Site icon Vistara News

Coronavirus | ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಕೊರತೆ; ಕಾರ್ಬಿವ್ಯಾಕ್ಸ್‌ ಬೂಸ್ಟರ್‌ ಡೋಸ್‌ಗೆ ಜನ ಹಿಂದೇಟು

Coronavirus

ಬೆಂಗಳೂರು: ದೇಶಾದ್ಯಂತ ಕೊರೊನಾ ೪ನೇ ಅಲೆ ಪ್ರಕರಣಗಳು (Coronavirus) ಕಂಡು ಬರುತ್ತಿದ್ದು, ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಧ್ಯೆ ಪ್ರತಿರೋಧಕ ಶಕ್ತಿ ಹೊಂದಿರುವ ಕೋವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಕೊರತೆ ಎದುರಾಗಿದ್ದು, ಬೆಂಗಳೂರಿನಲ್ಲಿ ಹಲವು ಕಡೆ ನೋ ಸ್ಟಾಕ್‌ ಬೋರ್ಡ್‌ ಕಂಡುಬರುತ್ತಿದೆ. ಇನ್ನು ಇವುಗಳಿಗೆ ಪರ್ಯಾಯವಾಗಿ ಈಗಾಗಲೇ ಚಾಲ್ತಿಯಲ್ಲಿರುವ “ಕಾರ್ಬಿವ್ಯಾಕ್ಸ್‌” ಅನ್ನು ಬೂಸ್ಟರ್‌ ಡೋಸ್‌ ಆಗಿ ಪಡೆಯಲು ವೈದ್ಯರು ಸೂಚಿಸುತ್ತಿದ್ದರೂ ಜನ ಮಾತ್ರ ಹಿಂದೇಟು ಹಾಕುತ್ತಿರುವ ಬಗ್ಗೆ ವರದಿಯಾಗಿದೆ.

ಈಗಾಗಲೇ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಕೋವಿಡ್‌-೧೯ರ ರೂಪಾಂತರ ವೈರಾಣು ಹೆಚ್ಚಾಗಿ ಬಾಧಿಸದೇ ಇರಲಿ ಎಂಬ ಕಾರಣಕ್ಕೆ ನಾಗರಿಕರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆಯಿಂದ ಸೂಚಿಸಲಾಗಿದೆ. ಆದರೆ, ರಾಜಧಾನಿಯ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಕೊರತೆ ಕಂಡುಬಂದಿದೆ. ಆದರೆ, ಬೂಸ್ಟರ್ ಡೋಸ್‌ (ಮನ್ನೆಚ್ಚರಿಕಾ ಡೋಸ್‌) ಆಗಿ ಬೇರೊಂದು ಲಸಿಕೆಯನ್ನು ಪಡೆಯಿರಿ ಎಂದರೂ ಜನ ಮಾತ್ರ ಕೇಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮೊದಲ ಮತ್ತು ಎರಡನೇ ಡೋಸ್‌ ಆಗಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಬೂಸ್ಟರ್‌ ಡೋಸ್‌ ಪಡೆಯಲು ಅದೇ ಕಂಪನಿಯ ಲಸಿಕೆ ದೊರೆಯುತ್ತಿಲ್ಲ. ವ್ಯಾಕ್ಸಿನ್‌ ಕೊರತೆಯ ಹಿನ್ನೆಲೆಯಲ್ಲಿ ʼಕಾರ್ಬಿವ್ಯಾಕ್ಸ್‌ʼ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ಪಡೆಯಲು ವೈದ್ಯರು ಸೂಚಿಸುತ್ತಿದ್ದಾರೆ. ಆದರೆ, ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಜನರು ಕಾರ್ಬಿವ್ಯಾಕ್ಸ್‌ ಬೂಸ್ಟರ್‌ ಡೋಸ್‌ ಪಡೆಯಲು ಜನ ನಿರಾಕರಿಸುತ್ತಿದ್ದಾರೆ.

ಇದನ್ನೂ ಓದಿ | Coronavirus | ಚೀನಾದಿಂದ ತಮಿಳುನಾಡಿಗೆ ಬಂದ 6 ವರ್ಷದ ಬಾಲಕಿ, ಆಕೆಯ ತಾಯಿಗೆ ಕೊರೊನಾ

ಕಾರ್ಬಿವ್ಯಾಕ್ಸ್‌ ಬೂಸ್ಟರ್ ಡೋಸ್ ಪಡೆಯಬಹುದು
18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಫಲಾನುಭವಿಗಳು ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆಯ 2ನೇ ಡೋಸ್‌ ಅನ್ನು ಪಡೆದು 6 ತಿಂಗಳು ಅಥವಾ 25 ವಾರಗಳನ್ನು ಪೂರೈಸಿದ ನಂತರ ವಿಜಾತೀಯ ಕೋವಿಡ್‌ ಲಸಿಕೆ (Heterologous) ಕಾರ್ಬಿವ್ಯಾಕ್ಸ್ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್ ಆಗಿ ಪಡೆಯಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ.

ಆದಾಗ್ಯೂ ಈ ಹಿಂದೆ ನೀಡಿದ ಮಾರ್ಗಸೂಚಿಯಂತೆ ಕೋವಿಶೀಲ್ಡ್‌, ಕೊವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ ಪಡೆದ ನಂತರ ಅದೇ ಜಾತಿಯ (Honologous) ಲಸಿಕೆಯನ್ನು ಪಡೆಯುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಲಭ್ಯವಿದ್ದರೆ ಅದೇ ಮಾದರಿಯ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಕೋವಿಶೀಲ್ಡ್‌ಗೆ ಹೆಚ್ಚಿದ ಡಿಮ್ಯಾಂಡ್
ಬೆಂಗಳೂರಲ್ಲಿ ಕೋವಿಶೀಲ್ಡ್ ಲಸಿಕೆಗೆ ಡಿಮ್ಯಾಂಡ್‌ ಹೆಚ್ಚಿದ್ದು, ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಕೆಲವು ಲಸಿಕಾ ಕೇಂದ್ರಗಳ ಬಳಿ ಕೋವಿಶೀಲ್ಡ್‌ಗೆ ‘ನೋ ಸ್ಟಾಕ್’ ಬೋರ್ಡ್ ಅನ್ನು ಹಾಕಲಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೋ ವ್ಯಾಕ್ಸಿನ್ ಲಭ್ಯವಿದ್ದರೂ, ಬೂಸ್ಟರ್‌ ಡೋಸ್‌ ಆಗಿ ಕೋವಿಶೀಲ್ಡ್‌ ವ್ಯಾಕ್ಸಿನ್ನೇ ಬೇಕು ಎಂದು ಜನರು ಕೇಳುತ್ತಿದ್ದಾರೆ. ಅದರ ಸ್ಟಾಕ್ ಇಲ್ಲದೇ ಇರುವುದರಿಂದ ಜನ ವಾಪಸಾಗುತ್ತಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಬುಧವಾರ (ಡಿ.೨೮) ಬೆಳಗ್ಗೆಯಿಂದ ಕೇವಲ 26 ಮಂದಿ ಲಸಿಕೆ ಪಡೆದಿದ್ದಾರೆ. ಹಲವರು ಕೋವಿಶೀಲ್ಡ್ ಕೇಳಿದ್ದು, ಲಭ್ಯವಿಲ್ಲ ಎಂದು ತಿಳಿದ ಕೂಡಲೇ ಅಲ್ಲಿಂದ ವಾಪಸ್ ಹೋಗಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ | Coronavirus | ರಾಜ್ಯದಲ್ಲಿದೆ ಎಂಟೂವರೆ ಲಕ್ಷ ಡೋಸ್‌: ಆಸ್ಪತ್ರೆಗಳಲ್ಲಿ ಸಿದ್ಧತೆ ಪರಿಶೀಲಿಸಿದ ಸಚಿವ ಡಾ. ಸುಧಾಕರ್‌

Exit mobile version