Site icon Vistara News

Coronavirus | ಬಿಎಫ್​.7 ಬಗ್ಗೆ ಭೀತಿ ಬೇಡ: ಬಹುತೇಕ ಜನರಲ್ಲಿದೆ ಇಮ್ಯುನಿಟಿ, ಆರೋಗ್ಯ ಕಾರ್ಯಕರ್ತರಿಗೆ 4ನೇ ಡೋಸ್‌ ಬೇಕಿಲ್ಲ

ಡಾ.ಸಿ.ಎನ್‌.ಮಂಜುನಾಥ್‌

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು (Corona virus) ಬಿಟ್ಟುಬಿಡದೆ ಕಾಡುತ್ತಿದೆ. ಹೀಗಾಗಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 350 ಆರೋಗ್ಯ ಕಾರ್ಯಕರ್ತರಿಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರತಿಕಾಯಗಳ ಅಧ್ಯಯನ ನಡೆಸಲಾಗಿದೆ.

ಹೊಸದಾಗಿ ಪತ್ತೆ ಆಗಿರುವ ಬಿಎಫ್.7 ರೂಪಾಂತರಿ ವೈರಸ್ ಜತೆಗೆ ಓಮಿಕ್ರಾನ್ ವೈರಸ್ ಪ್ರಪಂಚದ ಕೆಲವು ಪ್ರದೇಶದಲ್ಲಿ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಜಯದೇವ ಸಂಸ್ಥೆಯು ತನ್ನ 350 ಜನ ಆರೋಗ್ಯ ಸಿಬ್ಬಂದಿಗೆ ಪ್ರತಿಕಾಯ ವೃದ್ಧಿ (Study of Neutralising Antibodies) ಬಗ್ಗೆ ಅಧ್ಯಯನ ನಡೆಸಿದೆ.

ಜನವರಿ 2022ರಲ್ಲಿ ಕೋವಿಶೀಲ್ಡ್ ಬೂಸ್ಟರ್ ಡೋಸ್ ಪಡೆದಿದ್ದ ಜಯದೇವ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ವಾರ್ಡ್ ಸಹಾಯಕರು ಸೇರಿದಂತೆ 350 ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ. ರಕ್ತದಲ್ಲಿನ ಪ್ರತಿಕಾಯಗಳನ್ನು ಅಳೆಯುವ ಕಿಣ್ವ-ಸಂಯೋಜಿತ ಇಮ್ಯುನೊಸಾರ್ಬೆಂಟ್ ಅಸ್ಸೇ ಅಥವಾ ಎಲಿಸಾ (ELISA) ಮಾದರಿಯಂತೆ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಅಧ್ಯಯನದಲ್ಲಿ ಗುಂಪಿನ ಶೇಕಡಾ 99.4%ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಉತ್ತಮ ಪ್ರತಿಕಾಯ ಕಂಡುಬಂದಿದೆ. ಈ ಪೈಕಿ 19 ರಿಂದ 60 ವಯಸ್ಸಿನ 148 ಜನ ಪುರುಷರಲ್ಲಿ 12% ಹಾಗೂ 202 ಮಹಿಳೆಯರಲ್ಲಿ 58% ಪ್ರತಿಕಾಯ ವೃದ್ಧಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ | Namma Metro Pillar | ಮೆಟ್ರೋ ಪಿಲ್ಲರ್‌ಗೆ ಬಲಿಯಾದ ತಾಯಿ-ಮಗುವಿನ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ

ನಾಲ್ಕನೇ ಡೋಸ್‌ ಬೇಕಿಲ್ಲ
ಬೂಸ್ಟರ್ ಡೋಸ್ ಪಡೆದ 350 ಆರೋಗ್ಯ ಕಾರ್ಯಕರ್ತರ ಪೈಕಿ 90.4 ರಷ್ಟು ಜನರಲ್ಲಿ ಗಣನೀಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರತಿಕಾಯ ಕಂಡುಬಂದಿದೆ. ಜತೆಗೆ ವೃದ್ಧಿಯಾಗಿರುವ ಪ್ರತಿಕಾಯಗಳು ಒಂದು ವರ್ಷಗಳ ಕಾಲ ದೇಹದಲ್ಲೇ ಇದೆ ಅನ್ನುವುದು ಸಂತೋಷದ ಸಂಗತಿ ಆಗಿದೆ. ಹಲವರಲ್ಲಿ ಗೊಂದಲ ಸೃಷ್ಟಿಸಿರುವ ನಾಲ್ಕನೇ ಡೋಸ್‌ ಲಸಿಕೆ ಅಗತ್ಯವಿಲ್ಲ ಎಂಬುದನ್ನು ಈ ಅಧ್ಯಯನ ತಿಳಿಸಿದೆ. ಜತೆಗೆ ಯಾರೂ ಬೂಸ್ಟರ್ ಡೋಸ್ ತೆಗೆದುಕೊಂಡಿಲ್ಲ, ಅವರು ಕಡ್ಡಾಯವಾಗಿ ಕೂವೀಡ್-19 ಲಸಿಕೆ ಪಡೆಯುವುದು ಅವಶ್ಯಕ ಎಂದು ವೈದ್ಯರು ತಿಳಿಸಿದ್ದಾರೆ.

ಬೂಸ್ಟರ್ ಡೋಸ್ ಪಡೆದ ನಂತರ ಲಸಿಕೆಯ ಮಧ್ಯಸ್ಥಿಕೆಯ ಪ್ರತಿಕಾಯ ಪ್ರತಿಕ್ರಿಯೆಯು ಎಷ್ಟು ಕಾಲ ಉಳಿಯುತ್ತದೆ ಹಾಗೂ ಬೂಸ್ಟರ್ ಡೋಸ್‌ ಪಡೆಯುವುದು ಎಷ್ಟು ಉಪಯುಕ್ತ ಎನ್ನುವ ಬಗ್ಗೆ ಅಧ್ಯಯನ ನಿಖರವಾದ ಮತ್ತು ಸ್ಪಷ್ಟವಾದ ಮಾಹಿತಿಯನ್ನು ನೀಡಿದೆ. ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನವೀನ ಹಾಗೂ ಸಹ ಪ್ರಾಧ್ಯಾಪಕರಾದ ಡಾ ನಂದಿನಿ, ಡಾ ಕವಿತ, ಮತ್ತು ಉಪನ್ಯಾಸಕರಾದ ಪ್ರಫುಲ್ಲಾ ಕುಮಾರಿ ಅವರ ತಂಡ ನಿರಂತರ ಅಧ್ಯಯನ ನಡೆಸಿ, ವಸ್ತುನಿಷ್ಠ ಪ್ರತಿಕಾಯ ಅಧ್ಯಯನ ವರದಿಯನ್ನು ಜನರಿಗೆ ತಲುಪುವಂತೆ ಮಾಡಿರುವುದನ್ನು ಡಾ ಮಂಜುನಾಥ್‌ ಶ್ಲಾಘಸಿದ್ದಾರೆ.

ಇದನ್ನೂ ಓದಿ | Namma Metro Pillar | ಮೆಟ್ರೋ ಪಿಲ್ಲರ್‌ ಕುಸಿತ: ಮೂವರು ಎಂಜಿನಿಯರ್‌ಗಳ ಅಮಾನತು; ಮೂರೇ ದಿನದಲ್ಲಿ ವರದಿ ಸಲ್ಲಿಸಲು ಎನ್‌ಸಿಸಿ ಕಂಪನಿಗೆ ನೋಟಿಸ್‌

Exit mobile version