ಬೆಂಗಳೂರು: ರಾಜ್ಯದಲ್ಲೀಗ “ದಮ್” ಪಾಲಿಟಿಕ್ಸ್ ಶುರುವಾಗಿದೆ. ಬಿಜೆಪಿಯ ವಿಜಯ ಯಾತ್ರೆಯನ್ನು ದಮ್ ಇದ್ದರೆ ಕಾಂಗ್ರೆಸ್‌ನವರು ತಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂಗೆ ಹಲವಾರು “ದಮ್” ಸವಾಲುಗಳನ್ನು ಹಾಕಿದ್ದಾರೆ. ಈ ಮೂಲಕ ಭ್ರಷ್ಟಾಚಾರದ (Corruption Politics) ವಿರುದ್ಧದ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಈಗ “ದಮ್” ಪದ ಸೇರ್ಪಡೆಯಾಗಿದೆ.
“ದಮ್ ಇದ್ದರೆ ಕಾಂಗ್ರೆಸ್‌ನವರು ಬಿಜೆಪಿ ಯಾತ್ರೆ ನಿಲ್ಲಿಸಲಿ ಎಂದು ಹೇಳಿರುವ ಮುಖ್ಯಮಂತ್ರಿಯವರೇ, ನಿಮಗೆ ನಾನು ಸವಾಲು ಹಾಕುತ್ತಿದ್ದೇನೆ, ನಿಮಗೆ ದಮ್ ಇದ್ದರೆ ಚರ್ಚೆಗೆ ಬನ್ನಿ. ಯಾವುದೇ ವೇದಿಕೆಯಾದರೂ ಸರಿ, ಚಾನೆಲ್‌ನಲ್ಲಾದರೂ ಸರಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. ನಿಮಗೆ ದಮ್ ಇದ್ದರೆ ಪ್ರಣಾಳಿಕೆ ಬಗ್ಗೆ ಮಾತನಾಡೋಣ. ಪ್ರತಿ ದಿನ ನಾವು ಪ್ರಶ್ನೆ ಮಾಡುತ್ತಿದ್ದೇವೆ. ನಿಮಗೆ ದಮ್ ಇದ್ದರೆ ಉತ್ತರ ಕೊಡಿ ಎಂದು ಸಿವಿ ರಾಮನ್ ನಗರದ ಕಗ್ಗದಾಸಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂದಿರಾ ಗಾಂಧಿ ಅವರ ೩೮ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಬೊಮ್ಮಾಯಿಗೆ ಈ ಸವಾಲು ಹಾಕಿದರು.
ಇನ್ನು ಹಗರಣದ ಬಗ್ಗೆ ಮಾತನಾಡುವ ನೀವು, ದಮ್ ಇದ್ದರೆ ಕಾಂಗ್ರೆಸ್ ಮತ್ತು ಬಿಜೆಪಿ ಕಾಲದ ಎಲ್ಲ ಹಗರಣದ ಬಗ್ಗೆ ತನಿಖೆ ಮಾಡಿಸಿ ಎಂದೂ ಮುಖ್ಯಮಂತ್ರಿ ಬೊಮ್ಮಾಯಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ | BJP OBC Convention | ಹಿಂದುಳಿದವರ ಮತ ಪಡೆದು ರಾಜ್ಯವೇ ಹಿಂದುಳಿಯುವಂತೆ ಮಾಡಿದ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಇಂದಿರಾ ಕ್ಯಾಂಟೀನ್ ಮುಚ್ಚಿದ ಕಡೆ ಪ್ರತಿಭಟಿಸಿ
ಕಾಂಗ್ರೆಸ್ ಸರ್ಕಾರವಿದ್ದಾಗ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಲಾಗುತ್ತಿದೆ. 40 ಕಡೆ ಮುಚ್ಚುತ್ತಿರುವ ಬಗ್ಗೆ ತಿಳಿದುಬಂದಿದೆ. ಹೀಗಾಗಿ ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚಲಾಗುತ್ತಿದೆಯೋ ಅಲ್ಲೆಲ್ಲ ನಮ್ಮ ಕಾರ್ಯಕರ್ತರು ತೆರಳಿ ಧರಣಿ ಮಾಡಬೇಕು ಎಂದು ನಾನು ಕರೆ ಕೊಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಬಾರದು ಎಂದು ಡಿಕೆಶಿ ಒತ್ತಾಯಿಸಿದರು.
ಸೋಲಾರ್ ಹಗರಣ ಸಿಬಿಐ ತನಿಖೆಯಾಗಲಿ, ಹೆದರಲ್ಲ
ಸೋಲಾರ್ ಪ್ಲಾಂಟ್ ವಿಚಾರವಾಗಿ ಹಗರಣವಾಗಿದೆ. ಈ ಬಗ್ಗೆ ಕಾದು ನೋಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕಾದು ನೋಡಿ ಎಂಬ ಹೇಳಿಕೆ ನೀಡಿದ್ದಾರೆ. ಸೋಲಾರ್ ಮಾತ್ರವಲ್ಲ ಯಾವ ಹಗರಣವನ್ನು ಬೇಕಿದ್ದರೂ ತನಿಖೆ ಮಾಡಿಸಲಿ, ನಾನು ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೆ ಬೇಕಾದರೂ ಹಾಕಲಿ. ನನ್ನ ಅವಧಿಯಲ್ಲಿ ನಾನು ಎಲ್ಲವನ್ನು ಪಾರದರ್ಶಕವಾಗಿ ಮಾಡಿದ್ದೇವೆ. ನಾನೇನು ಮಾಡಬಾರದ್ದು ಮಾಡಿಲ್ಲ. ಸಿಬಿಐ ತನಿಖೆಯನ್ನು ಬೇಕಿದ್ದರೂ ಮಾಡಿಕೊಳ್ಳಲಿ, ನನ್ನ ಇಲಾಖೆಯಲ್ಲಿ ನಾನು ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಸುಮ್ಮನೆ ಕೆಟ್ಟ ಲೇಪ ಹಚ್ಚಲು ಹೀಗೆ ಮಾಡುತ್ತಿದ್ದಾರೆ. ನಾನು ಇದ್ದಾಗ ಸೋಲಾರ್ ವಿದ್ಯುತ್ ಹೆಚ್ಚಾಗಿ ಉತ್ಪಾದನೆ ಆಗಿತ್ತು. ಅಧಿಕಾರಿಗಳಿಗೆ ಎಲ್ಲವೂ ಗೊತ್ತಿದೆ. ಅವರ ಕಾಲದಲ್ಲಿ ಏನೇನಾಗಿದೆ ಎಂದು ಸಮಯ ಬಂದಾಗ ಹೇಳುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ | ಪತ್ರಕರ್ತರಿಗೆ ಲಂಚ ಎನ್ನುವುದು ಕಾಂಗ್ರೆಸ್ ಟೂಲ್‌ಕಿಟ್‌ನ ಸುಳ್ಳು ಎಂದ ಸಿಎಂ ಬೊಮ್ಮಾಯಿ: ಕಾಂಗ್ರೆಸ್‌ಗೆ ನೋಟಿಸ್