನ್ನು ಬಳಸಿಕೊಂಡು ಗಿಫ್ಟ್ ಹಂಚುತ್ತಾ ಪ್ರಚಾರವನ್ನು ಆರಂಭಿಸಿವೆ. ಅದರಲ್ಲೂ ಮುಖ್ಯವಾಗಿ ಸ್ತ್ರೀ ಶಕ್ತಿಯನ್ನು ಸೆಳೆಯಲು ಕುಕ್ಕರ್ ಪಾಲಿಟಿಕ್ಸ್ (Cooker Politics) ಮುಂದುವರಿದಿದೆ.
ಮತದಾರರ ಮನೆ ಮನೆಗೆ ಕುಕ್ಕರ್ ತಲುಪಿಸಲು ಕ್ಷೇತ್ರದ ಅಭ್ಯರ್ಥಿಗಳ ಪೈಪೋಟಿ ಜೋರಾಗಿದೆ. ಅದರಲ್ಲೂ ಕಾಂಗ್ರೆಸ್‌ನ ಭದ್ರಕೋಟೆ ಬಿಟಿಎಂ ಲೇಔಟ್‌ನಲ್ಲಿ ಕುಕ್ಕರ್ ಪಾಲಿಟಿಕ್ಸ್ ಹೇಗಿದೆ ಎಂದರೆ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದ ಕುಕ್ಕರ್ ಅನ್ನು ಎದುರಾಳಿ ಅನಿಲ್ ಶೆಟ್ಟಿ ಕಿತ್ತೆಸೆದು, ತಾನೇ ಹೊಸ ಕುಕ್ಕರ್ ಕೊಟ್ಟಿದ್ದಾರೆ.
ಶಾಸಕ ರಾಮಲಿಂಗಾರೆಡ್ಡಿ ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ವಿತರಣೆ ಮಾಡಿದ್ದರು. ಆದರೆ, ಅದು ಕಳಪೆಯಾಗಿದೆ. ಅದನ್ನು ಸ್ಟವ್ ಮೇಲೆ ಇಟ್ಟರೆ ಸಿಡಿದು ಹೋದೀತು ಎಂದು ಹೇಳಿರು ಬಿಟಿಎಂ ಲೇಔಟ್‌ನ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ಅವರು, ರಾಮಲಿಂಗಾರೆಡ್ಡಿ ಅವರು ಕೊಟ್ಟ ಕುಕ್ಕರ್ ಎಸೆದು ಹೊಸ ಬ್ರಾಂಡೆಡ್ ಕುಕ್ಕರ್ ವಿತರಣೆ ಮಾಡಿದ್ದಾರೆ. ಬ್ರಾಂಡೆಡ್ ಕುಕ್ಕರ್ ನೀಡುವ ಮೂಲಕ ಅನಿಲ್ ಶೆಟ್ಟಿ ಬಿಟಿಎಂ ಲೇಔಟ್ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ: Congress Plenary Session: ಕಾಂಗ್ರೆಸ್ ಸರ್ವ ಸದಸ್ಯರ ಸಮಾವೇಶ ಇಂದಿನಿಂದ ರಾಯ್ಪುರದಲ್ಲಿ ಪ್ರಾರಂಭ
ಬಿಟಿಎಂ ಲೇಔಟ್ ಕ್ಷೇತ್ರದ ಜನರನ್ನು ಒಂದೆಡೆ ಸೇರಿಸಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ, ರಾಮಲಿಂಗಾರೆಡ್ಡಿ ನೀಡಿದ ಕುಕ್ಕರ್ ಕಸಿದು ಎಸೆದಿರುವ ದೃಶ್ಯಗಳು ವೈರಲ್ ಆಗಿವೆ. ನಂತರ ಜನರಿಗೆ ಬ್ರಾಂಡೆಡ್ ಕುಕ್ಕುರ್ ವಿತರಣೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಭದ್ರಕೋಟೆ ಆಗಿರುವ ಬಿಟಿಎಂ ಲೇಔಟ್ ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವೇ ಈ ಕುಕ್ಕರ್ ಪಾಲಿಟಿಕ್ಸ್ ಎನ್ನಲಾಗಿದೆ. ಈ ಕುಕ್ಕರ್‌ಗಳನ್ನು ತಾನು ತನ್ನ ದುಡಿಮೆ ಹಣದಿಂದ ನೀಡುತ್ತಿರುವುದಾಗಿ ಅನಿಲ್ ಶೆಟ್ಟಿ ಹೇಳಿಕೊಂಡಿದ್ದಾರೆ.
ರಾಜಕೀಯ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ