ಮೈಸೂರು: ಭ್ರಷ್ಟಾಚಾರ ಮೊದಲಿನಿಂದಲೂ ಇದೆ. ಆದರೆ, ಈಗ ಮೊದಲಿಗಿಂತ ತುಂಬಾ ಹೆಚ್ಚಾಗಿದೆ. ತ್ವರಿತ ವೇಗದಲ್ಲಿ ಹೆಚ್ಚಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಮಾಜದ ವಿವಿಧ ವಲಯಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಹೇಳಿದರು.
ʻʻಅತಿಯಾದ ದುರಾಸೆಯಿಂದಾಗಿ ಭ್ರಷ್ಟಾಚಾರ ಎಲ್ಲೆಡೆಯೂ ಹೆಚ್ಚುತ್ತಿದೆ. ದುರಾಸೆ ಮೊದಲೂ ಇತ್ತು, ಈಗ ಇನ್ನಷ್ಟು ಜಾಸ್ತಿಯಾಗಿದೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆʼʼ ಎಂದು ಬೇಸರ ವ್ಯಕ್ತಪಡಿಸಿದರು ಸಂತೋಷ್ ಹೆಗ್ಡೆ.
ರಾಜ್ಯದಲ್ಲಿ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಮರುಸ್ಥಾಪನೆ ಮಾಡಿರುವ ಕ್ರಮವನ್ನು ಸ್ವಾಗತಿಸಿರುವ ಅವರು, ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಜಾರಿಗೆ ತಂದಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.. ಆದರೆ ಸುಪ್ರೀಕೋರ್ಟ್ ಎಸಿಬಿ ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಈಗ ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.
ʻʻಭ್ರಷ್ಟಾಚಾರ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ. ಭ್ರಷ್ಟಾಚಾರದ ವಿರುಧ್ಧ ಹೋರಾಡುವ ಸಾಮರ್ಥ್ಯ ಲೋಕಾಯುಕ್ತಕ್ಕಿದೆ. ಲೋಕಾಯುಕ್ತ ಕೇಳುವ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಬೇಕುʼʼ ಎಂದು ಅವರು ಸಲಹೆ ನೀಡಿದರು.
ʻʻಯಾವುದೋ ಖಾಸಗಿ ವ್ಯಕ್ತಿಯನ್ನು ಬಲೆಗೆ ಹಾಕುವುದಕ್ಕಿಂತಲೂ ಸರ್ಕಾರದೊಳಗೆ ಇದ್ದುಕೊಂಡು ಲಂಚ ಸ್ವೀಕರಿಸುವವರ ವಿರುದ್ಧ ಕ್ರಮ ಆಗಬೇಕು. ಇದಕ್ಕಾಗಿ ಲೋಕಾಯುಕ್ತ ಕಾಯ್ದೆಯ ಕೆಲವು ನಿಯಮಗಳು ಬದಲಾಗಬೇಕಿದೆ. ಲೋಕಾಯುಕ್ತ ಬಲಪಡಿಸಲು ಎಲ್ಲ ರೀತಿಯ ಅವಕಾಶಗಳು ಇವೆ. ಸರ್ಕಾರಕ್ಕೂ ಸಮಾಯಾವಕಾಶದ ಅಗತ್ಯವಿದೆ. ಕಾಲಾವಕಾಶ ಕೊಟ್ಟು ನೋಡೋಣʼʼ ಎಂದು ಹೇಳಿದರು ಸಂತೋಷ್ ಹೆಗ್ಡೆ.
ಇದನ್ನೂ ಓದಿ | ಲೋಕಾಯುಕ್ತ ಬಲವರ್ಧನೆ, ಖಾಲಿ ಸ್ಥಾನ ತುಂಬಲು ಸಂಪುಟ ಸಭೆಯಲ್ಲಿ ನಿರ್ಧಾರ