ಬೆಂಗಳೂರು: ಬೆನ್ನು ಬೆನ್ನಿಗೆ ಅವಾಂತರಗಳನ್ನು ಮಾಡಿಕೊಳ್ಳೂತ್ತಿರುವ ಕೃಷಿ ಸಚಿವ ಚಲುವರಾಯ ಸ್ವಾಮಿ (Minister Chaluvarayaswamy) ಅವರು ಇನ್ನೊಂದು ಹಗರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಸ್ ಚಾಲಕನ ಆತ್ಮಹತ್ಯೆ, ಬೆದರಿಕೆ ಕರೆ ಮತ್ತಿತರ ಕಾರಣಕ್ಕೆ ಸುದ್ದಿಯಲ್ಲಿದ್ದ ಸಚಿವರ ಮೇಲೆ ಈಗ ಲಂಚ ಬೇಡಿಕೆಯ ಗಂಭೀರ ಆರೋಪ ಕೇಳಿಬಂದಿದೆ. ಕೃಷಿ ಸಚಿವರು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು (Agriculture department officers) ನೇರವಾಗಿ ರಾಜ್ಯಪಾಲರಿಗೇ ದೂರು (Complaint to Governor) ನೀಡಿದ್ದಾರೆ. ಇದು ಸರ್ಕಾರಕ್ಕೆ ಮುಜುಗರ ತಂದಿರುವ ಜತೆಗೆ ವಿರೋಧ ಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ರಾಜ್ಯಪಾಲರು ಈ ಬಗ್ಗೆ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ನಿರ್ದೇಶಕರು ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ. ಕೃಷಿ ಸಚಿವರು 6 ರಿಂದ 8 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರ ಕಿರಿಕಿರಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೇರವಾಗಿ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ರೀತಿ ಅಧಿಕಾರಿಗಳೇ ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿರುವುದು ಅತ್ಯಂತ ವಿಶೇಷವಾಗಿದೆ. ಅಷ್ಟೇ ಅಲ್ಲ, ಲಂಚದ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷಕುಡಿಯುವುದಾಗಿ ದೂರಿನ ಹೇಳಲಾಗಿದೆ.
ದೂರು ಕೊಟ್ಟವರು ಯಾರು?
ಮಂಡ್ಯ, ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿಗಳು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ತಲಾ 6ರಿಂದ 8 ಲಕ್ಷ ರೂ.ಗಳಿಗಾಗಿ ಬೇಡಿಕೆ ಇಡಲಾಗಿದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜಭವನದಿಂದ ಸರ್ಕಾರಕ್ಕೆ ಪತ್ರ
ರಾಜಭವನವು ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈ ಪತ್ರದ ಬಗ್ಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ.
ವಿರೋಧ ಪಕ್ಷಗಳಿಗೆ ಅಸ್ತ್ರ, ಕಾಂಗ್ರೆಸ್ ನಡೆಯೇನು?
ಚಲುವರಾಯ ಸ್ವಾಮಿ ಅವರು ಆರಂಭದಿಂದಲೇ ಸರ್ಕಾರಕ್ಕೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕಂಡಕ್ಟರ್ / ಚಾಲಕರೊಬ್ಬರ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಅವರ ಹೆಸರು ಬಂದಿತ್ತು. ಜೆಡಿಎಸ್ ಪಕ್ಷದವನು ಎಂಬ ಕಾರಣಕ್ಕೆ ವರ್ಗಾವಣೆ ಮಾಡಿದ ಘಟನೆ ಅಲ್ಲೇ ತಣ್ಣಗಾಗಿತ್ತು.
ಈ ನಡುವೆ, ಈಗಾಗಲೇ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಚಲುವರಾಯ ಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದೀಗ ಕೃಷಿ ಅಧಿಕಾರಿಗಳೇ ನೇರವಾಗಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು ವಿಪಕ್ಷಗಳ ಕೈಗೆ ದೊಡ್ಡ ಅಸ್ತ್ರ ಸಿಕ್ಕಿದಂತಾಗಲಿದೆ.
ಇದನ್ನೂ ಓದಿ: Bus Driver : ಚಲುವರಾಯಸ್ವಾಮಿಗೆ ಕಂಟಕವಾದ ಬಸ್ ಡ್ರೈವರ್ ಟ್ರಾನ್ಸ್‌ಫರ್; ಏನಿದು ಪಾಲಿಟಿಕ್ಸ್?
ಹೈಕಮಾಂಡ್ ಯಾವ ಕಾರಣಕ್ಕೂ ಭ್ರಷ್ಟಾಚಾರದ ಆರೋಪ ಕೇಳಿಬರಬಾರದು ಎಂದು ಸೂಚನೆ ನೀಡಿದ್ದರೂ ಕಾಂಗ್ರೆಸ್‌ನಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ. ಈ ಹಿಂದೆ ಸಣ್ಣ ಪುಟ್ಟ ಆರೋಪಗಳು ಕೇಳಿಬಂದಾಗಲೂ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ಈ ಚಲುವರಾಯ ಸ್ವಾಮಿ ಅವರ ರಾಜೀನಾಮೆ ಪಡೆಯುತ್ತದಾ ಎಂದು ಕಾದು ನೋಡಬೇಕಾಗಿದೆ.