ಬೆಂಗಳೂರು: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ (Neharu Olekar) ಮತ್ತು ಅವರ ಪುತ್ರರಾದ ಮಂಜುನಾಥ್, ದೇವರಾಜ್ ಓಲೆಕಾರ್ಗೆ ಜೈಲು ಶಿಕ್ಷೆಯಾಗಿದೆ. 50 ಲಕ್ಷ ರೂ. ಮೊತ್ತದ ಕಾಮಗಾರಿಗಳನ್ನು ಅಕ್ರಮವಾಗಿ ಪುತ್ರರಿಗೆ ನೀಡಿದ ಆರೋಪದಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ತೀರ್ಪು ಪ್ರಕಟಿಸಿದೆ.
ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿತ್ತು. 2009 ರಿಂದ 2011 ರ ಅವಧಿಯಲ್ಲಿ ಅಕ್ರಮ ನಡೆದಿತ್ತು. ಕಾಂಕ್ರೀಟ್ ರಸ್ತೆ ಸೇರಿ 50 ಲಕ್ಷ ರೂಪಾಯಿ ಮೊತ್ತದ 10 ಕಾಮಗಾರಿಗಳನ್ನು ಶಾಸಕ, ತಮ್ಮ ಮಕ್ಕಳಿಗೆ ನೀಡಿ ಅನುದಾನ ಬಿಡುಗಡೆ ಮಾಡಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿ ವಿಶೇಷ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಜತೆಗೆ ದಂಡ ಕೂಡ ವಿಧಿಸಲಾಗಿದೆ. ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗುತ್ತದೆ.