ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಆತಂಕ ಶುರುವಾಗಿದ್ದು, ನಾಲ್ಕು ಜಿಲ್ಲೆಗಳಿಗೆ ಕೊರೋನಾ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಕಲಬುರಗಿ, ಮೈಸೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಹೆಚ್ಚಿನ ಎಚ್ಚರ ವಹಿಸಲು ಸೂಚಿಸಲಾಗಿದೆ.
ಈ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕಳೆದ 5 ತಿಂಗಳಿಂದ ನಿಯಂತ್ರಣದಲ್ಲಿದ್ದ ಕೊರೊನಾ ಪ್ರಕರಣಗಳು ಮಾ.8ರಿಂದ ಕಳೆದ ಎರಡು ವಾರದ ಅವಧಿಯಲ್ಲಿ ಹೆಚ್ಚುತ್ತಿವೆ. ಪಾಸಿಟಿವಿಟಿ ದರ ಶೇ.2.77ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ನಿಯಂತ್ರಿಸಲು ಪರೀಕ್ಷೆ, ಪತ್ತೆ, ನಿಗಾ, ಚಿಕಿತ್ಸೆ ಹಾಗೂ ಲಸಿಕೆಗೆ ಒತ್ತು ಕೊಡಬೇಕು ಎಂದು ಸೂಚಿಸಲಾಗಿದೆ.
ಏನು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು?
- ನಿಗದಿತವಾಗಿ ಪರೀಕ್ಷೆಗಳನ್ನು ನಡೆಸಬೇಕು.
- ಹೊಸದಾಗಿ ಹಾಗೂ ಕ್ಲಸ್ಟರ್ ಮಾದರಿಯಲ್ಲಿ ವರದಿಯಾಗುವ ಸೋಂಕು ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು.
- ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಎಚ್ಚರ ವಹಿಸಬೇಕು.
- ಐಎಲ್ಐ (ವಿಷಮ ಶೀತ ಜ್ವರ) ಹಾಗೂ ಸಾರಿ (ತೀವ್ರ ಉಸಿರಾಟ ಸಮಸ್ಯೆ) ಪ್ರಕರಣಗಳನ್ನು ಪತ್ತೆ ಹಚ್ಚಬೇಕು.
- ಅಂತಾರಾಷ್ಟ್ರೀಯ ಪ್ರಯಾಣಿಕರು, ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್ ಪ್ರಕರಣಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಬೇಕು.
- ಅರ್ಹರಿಗೆ ಲಸಿಕೆ ಹೆಚ್ಚಿಸಬೇಕು
ಇದನ್ನೂ ಓದಿ: kidney disease: ಕೊರೊನಾ ಕಾಣಿಸಿಕೊಂಡವರಲ್ಲಿ ಕಾಡುತ್ತಿದೆ ಕಿಡ್ನಿ ಸಮಸ್ಯೆ; ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಗ್ಯಾರಂಟಿ